ಕಾಂಗ್ರೆಸ್ಅನ್ನು ‘ವಿಶ್ವದ ಅತ್ಯಂತ ಭ್ರಷ್ಟ ಪಕ್ಷ’ ಎಂದು ಬಣ್ಣಿಸಿ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಬಿಜೆಪಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ‘ತಾನು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಪರಿಷ್ಕೃತ ಸಾಕ್ಷ್ಯ ಗಳನ್ನು ಒದಗಿಸಬೇಕು’ ಎಂದು ಬಿಜೆಪಿಗೆ ಸೂಚನೆ ನೀಡಿದೆ.
ಈ ಹಿಂದೆ, ‘ಭ್ರಷ್ಟಾಚಾರ ದರ ಕಾರ್ಡ್’ಗೆ ಸಂಬಂಧಿಸಿದಂತೆ ಬಿಜೆಪಿಯೂ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆಗಲೂ, ಕಾಂಗ್ರೆಸ್‌ಗೆ ಆಯೋಗ ನೋಟಿಸ್ ನೀಡಿತ್ತು.
ಈಗ, ಕಾಂಗ್ರೆಸ್ ವಿರುದ್ಧ ಬಿಜೆಪಿಯೂ ‘ಭ್ರಷ್ಟಾಚಾರ‘ಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಿದೆ. ಅದರ ವಿರುದ್ಧ ಕಾಂಗ್ರೆಸ್ ಚುನಾವಣಾ ಸಮಿತಿಯು ದೂರು ನೀಡಿದ್ದು, ಆಯೋಗವು ಕರ್ನಾಟಕ ಬಿಜೆಪಿಗೆ ನೋಟಿಸ್ ನೀಡಿದೆ.
“ಎದುರಾಳಿ ಪಕ್ಷಗಳ ನೀತಿ ಮತ್ತು ಆಡಳಿತದ ಬಗ್ಗೆ ಟೀಕೆ ಮಾಡುವ ಹಕ್ಕು ರಾಜಕೀಯ ನಾಯಕರುಗಳಿಗಿದೆ. ಆದಾಗ್ಯೂ, ಈ ಹಕ್ಕನ್ನು ಚಲಾಯಿಸುವಾಗ, ತಾವು ಮಾತನಾಡುವ ಮತ್ತು ಆರೋಪಿಸುವ ವಿಚಾರಗಳು ಸತ್ಯವೆಂದು ಸಾಬೀತುಪಡಿಸುವಂತಿರಬೇಕು, ಸಾರ್ವಜನಿಕ ಪ್ರವಚನದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಬೇಕು, ಮಾದರಿ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಸಂಬಂಧಿತ ಕಾನೂನುಗಳಿಗೆ ಬದ್ಧವಾಗಿರಬೇಕು” ಎಂದು ನೋಟಿಸ್‌ನಲ್ಲಿ ಹೇಳಿದೆ.
“ಮೇ 9ರ ರಾತ್ರಿ 8 ಗಂಟೆಯೊಳಗೆ ಬಿಜೆಪಿ ನೀಡಿದ ಜಾಹೀರಾತನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ವಿವರಣೆಯೊಂದಿಗೆ ಒದಗಿಸಬೇಕು. ಅಲ್ಲದೆ, ಅವುಗಳನ್ನು ಸಾರ್ವಜನಿಕಗೊಳಿಸಬೇಕು” ಎಂದು ನಿರ್ದೇಶಿಸಿದೆ.
ಈ ಸುದ್ದಿ ಓದಿದ್ದೀರಾ?: ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು?: ನೀವಿದ್ದಲ್ಲಿಯೇ ಪರಿಶೀಲಿಸಲು ಇಲ್ಲಿ ನೋಡಿ
“ಯಾವುದೇ ಪುರಾವೆಗಳನ್ನು ಒದಗಿಸದಿದ್ದರೆ, ಎಂಸಿಸಿ (ಮಾದರಿ ನೀತಿ ಸಂಹಿತೆ), ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣಗಳನ್ನು ನೀಡಬೇಕು” ಎಂದು ಇಸಿ ಹೇಳಿದೆ.
ಮೇ 10ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ.