ಕತ್ತಲಿನಿಂದ ಬೆಳಕಿನೆಡೆಗೆ ಬರುವುದು ಪ್ರವಾದಿಯವರ ಕರೆಯಾಗಿತ್ತು. ನಾವೆಲ್ಲರೂ ದ್ವೇಷವನ್ನು ಅಳಿಸಿ, ಪ್ರೀತಿಯನ್ನು ಹಂಚಬೇಕು ಎಂದು ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ʼಜಮಾತೆ ಇಸ್ಲಾಂ ಹಿಂದ್ʼ ಆಯೋಜಿಸಿದ್ದ ಸಮಾನತೆಯ ಸಮಾಜದ ಶಿಲ್ಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಅರೇಬಿಯಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ಅತೀಯಾಗಿ ನಡೆಯುತ್ತಿದ್ದವು. ಪ್ರವಾದಿ ಅವರು ಪ್ರೀತಿ, ಸಹನೆಯಿಂದ ಅವರೆಲ್ಲರನ್ನೂ ಸನ್ಮಾರ್ಗದ ಕಡೆಗೆ ಕರೆ ತಂದರು. ಪ್ರಾಣಿಗಳಿಗೂ ಕೂಡ ಗೊತ್ತು, ಆಹಾರವನ್ನು ಹಂಚಿಕೊಂಡು ತಿನ್ನಬೇಕು ಅಂತ. ಆದರೆ, ಮನುಷ್ಯನು ತಿನ್ನುವ ಆಹಾರವನ್ನು ಬಿಸಾಕಿ, ದ್ವೇಷ ಸಾಧಿಸುವ ಕಡೆಗೆ ಮುಖ ಮಾಡಿದ್ದಾನೆ ಎಂದು, ಬೇಸರ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಜಮಾತ್ ಇಸ್ಲಾಂ ಹಿಂದ್‌ನ ರಾಜ್ಯ ಮುಖಂಡ ಮಹಮದ್ ಕುಂಞಿ, ಪ್ರವಾದಿ ಅವರು ಹೇಳುತ್ತಾರೆ, ಕೊಲೆ ಮಾಡಿದವನು, ಕೊಲೆ ಆದವನು ಇಬ್ಬರು ಕೂಡ ನರಕಕ್ಕೆ ಎಂದು. ಕೊಲೆ ಮಾಡಬೇಕು ಎಂಬುದು ಇಬ್ಬರ ಮನಸ್ಥಿತಿ ಆಗಿರುತ್ತದೆ. ದೇವರ ಹೆಸರಲ್ಲಿ ಅಪಪ್ರಚಾರದಿಂದ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯದಲ್ಲಿ ವಿಭಜನೆ ಮಾಡುತ್ತಿದ್ದಾರೆ. ಸುಳ್ಳು ವಿಜೃಂಭಿಸುತ್ತಿವೆ, ಸತ್ಯವನ್ನು ಮರೆಮಾಚುತ್ತಿದ್ದಾರೆ. ಇಂತಹ ಮನಸ್ಥಿತಿಯಿಂದ ಹೊರ ಬರಬೇಕಿದೆ.
ಈ ಜಗತ್ತಿನ ಮುಸಲ್ಮಾನರು, ಪ್ರವಾದಿ ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಿಲ್ಲ, ಅವರನ್ನು ಪೂಜಿಸುವುದಿಲ್ಲ, ಆರಾಧಿಸುವುದಿಲ್ಲ. ಅವರು ದೇವರು ಆಗಿಲ್ಲ, ಸಾಮಾನ್ಯ ಮನುಷ್ಯನಾಗಿ ಉಳಿದಿದ್ದರು. ಪ್ರಪಂಚದಲ್ಲಿ ಸುಮಾರು ಪ್ರವಾದಿಗಳು, ದಾರ್ಶನಿಕಗಳು ಬಂದರು. ಅವರೆಲ್ಲರೂ ಎಲ್ಲರನ್ನೂ ಜೋಡಿಸುವುದಕ್ಕೆ ಬಂದರೆ, ಹೊರೆತು ವಿಭಜಿಸುವುದಕ್ಕೆ ಅಲ್ಲ. ಸದ್ಯದ ಪರೀಸ್ಥಿತಿಯಲ್ಲಿ ನಾವು, ಧರ್ಮದ ಬಗ್ಗೆ ಮಾತನಾಡುವಾಗ ವಿಪರೀತ ಕೋಪ, ದ್ವೇಷದಿಂದ ಮಾತನಾಡುತ್ತೇವೆ. ಧರ್ಮದ ಬಗ್ಗೆ ಹೇಳುವಾಗ ಮುಗುಳ್ನಗೆಯಿಂದ ಮಾತಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ವಿರೂಪಾಕ್ಷಪ್ಪ, ಜಮಾತ್ ಸಿಂಧನೂರು ತಾಲ್ಲೂಕು ಸಂಚಾಲಕ ಮಹಮದ್ ಹುಸೇನ್, ವಿಭಾಗೀಯ ಸಂಚಾಲಕ ದಿಲವರ್ ಅಂಬರ್ ಖಾನ್, ಬಾಬರ್ ಬೇಗ್, ಸೈಯ್ಶದಾ ಸಹಬತ್ ನಾಜ್ ಇನ್ನಿತರರು ಹಾಜರಿದ್ದರು.