ಹಾರೋಹಳ್ಳಿ ತಾಲೂಕಿನ ತಾಮಸಂದ್ರ ಗ್ರಾಮದ ಕುಂಬಯ್ಯ ಮತ್ತು ತೇರಮ್ಮ ದಂಪತಿ ತಮ್ಮ ಮಾತು ಬಾರದ ಮಗನ ಜೊತೆಗೆ ವಾಸಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ಸುರಿದ ಮಳೆಗೆ ಇವರು ವಾಸವಿದ್ದ ಮನೆ ನೆಲ ಕಚ್ಚಿದೆ. ಮನೆಯ ಮಧ್ಯದ ಗೋಡೆ ಕುಸಿದಿದ್ದು, ಬಿದ್ದಿರುವ ಮನೆಯಲ್ಲಿ ನಿತ್ಯ ಜೀವ ಭಯದಲ್ಲಿ ಬದುಕುತ್ತಿದೆ ಈ ಕುಟುಂಬ.
ಕುಟುಂಬಕ್ಕೆ ಯಾವುದೇ ಆದಾಯ ಮೂಲವಿಲ್ಲ. ಸರ್ಕಾರದ ಪಿಂಚಣಿ ಹಣವೇ ಇವರಿಗೆ ಜೀವನಾಧಾರ. ವೃದ್ಧ ಕುಂಬಯ್ಯ ಅವರ ಮಗಳು ಮತ್ತು ಅಳಿಯ ಇಬ್ಬರು ಮೃತಪಟ್ಟಿದ್ದು, ಇವರ ಅಂಗವಿಕಲ ಮಗನನ್ನು ಈ ವೃದ್ಧ ದಂಪತಿಗಳು ಸಾಕುತಿದ್ದು, ಈ ವೃದ್ಧ ದಂಪತಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ 14 ವರ್ಷಗಳಿಂದ ಮೊಮ್ಮಗನ ನಿತ್ಯ ಕರ್ಮ, ಶಾಲೆಗೆ ಕರೆದೊಯ್ದು ವಾಪಸ್ ಕರೆ ತರುವುದು ಹಾಗು ಊಟ ಸೇರಿದಂತೆ ಎಲ್ಲ ಕೆಲಸಗಳನ್ನು ಈ ವೃದ್ದ ದಂಪತಿಗಳೆ ಮಾಡುತ್ತಾರೆ.
ತಾಮಸಂದ್ರ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಯೋಗೀಶ್ವರಿ ಅವರು ಅಂಗವಿಕಲ ಬಾಲಕನಿಗೆ ಫಿಸಿಯೋಥೆರಪಿ ಮಾಡಿಸಲು ಮತ್ತು ಅಂಗವಿಕಲ ಪಿಂಚಣಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.