ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಮತದಾನ ಮತ್ತು ಚುನಾವಣಾ ಫಲಿತಾಂಶದ ದಿನಗಳು ಕೂಡ ನಿಗದಿಯಾಗಿವೆ. ಇದೇ ಹೊತ್ತಿನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿಯ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಂತೆ ನಮ್ಮ ರಾಜ್ಯದ ಜನ ಸಿನಿಮಾ ತಾರೆಯರಿಗೆ ರಾಜಕಾರಣದಲ್ಲಿ ಅಷ್ಟು ಸುಲಭವಾಗಿ ಮಣೆ ಹಾಕುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬೆರಳೆಣಿಕೆಯಷ್ಟು ಸಂದರ್ಭಗಳನ್ನು ಬಿಟ್ಟರೆ ಕರ್ನಾಟಕದ ಜನ, ಸಿನಿಮಾ ತಾರೆಯರ ವರ್ಚಸ್ಸಿಗೆ ಮರುಳಾಗಿ ಓಟು ಹಾಕಿದ್ದು ತೀರಾ ಕಡಿಮೆ.
ಸದ್ಯದಲ್ಲೇ ಎದುರಾಗಲಿರುವ ಚುನಾವಣೆಯ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಮತ್ತು ಈ ಹಿಂದೆ ಸದ್ದು ಮಾಡಿದ ಸಿನಿಮಾ ತಾರೆಯರ ಕುರಿತ ವಿಶೇಷ ಮಾಹಿತಿಯನ್ನು ಈದಿನ.ಕಾಮ್ ನಿಮ್ಮ ಮುಂದಿಡುತ್ತಿದೆ.
ಸ್ವಾಭಿಮಾನಿ ಎನ್ನುತ್ತಲೇ ಬಿಜೆಪಿಯತ್ತ ವಾಲಿದ ಸುಮಲತಾ ಅಂಬರೀಶ್

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ಸುಮಲತಾ ತಮ್ಮ ಪತಿ, ಖ್ಯಾತ ನಟ ಅಂಬರೀಶ್ ನಿಧನಾನಂತರ ರಾಜಕಾರಣದತ್ತ ಮುಖ ಮಾಡಿದರು. ಅಂಬರೀಶ್ ಸಂಸದರಾಗಿ ಪ್ರತಿನಿಧಿಸುತ್ತಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಜೆಡಿಎಸ್‌ನ ಎದುರಾಳಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಅಂಬರೀಶ್ ಸಾವಿನ ಅನುಕಂಪದ ಅಲೆ, ಆಗಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿನ ಆಂತರಿಕ ತಿಕ್ಕಾಟ, ಕುಟುಂಬ ರಾಜಕಾರಣ, ಯಶ್ ಮತ್ತು ದರ್ಶನ್ ಜೋಡಿಯ ಅಬ್ಬರದ ಪ್ರಚಾರ ಹೀಗೆ ಹಲವು ಅಂಶಗಳು ಸುಮಲತಾರ ಗೆಲುವಿಗೆ ಸಹಕಾರಿಯಾಗಿದ್ದವು. ಮಂಡ್ಯ ಸಂಸದೆಯಾಗಿ ಅಧಿಕಾರಿ ನಿರ್ವಹಿಸುತ್ತಿರುವ ಸುಮಲತಾ ಸದ್ಯ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾಗೆ ಮತ ಹಾಕಿದ ಮಂಡ್ಯದ ಜನತೆ ಇದೀಗ ಅವರ ನಡೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಬರೀಶ್ ಆಪ್ತ ಬಳಗದಲ್ಲಿದ್ದವರೆ ಸುಮಲತಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
2 ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಸಿನಿಮಾ ನಿರ್ಮಾಪಕ ಎಚ್.ಡಿ ಕುಮಾರಸ್ವಾಮಿ

ʼಸೂರ್ಯವಂಶʼ, ʼಪ್ರೇಮೋತ್ಸವʼ, ʼಗಲಾಟೆ ಅಳಿಯಂದ್ರುʼ, ʼಜಿತೇಂದ್ರʼ,ʼಚಂದ್ರಚಕೋರಿʼ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ್ದ ಕುಮಾರಸ್ವಾಮಿ ವಿತರಕರಾಗಿಯೂ ಗುರುತಿಸಿಕೊಂಡಿದ್ದರು. ದೇವೇಗೌಡರ ಪುತ್ರ ವ್ಯಾಮೋಹದ ಫಲವಾಗಿ ರಾಜಕಾರಣಕ್ಕೆ ಧುಮುಕಿದ ಅವರು 1996ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅದಾದ ಎರಡೇ ವರ್ಷಕ್ಕೆ, ಅಂದರೆ 1998ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ಅವರು ಕಾಂಗ್ರೆಸ್‌ನ ಎಂ.ವಿ ಚಂದ್ರಶೇಖರ ಮೂರ್ತಿ ಅವರ ಎದುರು ಸೋಲನುಭವಿಸಿದರು. ಅದಾದ ಬಳಿಕ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದ ಕುಮಾರಸ್ವಾಮಿ ಎರಡನೇ ಬಾರಿಗೆ ಸೋಲು ಕಂಡಿದ್ದರು.
2004ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಕುಮಾರಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅದೇ ಅವಧಿಯಲ್ಲಿ (2006-2007) ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ವಹಿಸಿಕೊಂಡರು. ಬಿಜೆಪಿ ಜೊತೆಗಿನ ಮೈತ್ರಿಯ ಕಾರಣಕ್ಕೆ ಕುಮಾರಸ್ವಾಮಿ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಯನ್ನು ಎದುರಿಸಬೇಕಾಯಿತು. ದೇವೇಗೌಡರಿಗೂ ತಮ್ಮ ಪುತ್ರನ ಈ ನಡೆ ಇಷ್ಟವಾಗಿರಲಿಲ್ಲ. 2009ರಲ್ಲಿ ಮತ್ತೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿಯ ಸಿ.ಪಿ ಯೋಗೇಶ್ವರ ಎದುರು ಜಯಗಳಿಸಿ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 2013ರ ಹೊತ್ತಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ, ಕೆಲ ಕಾಲ ವಿರೋಧ ಪಕ್ಷದ ನಾಯಕರೂ ಆಗಿದ್ದರು. 2018ರ ಚುನಾವಣೆಯ ಫಲಿತಾಂಶ ಅತಂತ್ರವಾದಾಗ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಮತ್ತೆ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಈ ಮೈತ್ರಿ ಸರ್ಕಾರದ ಭಾಗವಾಗಿದ್ದ ಶಾಸಕರು ಬಂಡಾಯವೆದ್ದು ಬಿಜೆಪಿಗೆ ಪಕ್ಷಾಂತರಗೊಂಡಾಗ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿತು. ಇದಾದ ಬಳಿಕ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. 2023ರ ಚುನಾವಣೆಗೆ ಸಜ್ಜಾಗಿರುವ ಅವರು ಸದ್ಯ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ತಾರಾ ವರ್ಚಸ್ಸು ಕೈ ಹಿಡಿಯದೆ ಸತತ ಎರಡು ಬಾರಿ ಸೋತಿದ್ದ ಅಂಬರೀಶ್

90ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಅಂಬರೀಶ್ ರಾಜಕಾಣದತ್ತ ಮುಖ ಮಾಡಿದರು. 1994ರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿವಿ ನರಸಿಂಹರಾವ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. 1994ರ ವಿಧಾನಸಭಾ ಚುನಾವಣೆ ಮತ್ತು 1996ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣ ಬೇಸರಗೊಂಡ ಅಂಬರೀಶ್ 1997ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ನಂತರ 1998ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಕಣಕ್ಕಿಳಿದ ಅಂಬರೀಶ್ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾದರು. ಅದಾದ ಮರು ವರ್ಷವೇ ಜೆಡಿಎಸ್ ತೊರೆದ ಅಂಬಿ ಮತ್ತೆ ಕಾಂಗ್ರೆಸ್ ಸೇರಿದರು.
1999ರ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಗೆಲುವು ದಾಖಲಿಸಿ ಎರಡನೇ ಬಾರಿಗೆ ಸಂಸದರಾದರು. ಆ ಹೊತ್ತಿಗೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಸಮರ್ಥ ನಾಯಕನಾಗಿ ಗುರುತಿಸಿಕೊಂಡಿದ್ದ ಅಂಬರೀಶ್ 2004ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರಾಗಿ (2006-2008) ನಿರ್ವಹಿಸಿದ್ದರು. ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ 2008ರಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ 2009ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದ ಅಂಬಿ ಹೀನಾಯ ಸೋಲು ಕಂಡರು. ಅಷ್ಟೇ ಅಲ್ಲ, 2009ರ ಲೋಕಸಭಾ ಚುನಾವಣೆಯಲ್ಲೂ ಸೋಲನುಭವಿಸಿದರು. 2012ರ ವೇಳೆಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾದರು. 2016ರಲ್ಲಿ ಸಂಪುಟ ಪುನರ್ ರಚನೆ ವೇಳೆ ತಮ್ಮನ್ನು ಸಂಪುಟದಿಂದ ಕೈಬಿಟ್ಟ ಹಿನ್ನೆಲೆ ಕೋಪಗೊಂಡು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡರು. 2018ರ ಚುನಾವಣೆಯಲ್ಲಿ ತಮಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಸತತ ಮೂರು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದ ಅಂಬರೀಶ್ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಶ್ರಮಿಸಲಿಲ್ಲ ಎಂಬ ಕಾರಣದಿಂದಾಗಿ 2008ರ ವಿಧಾನಸಭೆ ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಜನ ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಆರು ತಿಂಗಳ ಅವಧಿಗೆ ಸಂಸದೆಯಾಗಿದ್ದ ರಮ್ಯ

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆಯಾಗಿ ಮಿಂಚಿದ್ದ ರಮ್ಯ ತಮ್ಮ ವರ್ಚಸ್ಸನ್ನು ಬಳಸಿಕೊಂಡು ರಾಜಕೀಯದತ್ತ ಮುಖ ಮಾಡಿದರು. 2012ರಲ್ಲಿ ಕಾಂಗ್ರೆಸ್ ಸೇರಿದ ಅವರು 2013ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಸಂಸದೆಯಾಗಿ ಆಯ್ಕೆಯಾದರು. ಆದರೆ, ರಮ್ಯ ಸಂಸದೆಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು 6 ತಿಂಗಳು ಮಾತ್ರ. 2014ರ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಕಣಕ್ಕಿಳಿದ ರಮ್ಯ ಜೆಡಿಎಸ್‌ನ ಸಿ.ಎಸ್ ಪುಟ್ಟರಾಜು ಎದುರು ಸೋಲನುಭವಿಸಿದರು. ತಾರಾ ವರ್ಚಸ್ಸಿನಿಂದಲೇ ಅತಿ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಹತ್ತಿರವಾದ ರಮ್ಯ, 2017ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾದರು. ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದ ಅವರು 2018ರ ಹೊತ್ತಿಗೆ ಕಾಂಗ್ರೆಸ್ ಮತ್ತು ಸಕ್ರಿಯ ರಾಜಕಾರಣದಿಂದ ಹೊರಬಂದರು. ಸದ್ಯ ಸ್ಯಾಂಡಲ್‌ವುಡ್‌ಗೆ ಮರಳಿರುವ ಅವರು ಹಲವು ಬಾರಿ ತಾವು ಕಾಂಗ್ರೆಸ್ ಪರ ಎಂಬುದನ್ನು ನಿರೂಪಿಸುತ್ತಾ ಬಂದಿದ್ದಾರೆ.
ರೈತ ಹೋರಾಟದ ಮೂಲಕ ರಾಜಕಾರಣಕ್ಕೆ ಬಂದ ಬಿ.ಸಿ ಪಾಟೀಲ್

ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಬಿ.ಸಿ ಪಾಟೀಲ್, ಕೌರವ, ಜೋಗುಳ, ಪ್ರೇಮಾಚಾರಿ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದರು. 2003ರಲ್ಲಿ ಪೊಲೀಸ್ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ ರೈತ ಹೋರಾಟದಲ್ಲಿ ಗುರುತಿಸಿಕೊಂಡ ಅವರು 2004ರ ವಿಧಾನಸಭಾ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008ರ ವಿಧಾನಸಭಾ ಚುನಾವಣೆ ಹೊತ್ತಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರು ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದು ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಬಹುಮತದಿಂದ ಸರ್ಕಾರ ರಚನೆ ಮಾಡಿದರೆ, ಬಿ.ಸಿ ಪಾಟೀಲ್ ಹಿರೇಕರೂರು ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಕೆಜೆಪಿಯ ಯು.ಬಿ ಬಣಕಾರ್ ಎದುರು ಸ್ಪರ್ಧಿಸಿ ಸೋಲನುಭವಿಸಿದ್ದರು. 2018ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಪಾಟೀಲ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರಗೊಂಡರು. 2019ರ ಕೊನೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ದಾಖಲಿಸಿದ ಅವರು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಚುನಾವಣಾ ತಯಾರಿಯಲ್ಲಿರುವ ಅವರು, ಈ ಬಾರಿಯ ಚುನಾವಣೆ ಕೊನೆಯ ಸ್ಪರ್ಧೆ ಎಂದು ಘೋಷಿಸಿದ್ದಾರೆ. ಬಿ.ಸಿ ಪಾಟೀಲ್, ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದರು ಎಂಬ ಆರೋಪಗಳು ಕೂಡ ಕೇಳಿ ಬಂದಿದ್ದವು.
ಶಾಸಕನಾದ ಎರಡೇ ತಿಂಗಳಿಗೆ ರಾಜೀನಾಮೆ ನೀಡಿದ್ದ ಜಗ್ಗೇಶ್

ಜಗ್ಗೇಶ್ ಸಿನಿಮಾ ರಂಗದಲ್ಲಿ ತಮಗೆ ಬೇಡಿಕೆ ಕಡಿಮೆಯಾಗುತ್ತಿದ್ದ ಹೊತ್ತಿನಲ್ಲೇ ಚಾಣಾಕ್ಷತನದಿಂದ ರಾಜಕಾರಣದತ್ತ ವಾಲಿಕೊಂಡರು. ಡಿ.ಕೆ ಶಿವಕುಮಾರ್ ಒಡನಾಟದಿಂದಾಗಿ ಕಾಂಗ್ರೆಸ್ ಸೇರಿದ ಜಗ್ಗೇಶ್, 2008ರಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದು ಬಿಜೆಪಿಯ ಎಂ.ಡಿ ಲಕ್ಷ್ಮೀ ನಾರಾಯಣ್ ವಿರುದ್ಧ ಗೆಲುವು ಸಾಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಶಾಸಕರಾಗಿ ಅಧಿಕಾರ ಸ್ವೀಕರಿಸಿದ ಎರಡೇ ತಿಂಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದ ಅವರು ಅಧಿಕಾರದಲ್ಲಿದ್ದ ಬಿಜೆಪಿ ಸೇರಿದರು. ಜಗ್ಗೇಶ್ ಅವರ ಈ ನಡೆ ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಯಿತು. ರಾಜೀನಾಮೆಯ ಬೆನ್ನಲ್ಲೇ ನಟನ ವಿರುದ್ಧ ಪ್ರತಿಭಟನೆಗಳು ಕೂಡ ನಡೆದವು. ಅದಾದ ಬಳಿಕ ತುರುವೇಕೆರೆಯಿಂದ ಅಂತರ ಕಾಯ್ದುಕೊಂಡ ಅವರು 2010ರಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದರು. 2016ರ ವರೆಗೆ ಪರಿಷತ್ ಸದಸ್ಯರಾಗಿದ್ದ ಜಗ್ಗೇಶ್, 2018ರ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಆಗ ಕಾಂಗ್ರೆಸ್‌ನಲ್ಲಿದ್ದ ಎಸ್.ಟಿ ಸೋಮಶೇಖರ್ ಎದುರು ಸೋತರು. 2019ರಲ್ಲಿ ಎಸ್.ಟಿ ಸೋಮಶೇಖರ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಬಂದರು. ಪಕ್ಷಾಂತರ ಮಾಡಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ರಚನೆಗೆ ನೆರವಾದ ಎಸ್.ಟಿ ಸೋಮಶೇಖರ್ ಮತ್ತು ಜಗ್ಗೇಶ್ 2023ರ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪೈಪೋಟಿಗಿಳಿಯುವ ಸಾಧ್ಯತೆ ಇತ್ತು. ಈ ಹಿನ್ನೆಲೆ ಬಿಜೆಪಿ ವರಿಷ್ಠರು, 2022ರ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಜಗ್ಗೇಶ್‌ಗೆ ಅವಕಾಶ ಮಾಡಿಕೊಟ್ಟರು. ಅದರಂತೆ ಚುನಾವಣೆಯಲ್ಲಿ ಗೆದ್ದ ಜಗ್ಗೇಶ್ ಸದ್ಯ ರಾಜ್ಯಸಭಾ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಶಶಿಕುಮಾರ್

ಸಿನಿಮಾ ರಂಗದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಶಶಿಕುಮಾರ್ 90ರ ದಶಕದ ಅಂತ್ಯಕ್ಕೆ ಸಂಯುಕ್ತ ಜನತಾ ದಳ ಸೇರಿದರು. 1999ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ದಾಖಲಿಸಿದ್ದ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಸಂಯುಕ್ತ ಜನತಾ ದಳ ಇಬ್ಭಾಗವಾದಾಗ ಜೆಡಿಸ್‌ನಲ್ಲಿ ಉಳಿದುಕೊಂಡ ಅವರು 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಶಿಕುಮಾರ್ ಬಿಜೆಪಿಯ ತಿಪ್ಪೆಸ್ವಾಮಿ ಅವರ ವಿರುದ್ಧ ಸೋಲನುಭವಿಸಿದ್ದರು. 2018ರಲ್ಲಿ ಕಾಂಗ್ರೆಸ್ ತೊರೆದು ದೇವೇಗೌಡರ ಸಮ್ಮುಖದಲ್ಲಿ ಮತ್ತೆ ಜೆಡಿಎಸ್ ಸೇರಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಶಶಿಕುಮಾರ್ 2022ರಲ್ಲಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಈ ಬಾರಿ ಚಳ್ಳಕೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಆದರೆ, ಅವರಿಗೆ ಪಕ್ಷದಿಂದ ಟಿಕೆಟ್ ಲಭಿಸಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಉಮಾಶ್ರೀ

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಖ್ಯಾತಿ ಗಳಿಸಿದ ಉಮಾಶ್ರೀ 90ರ ದಶಕದ ಕೊನೆಯ ಹೊತ್ತಿಗೆ ರಾಜಕಾರಣದತ್ತ ಮುಖ ಮಾಡಿದರು. 2001ರಲ್ಲಿ ಕಾಂಗ್ರೆಸ್ ಸೇರಿದ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾದರು. 2008ರ ವಿಧಾನಸಭಾ ಚುನವಾಣೆಯಲ್ಲಿ ತೇರದಾಳ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಮಾಶ್ರೀ ಸಿದ್ದು ಸವದಿ ಎದುರು ಸೋಲುನುಭವಿಸಿದ್ದರು. ನಂತರ 2013ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿ ಅಧಿಕಾರ ನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಸೋಲನುಭವಿಸಿದ ಅವರು ತಕ್ಕಮಟ್ಟಿಗೆ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದರು. ಸದ್ಯ ತೇರದಾಳ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.