ನಗರದ ರಿಮ್ಸ್ ಬೋಧಕ ಆಸ್ಪತ್ರೆಯ ಕೆಲವು ವಿಭಾಗಗಳನ್ನು ಉನ್ನತೀಕರಿಸಿ ವಿಕೇಂದ್ರೀಕರಣ, ಲಿಫ್ಟ್ ದುರಸ್ತಿ, ವಾರ್ಡುಗಳ ಅಟೆಂಡರ್‌ಗಳ ನೇಮಕ ಹಾಗೂ ಸ್ವಚ್ಛತೆ ನಿರ್ವಹಣೆಗೆ ಆಧುನಿಕ ಉಪಕರಣ ಬಳಸಬೇಕು ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರಿಮ್ಸ್ ಆಸ್ಪತ್ರೆಗೆ ಪಕ್ಕದ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ರೋಗಿಗಳು ಬರುತ್ತಾರೆ. 520 ಹಾಸಿಗೆಗಳನ್ನು ಮೀರಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಶೇ.90ರಷ್ಟು ಬಡರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ದೂರಿದ್ದಾರೆ.
ಆಸ್ಪತ್ರೆಯಲ್ಲಿರುವ ವಿಭಾಗಗಳನ್ನು ಬೇರ್ಪಡಿಸಿದರೆ, ಜನಸಂದಣಿ ನಿಯಂತ್ರಿಸಲು ಸಾಧ್ಯವಾಗಲಿದೆ. ಜೊತೆಗೆ ಉತ್ತಮ ಚಿಕಿತ್ಸೆ ಒದಗಿಸಲು ಅನುಕೂಲವಾಗಲಿದೆ. ಲಿಫ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಲಿಫ್ಟ್ ಚಲಾವಣೆ ಮಾಡಲೆಂದು ಸಿಬ್ಬಂದಿ ನೇಮಕ ಮಾಡಬೇಕೆಂದು ಮನವಿ ಮಾಡಿದರು.
ಸಿಸಿ ಕ್ಯಾಮರಾ ಅಳವಡಿಸಬೇಕು. ರೋಗಿಗಳ ಸಹಾಯಕರ ವಾಹನಗಳು ಕಳ್ಳತನವಾಗುತ್ತಿದ್ದು, ಭದ್ರತೆ ಒದಗಿಸಬೇಕು. ಹೆರಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. ರೋಗಿಗಳನ್ನು ದೂರದ ಊರುಗಳಿಗೆ ಕಳುಹಿಸುವ ಪ್ರಕರಣಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ಸೌಲಭ್ಯ ಒದಗಿಸಬೇಕು. ಕೂಡಲೆ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ವ್ಯವಸ್ಥೆ ಪರಿಶೀಲಿಸಬೇಕು. ಅವ್ಯವಸ್ಥೆ ಸರಿಪಡಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಶರಣಪ್ಪ ಎನ್, ಜಿಲ್ಲಾಧ್ಯಕ್ಷ ಚಿನ್ನಯ್ಯಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಹನುಮಂತು, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಪಾಷಾ ಕುರ್ಡಿ, ಶರಣಕುಮಾರ ಸೇರಿದಂತೆ ಅನೇಕರಿದ್ದರು.
ವರದಿ : ಹಫೀಜುಲ್ಲ