ಟ್ವಿಟರ್ ಬಳಕೆದಾರರೊಬ್ಬರಿಗೆ ‘ನೀನು ಮೋಹನ್ನಾ ಅಥವಾ ಮಹಮ್ಮದ್ದಾ’ ಎಂದು ಕೇಳುವ ಮೂಲಕ ಮೈಸೂರು ಸಂಸದ ಪ್ರತಾಪ್ ಸಿಂಹ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪ್ರತಾಪ್ ಸಿಂಹ ಅವರ ಟ್ವೀಟ್‌ವೊಂದಕ್ಕೆ ಮೋಹನ್ ಎಂಬುವವರು, “ನಮ್ಮ ಮನೆಯಲ್ಲಿ 17 ಮತಗಳಿವೆ ಅವೆಲ್ಲವೂ ಸಿದ್ದರಾಮಣ್ಣಂಗೆ ಹಾಕುತ್ತೇವೆ ಪ್ರತಾಪಣ್ಣ” ಎಂದು ಕಾಮೆಂಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ್ ಸಿಂಹ, “17 ಮತಗಳು? ಅಣ್ತಮ್ಮ ನಿನ್ನ ಹೆಸರು ಮೋಹನ್ನಾ ಅಥವಾ ಮಹಮ್ಮದ್ದಾ” ಎಂದು ಪ್ರಶ್ನಿಸಿದ್ದರು.
ಓರ್ವ ಸಂಸದನಾಗಿ ತನ್ನ ಸ್ಥಾನದ ಘನತೆ ಮೆರೆಯಬೇಕಾಗಿದ್ದನ್ನು ಬಿಟ್ಟು ಕ್ಷುಲ್ಲಕವಾಗಿ ಮಾತನಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸದಾ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಬಿಜೆಪಿ ನಾಯಕನ ಪ್ರಶ್ನೆಗೆ ನೆಟ್ಟಿಗರೇ ಉತ್ತರ ಕೊಟ್ಟಿರುವುದು ಸುದ್ದಿ ಆಗಿದೆ.
ಈ ಸುದ್ದಿ ಓದಿದ್ದೀರಾ? ಅಂಬೇಡ್ಕರ್‌ಗೆ ಅವಮಾನ ಮಾಡಿದ ಬಿಜೆಪಿ ಅಭ್ಯರ್ಥಿ, ಶಾಸಕ ರಘು
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಪ್ರತಾಪ್ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ. ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ” ಎಂದು ಕುಟುಕಿದೆ.
“ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ ‘ಅವಿಭಕ್ತ’ ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮುಸ್ಲಿಮರಷ್ಟೇ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎನ್ನುವ ಅರ್ಥದ ಪ್ರತಾಪ್ ಸಿಂಹ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.