- ಸಿದ್ದರಾಮಯ್ಯ ಸಹೋದರನ ಮಕ್ಕಳ ವಿರುದ್ಧ ಪ್ರಕರಣ
- ಪ್ರಚೋದನಗೆ ಒಳಗಾಗದಂತೆ ಯತೀಂದ್ರ ಸಿದ್ದರಾಮಯ್ಯ ಕರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಕೆ ಎಂ ನಾಗೇಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಆರೋಪಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ ಆರೋಪವನ್ನು ತಳ್ಳಿಹಾಕಿದ್ದಾರೆ.
ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಕಾರ್ಯಕರ್ತರ ನಡುವೆ ಗುರುವಾರ ಗಲಾಟೆ ನಡೆದಿದೆ ಎನ್ನಲಾಗಿದೆ. ಬಿಜೆಪಿಯ ನಾಗೇಶ್ ಗಾಯಗೊಂಡಿದ್ದು, ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಈ ಕುರಿತು ಪ್ರತಾಪ್ ಸಿಂಹ ಮತ್ತು ವಿ ಸೋಮಣ್ಣ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಹರಿಹಾಯ್ದಿದ್ದರು. ಇದೀಗ ಯತೀಂದ್ರ ಅವರು ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
“ಸಿದ್ದರಾಮನಹುಂಡಿಯಲ್ಲಿ ಕಾರು – ಬೈಕ್ ಡಿಕ್ಕಿಯಿಂದ ಜಗಳ ನಡೆದಿದೆ. ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸೀಮರು” ಎಂದು ಯತೀಂದ್ರ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡ ಪಕ್ಷ ಬಿಜೆಪಿ
“ವರುಣಾ ಕ್ಷೇತ್ರದಲ್ಲಿ ಸುಳ್ಳು ಮತ್ತು ದ್ವೇಷ ಹಬ್ಬಿಸುವ ಮೂಲಕ ಬಿಜೆಪಿ ಚುನಾವಣಾ ಕುತಂತ್ರ ನಡೆಸುತ್ತಿದೆ. ಅವರು ಎಷ್ಟೇ ಪ್ರಚೋದನೆ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಹೋದರರ ಮಕ್ಕಳ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಮಾತನಾಡಿದ ಯತೀಂದ್ರ, “ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರು ಅಲ್ಲಿ ಇರಲಿಲ್ಲ. ನಮ್ಮ ಸಂಬಂಧಿಕರ ಮನೆ ಮುಂದೆ ಘಟನೆ ಆಗಿದೆ ಅಷ್ಟೇ. ಆದರೂ ದುರುದ್ದೇಶದಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ” ಎಂದಿದ್ದಾರೆ.