ಜಮೀನಿನಲ್ಲಿ ಸಾಗುವಳಿ ಮಾಡುವ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿದ 10 ಅಪರಾಧಿಗಳಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಮರೇಶ ಕೊಲೆಯಾದ ವ್ಯಕ್ತಿ. ಹೊಲದಲ್ಲಿ ಸಾಗುವಳಿ ವಿಚಾರವಾಗಿ 01-01-2019 ರಂದು ಬಸಪ್ಪ ಹಾಗೂ ಅವರ ಸಂಬಂಧಿಕರು ಸೇರಿ ಕೊಲೆ ಮಾಡಿದ್ದಾರೆ ಎಂದು 9 ಜನರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಅಂದಿನ ಸಿಪಿಐ ಚನ್ನಯ್ಯ ಎಸ್.ಹಿರೇಮಠ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಬಸಪ್ಪ ಹುಲಗಪ್ಪ, ಶರಣಪ್ಪ ಗೌಂಡಿ, ಹುಲಗಪ್ಪ ಗೌಂಡಿ, ಅಮರೇಶ ಗೌಂಡಿ, ದೇವಪ್ಪ ಗೌಂಡಿ, ಶಂಕ್ರಮ್ಮ ಗೌಂಡಿ, ಯಲ್ಲಮ್ಮ ಭೋವಿ, ಶರಣಪ್ಪ ಭೋವಿ, ಹನುಮವ್ವ ಶರಣಪ್ಪ ಹಾಗೂ ವಿನೋದ ಗೌಂಡಿ ವಿರುದ್ಧ ಮುದಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ವಿಚಾರಣೆ ನಡೆಸಿದ ರಾಯಚೂರು ಪಿಠಾಸೀನ ಲಿಂಗಸೂಗುರು ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಇಂದು ತೀರ್ಪು ನೀಡಿದರು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹37,500 ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಆರ್.ಎ ಗಡಕರಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.