ರಾಜ್ಯದಲ್ಲಿ ಕೈಕೊಟ್ಟ ಮುಂಗಾರಿನಿಂದ ಎಲ್ಲ ಜಿಲ್ಲೆಗಳು ಬರಗಾಲ ಅನುಭವಿಸುತ್ತಿದ್ದಾರೆ. ನೀರಿನ ಅಭಾವ ಉಂಟಾಗಿದೆ. ಹಳ್ಳ, ನದಿ, ಜಲಾಶಯಗಳಲ್ಲಿಯೂ ನೀರಲ್ಲದೆ ರೈತರು ಬೆಳೆಗಳಿಗೆ ನೀರುಣಿಸಲು ಪರದಾಡುತ್ತಿದ್ದಾರೆ. ಇತ್ತ ರಾಯಚೂರಿನಲ್ಲಿ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೊರೆಹೋಗಿದ್ದಾರೆ.
ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗುತ್ತಿದ್ದರೆ, ಇತ್ತ ತುಂಗಭದ್ರಾ ಎಡದಂಡೆಯ ಕಾಲುವೆ ನೀರನ್ನು ನಂಬಿಕೊಂಡು ವ್ಯವಸಾಯ ಮಾಡಿಕೊಳ್ಳುತ್ತಿರುವ ರೈತರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಮೆಣಸಿನಕಾಯಿ ಬೆಳೆಗೆ ಹಾನಿಯಾಗುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳಲ್ಲಿ ನೀರನ್ನು ತಂದು ನೀರುಣಿಸುವ ಸಹಾಸಕ್ಕೆ ಮುಂದಾಗಿದ್ದಾರೆ.
ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದೇನೆ. ಇದರ ಇಳುವರಿ ಕೂಡ ಉತ್ತಮವಾಗಿ ಬಂದಿದೆ. ಪಕ್ಕದಲ್ಲಿಯೇ ತುಂಗಭದ್ರಾ ಎಡದಂಡೆ ಕಾಲುವೆ ಹಾದು ಹೋಗಿದೆ. ಆದರೆ, ನೀರಿಲ್ಲ. ಹೀಗಾಗಿ, ಟ್ಯಾಂಕರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಆಶಾಪುರ ಗ್ರಾಮದ ರೈತ ವೀರೇಶ್.
ಸದ್ಯ ಬೆಳೆದಿರುವ ಬೆಲೆಗೆ ಸಾಕಷ್ಟು ಹಣಹಾಕಿ ಬೆಳೆದಿದ್ದೇವೆ. ಒಂದು ಟ್ಯಂಕ್ ನೀರಿಗೆ ನಾಲ್ಕು ಸಾವಿರ ಖರ್ಚುಮಾಡಿ ಬೆಳೆ ಉಳಿಸಿಕೊಳ್ಳುತ್ತಿದ್ದೇವೆ. ನಮ್ಮ ಅಕ್ಕಪಕ್ಕದ ರೈತರು ಸಹ ಟ್ಯಾಂಕರ್ ಮೂಲಕ ನೀರು ತಂದು ಬೆಳೆಗಳಿಗೆ ಉಣಿಸಲು ಮುಂದಾಗಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಇತ್ತ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಸೊಂಪುರ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಸಹ ಬೆಳೆ ಸಂರಕ್ಷಿಸಲು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರುಣಿಸುವುದು ಸರಳ ಕೆಲಸವಲ್ಲ. ಆದರೂ, ಬಂದಿರುವ ಬೆಳೇಯನ್ನು ಉಳಿಸಿಕೊಳ್ಳಲು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಹಾಯಿಸುತ್ತಿದ್ದಾರೆ. ಬರದ ಹಿನ್ನೆಲೆಯಲ್ಲಿ ಏನೇ ಬೆಳೆ ಬಂದರೂ ಬೆಲೆ ಸಿಗುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿರುವ ರೈತರು, ಸದ್ಯಕ್ಕೆ ಉಳಿದಿರುವ ಈರುಳ್ಳಿ, ಮೆಣಸಿನಕಾಯಿಗೆ ನೀರುಣಿಸಿ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.