- ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೊಗಡು ಶಿವಣ್ಣ
- ತುಮಕೂರಿನಲ್ಲೂ ಬಿಜೆಪಿಗೆ ತಟ್ಟಿದ ಬಂಡಾಯದ ಬಿಸಿ
ಆಡಳಿತ ಪಕ್ಷ ಬಿಜೆಪಿಗೆ ಬಂಡಾಯದ ಏಟು ಬಲವಾಗಿಯೇ ಬೀಳುತ್ತಿದೆ. ಒಂದು ಕಡೆ ಪಕ್ಷ ಬಿಡುವವರ ಒಳಪೆಟ್ಟು, ಮತ್ತೊಂದು ಕಡೆ ಬಂಡಾಯವೆದ್ದು ನಿಲ್ಲುವವರ ಹೊಡೆತ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ತುಮಕೂರು ಬಿಜೆಪಿಯಲ್ಲಿ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಸೊಗಡು ಶಿವಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ತುಮಕೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶಿವಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೊಳೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ನಾನು ತುಮಕೂರು ಕ್ಷೇತ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. 1994ರಿಂದ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದೇನೆ ಎಂದರು.
ಈ ಸುದ್ದಿ ಓದಿದ್ದೀರಾ? :ರಾಮದಾಸ್ಗೆ ಕೈತಪ್ಪಿದ ಟಿಕೆಟ್; ಮಾತುಕತೆಗೆ ಬಂದಿದ್ದ ಪ್ರತಾಪ್…
ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ. ಶಾಂತಿ, ಕಾಯಕ, ಸಮಾನ ಮಂತ್ರ ಮೂಲಕ ಮತ ಕೇಳುತ್ತೇನೆ. ಪಕ್ಷದಲ್ಲಿ ಇದ್ದಾಗ ಎಲ್ಲಾ ಸಹಿಸಿಕೊಳ್ಳಬೇಕಿತ್ತು ಸಹಿಸಿಕೊಂಡಿದ್ದೇನೆ.
ಆದರೆ ಈಗ ಅದು ಬದಲಾಗಿದೆ ಎಂದ ಅವರು, ಎಲ್ಲ ಪಕ್ಷದ ನಾಯಕರು ನನ್ನ ಜೊತೆ ಚೆನ್ನಾಗಿ ಇದ್ದಾರೆ. ಸದ್ಯಕ್ಕೆ ನಾನು ಸ್ವತಂತ್ರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುವೆ ಎಂದು ಹೇಳಿದರು.