- ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದೆ
- ʼನನ್ನ ಶ್ರಮ ಅರ್ಥ ಮಾಡಿಕೊಳ್ಳದ ನಾಯಕರು ನನ್ನನ್ನು ಹೊರದಬ್ಬಿದ್ದಾರೆʼ
ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೆ, ಇದನ್ನೆಲ್ಲ ಅರ್ಥಮಾಡಿಕೊಳ್ಳದೇ ಮೂಲ ಬಿಜೆಪಿಗರನ್ನು ಪಕ್ಷದಿಂದ ಹೊರಹಾಕಲಾಗುತ್ತಿದೆ. ಇದು ಮಾನಸಿಕವಾಗಿ ಬೇಸರ ತರಿಸಿದೆ. ಈಗ ನನ್ನ ಮನೆಯಿಂದಲೇ ನನ್ನ ಹೊರದಬ್ಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಭಾನುವಾರ ತಮ್ಮ ಬೆಂಬಲಿಗರ ಜೊತೆಗೂಡಿ ಬಂದ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
“ನಾನು ದೊಡ್ಡ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ವಯಸ್ಸಿದೆ, ಅನಾರೋಗ್ಯವಿಲ್ಲ, ಸಿಡಿ ವಿಚಾರ ಇಲ್ಲ. 30 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಿದ್ದೇನೆ. ನನಗೆ ಶಾಸಕನಾಗಿ ಕೆಲಸ ಮಾಡೋ ಅವಕಾಶ ಕೊಟ್ಟರೆ ಸಾಕಿತ್ತು. ಆದರೆ ಯಾವುದೇ ಮುನ್ಸೂಚನೆ ಇಲ್ಲದೇ ಈ ರೀತಿ ಮಾಡಿರೋದು ಬೇಸರ ತಂದಿದೆ” ಎಂದರು.
ಯಾವ ಮಿಸ್ಟೇಕ್ಸ್ ಇದೆ ಅಂತ ನನ್ನ ಟಿಕೆಟ್ ತಪ್ಪಿಸಿದ್ದಾರೆ? ಈ ಬಗ್ಗೆ ರಾಜ್ಯ ನಾಯಕರು, ಪಕ್ಷದ ವರಿಷ್ಠರು ಸ್ಪಷ್ಟನೆ ನೀಡಲೇ ಇಲ್ಲ. ಬಿ ಎಸ್ ಯಡಿಯೂರಪ್ಪ ನನ್ನ ಪರವಾಗಿ ಮಾತನಾಡಿದ್ದರು. ಆದರೆ ಈಗ ಮೇಲಿನ ನಾಯಕರ ಕಾರಣದಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಯಾಕೆ ಈ ಹಿಂದೆ ಕೆಜೆಪಿ ಸೇರಿದ್ದರು? ಅವರು ಉತ್ತರಿಸಲಿ” ಎಂದರು.
ಕೊನೆ ಸಂಧಾನಕ್ಕೂ ಬಗ್ಗದ ಶೆಟ್ಟರ್
ಜಗದೀಶ್ ಶೆಟ್ಟರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಬಂದ ವೇಳೆ ಕಾಗೇರಿ ಅವರು ಸಂಧಾನಕ್ಕೆ ಮುಂದಾದರು.
ತಮ್ಮ ಖಾಸಗಿ ಕೊಠಡಿಕಗೆ ಜಗದೀಶ್ ಶೆಟ್ಟರ್ ಅವರನ್ನು ಕರೆದುಕೊಂಡು ಹೋಗಿ ಒಂದು ಗಂಟೆ ಕಾಲ ಚರ್ಚಿಸಿದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಗೇರಿ ಅವರಿಗೆ ಕಾಲ್ ಮಾಡಿ ಶೆಟ್ಟರ್ ಅವರ ಮನವೊಲಿಸಲು ಪ್ರಯತ್ನಪಟ್ಟರು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ, ಯಾವ ಸಂಧಾನಕ್ಕೂ ಬಗ್ಗದ ಶೆಟ್ಟರ್ ಕೊನೆಗೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಅವರ ಕಚೇರಿಯಿಂದ ಹೊರ ನಡೆದಿದ್ದಾರೆ.