- ಬಿಜೆಪಿ ಮಹಿಳಾ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಶೃತಿ
- ಹಿರಿಯ ನಟಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಜೆಡಿಎಸ್
ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಸ್ಯಾಂಡಲ್‌ವುಡ್‌ನ ಹಿರಿಯ ನಟಿ, ಬಿಜೆಪಿ ವಕ್ತಾರೆ ಶೃತಿ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಹಿರೇಕೆರೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಶೃತಿ ಭಾಗಿಯಾಗಿದ್ದರು. ಹಿರೇಕೆರೂರು ಕ್ಷೇತ್ರದ ಹಾಲಿ ಶಾಸಕ, ಕೃಷಿ ಸಚಿವ ಬಿ.ಸಿ ಪಾಟೀಲ್ ಪರವಾಗಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರವನ್ನು ಕೂಡ ಮಾಡಿದ್ದರು. ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ಶೃತಿ, “ನಿಮ್ಮ ವಂಶವನ್ನು ಬಿಟ್ಟು ಬೇರೆಯವರ ವಂಶ ಅಭಿವೃದ್ಧಿ ಆಗಬೇಕೆಂದರೆ ಜೆಡಿಎಸ್‌ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕು ಎಂದರೆ ಬಿಜೆಪಿಗೆ ಮತ ಹಾಕಿ” ಎಂದಿದ್ದರು.
ಶೃತಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಜೆಡಿಎಸ್ ನಾಯಕರು ನಟಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸ್ಥಳೀಯ ನೋಡಲ್ ಅಧಿಕಾರಿ ಪಂಪಾಪತಿ ಎನ್ನುವವರು ನಟಿಯ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆದರಿಕೆ ಪ್ರಕರಣ | ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದ ಸುದೀಪ್
ದೂರಿನನ್ವಯ, ರಾಜಕೀಯ ಪಕ್ಷಗಳ ನಡುವೆ ದ್ವೇಷ, ವೈರತ್ವ ಮತ್ತು ಭೀತಿಯನ್ನು ಉಂಟು ಮಾಡಲು ಯತ್ನಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 505(2) ಅಡಿಯಲ್ಲಿ ಪೊಲೀಸರು ನಟಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.