ಚುನಾವಣೆ 2023 | ಜೋಶಿ ಹಣಿಯಲು ಖೆಡ್ಡಾ ತೋಡಿ ಅಖಾಡಕ್ಕಿಳಿದ ಶೆಟ್ಟರ್

Date:

Advertisements
ಧಾರವಾಡ ಲೋಕಸಭಾ ಕ್ಷೇತ್ರದ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿರುವ ಪ್ರಲ್ಹಾದ್‌ ಜೋಶಿಗೆ ಜಗದೀಶ್‌ ಶೆಟ್ಟರ್‌ ಅವರು ಎದುರಾಳಿಯಾಗುವ ಮೂಲಕ, ಉತ್ತರ ಕರ್ನಾಟಕದಲ್ಲಿ ತಾನು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂಬುದನ್ನು ಸಾಬೀತುಪಡಿಸುತ್ತಲೇ, ಜೋಶಿಯ ರಾಜಕೀಯ ಜೋಶ್‌ ಅನ್ನು ಮಂಕಾಗಿಸುತ್ತಾರಾ? 

ಬಿಜೆಪಿ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ನಾಯಕರು ಹೇಳಿದ್ದೇ ವೇದವಾಕ್ಯ ಎಂದುಕೊಂಡು, ಆ ನಾಯಕರ ಉಗುಳು ಕೂಡ ದಾಟಲು ಹಿಂದೇಟು ಹಾಕುವ ರಾಜ್ಯ ಬಿಜೆಪಿ ನಾಯಕರ ಜೀತಪದ್ಧತಿ  ನಡುವೆ ಜಗದೀಶ್ ಶೆಟ್ಟರ್ ಇಟ್ಟ ಒಂದು ದಿಟ್ಟ ಹೆಜ್ಜೆ ಬಿಜೆಪಿ ನಾಯಕರನ್ನು ಅಕ್ಷರಶಃ ಅಲುಗಾಡಿಸಿದೆ.

ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಅಧಿಕೃತ ಸುದ್ದಿ ಭಾನುವಾರ ಹೊರಬೀಳುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಬಿರುಗಾಳಿಯೇ ಎದ್ದಿತ್ತು.

ಪರಿಣಾಮ ಲಿಂಗಾಯತರ ಪ್ರಾಬಲ್ಯದ ಪಕ್ಷ ಎನ್ನುವ ಹಣೆಪಟ್ಟಿ ಹೊತ್ತ ಬಿಜೆಪಿ ಕೂಡಲೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾಧ್ಯಮಗಳ ಮುಂದೆ ಬರುವಂತೆ ಮಾಡಿ, “ಲಿಂಗಾಯತರು ಬಿಜೆಪಿ ಜೊತೆಗೆಯೇ ಇರಲಿದ್ದಾರೆ” ಎನ್ನುವ ಸಂದೇಶ ಸಾರಲು ಪ್ರಯತ್ನಿಸಿತು.

Advertisements

ಜಗದೀಶ್ ಶೆಟ್ಟರ್ ಸುತ್ತ ನಡೆಯುತ್ತಿರುವ ರಾಜಕೀಯ ಪ್ರಹಸನದ ಸೂತ್ರದಾರ, ಧಾರವಾಡ ಲೋಕಸಭಾ ಸದಸ್ಯ ಪ್ರಲ್ಹಾದ್ ಜೋಶಿ ತುರ್ತು ಓಡಿಬಂದು, ಹುಬ್ಬಳ್ಳಿ ಗೋಕುಲ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಪಾಲಿಕೆ ಸದಸ್ಯರು, ಅದರಲ್ಲೂ ಮುಖ್ಯವಾಗಿ ಜಗದೀಶ್ ಶೆಟ್ಟರ್ ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದರು.

ಶೆಟ್ಟರ್ ಸೃಷ್ಟಿಸಿದ ಬಿರುಗಾಳಿ ಬಿಜೆಪಿಯೊಳಗೆ ಇನ್ನೂ ತಣ್ಣಗಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಕೂಡ ಮಾಧ್ಯಮಗಳ ಮುಂದೆ ಬಂದು, “ಮುಂದಿನ ದಿನಗಳಲ್ಲಿ ಬಿಜೆಪಿ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿದೆ” ಎಂದಿದ್ದಾರೆ. ಅತ್ತ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಕೂಡ, “ಯುವ ಲಿಂಗಾಯತ ನಾಯಕರನ್ನು ಬಿಜೆಪಿ ಬೆಳೆಸಲಿದೆ” ಎಂದು ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಜೋಷಿ, ಬಿ.ಎಲ್.ಸಂತೋಷ್‌ಗಾಗಿ ಲಿಂಗಾಯಿತ ಶೆಟ್ಟರ್ ಬಲಿ

ಒಟ್ಟಾರೆ ಲಿಂಗಾಯತ ಸಮುದಾಯ ಮತ್ತು ನಾಯಕರು ಬಿಜೆಪಿಗೆ ಎಷ್ಟು ಮುಖ್ಯ ಇದ್ದಾರೆ ಎಂಬುದು ಯಡಿಯೂರಪ್ಪ, ನಂತರ ಇದೀಗ ಜಗದೀಶ್ ಶೆಟ್ಟರ್ ಮೂಲಕ ಬಿಜೆಪಿಗೆ ಪ್ರತಿಫಲನವಾಗುವ ಎಲ್ಲ ಲಕ್ಷಣಗಳು ಸದ್ಯ ಎದ್ದು ಕಾಣುತ್ತಿವೆ. ಗಾಣಿಗ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಕಾಂಗ್ರೆಸ್ಸಿಗೆ ಕಾಲಿಟ್ಟಾಗ ನಡೆಯದ ದಿಢೀರ್ ಚಟುವಟಿಕೆಗಳು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಸಿಗೆ ಕಾಲಿಡುತ್ತಿದ್ದಂತೆ ನಡೆಯುತ್ತಿರುವುದನ್ನು ಕಂಡರೆ ಬಿಜೆಪಿಗೆ ಮತ್ತು ಶೆಟ್ಟರ್ ಜೊತೆಗೆಯೇ ಇದ್ದು ಒಳಗೊಳಗೆ ಅವರನ್ನು ತುಳಿಯುತ್ತಿದ್ದ ಪಲ್ಹಾದ್ ಜೋಶಿಗೆ ಪೆಟ್ಟು ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟಿದೆ!

ಹಾಗೆಯೇ ಶೆಟ್ಟರ್‌ ಮನವೊಲಿಸಲು ಪ್ರಲ್ಹಾದ್‌ ಜೋಶಿ ಭೇಟಿ ಮಾಡಿದಾಗ, “ನೋಡಿ ಇಡಿ, ಐಟಿ ಸಮಸ್ಯೆಗಳೆಲ್ಲಾ ಬರುತ್ತವೆ” ಎಂದು ಬೆದರಿಸಿದ್ದಾರೆ. ಅದಕ್ಕೆ ಶೆಟ್ಟರ್‌ ಕೋಪಗೊಂಡು, “ನನಗ್ಯಾವ ಇಡಿ, ಐಟಿಗಳು ಹೆದರಿಸೋಕೆ ಆಗಲ್ಲ” ಅಂತ ತೀಕ್ಷ್ಣವಾಗಿಯೇ ಜೋಶಿಗೆ ಎದುರೇಟು ನೀಡಿದ್ದಾರೆ ಎನ್ನುವ ಮಾಹಿತಿ ಇದೆ.

ಬಿಜೆಪಿಯಿಂದ ಹೊರಬಂದು ಜಗದೀಶ್ ಶೆಟ್ಟರ್ ಮಾತನಾಡುತ್ತ, “ಬಿಜೆಪಿ ಹೈಕಮಾಂಡ್ ನಾಯಕರ ಬಗ್ಗೆ ಏನು ಮಾತನಾಡಲಾರೆ. ಅವರಿಗೆ ಇಲ್ಲಿಯ ಗ್ರೌಂಡ್ ರಿಪೋರ್ಟ್ ಸರಿಯಾಗಿ ಗೊತ್ತಿಲ್ಲ. ಮತ್ತು ಇಲ್ಲಿಯ ನಾಯಕರು ಸರಿಯಾಗಿ ಮನವರಿಕೆ ಮಾಡಿಕೊಟ್ಟಿಲ್ಲ. ಅಲ್ಲದೇ ರಾಜ್ಯದ ಕೆಲವೇ ನಾಯಕರು ಇಡೀ ಬಿಜೆಪಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮಗೆ ಅಡ್ಡಿಯಾಗುವ ಲಿಂಗಾಯತ ನಾಯಕರನ್ನು ಸೈಡ್‌ಲೈನ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳಿಂದಲೇ ನನಗೆ ಟಿಕೆಟ್ ತಪ್ಪಿದೆ” ಎಂದು ಪ್ರಲ್ಹಾದ್ ಜೋಶಿ ಹೆಸರು ತುಟಿ ಮೇಲೆ ಇದ್ದರೂ ನುಂಗಿಕೊಂಡು ಇಡೀ ನಾಟಕದ ಹಿಂದಿನ ಸೂತ್ರದಾರರನ್ನು ಚಿತ್ರಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರ ಒಟ್ಟಾರೆ ಮಾತುಗಳ ಹಿಂದಿನ ಕಹಿ ರಾಜ್ಯ ನಾಯಕರು ಎಂಬುದು ಈಗ ಸ್ಪಷ್ಟವಾಗಿದೆ. ಈಗಾಗಲೇ ಬಿಜೆಪಿಯೊಳಗೆ ಬಹುತೇಕ ಅಧಿಕಾರ, ಸ್ಥಾನಗಳನ್ನು ಶೆಟ್ಟರ್ ಅನುಭವಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ವಿಧಾನಸಭಾ ಸಭಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನಮಾನ ಶೆಟ್ಟರ್‌ಗೆ ಲಭಿಸಿದೆ.

ಈ ಎಲ್ಲ ಅಧಿಕಾರ ಅನುಭವಿಸಿ ಬಂದ ಶೆಟ್ಟರ್, ಕಾಂಗ್ರೆಸ್ಸಿಗೆ ಹೋಗಿ, ಬಿಜೆಪಿ ನೀಡಿದ್ದಕ್ಕಿಂತ ಹೆಚ್ಚಿನ ಅಧಿಕಾರ ಅನುಭವಿಸುತ್ತೇನೆ ಎನ್ನುವ ಭ್ರಮೆಯಲ್ಲಿ ಇರಲಿಕ್ಕಿಲ್ಲ. ಶೆಟ್ಟರ್ ಕಾಂಗ್ರೆಸ್ ಸೇರಿರುವ ದಾರಿ ಸ್ಪಷ್ಟವಾಗಿದೆ; ರಾಜಕೀಯ ಜೀವನದಿಂದ ನಿವೃತ್ತಿಯಾಗುವುದರೊಳಗೆ ತನ್ನ ಜೊತೆಗೆಯೇ ಇದ್ದು ಖೆಡ್ಡಾ ತೋಡಿದ ಪ್ರಲ್ಹಾದ್ ಜೋಶಿಗೆ ಮರಳಿ ಖೆಡ್ಡಾ ತೋಡುವುದು! ಇದು ಸ್ವತಃ ಜೋಶಿಗೂ ತಿಳಿಯದ ಸಂಗತಿ ಏನಲ್ಲ!

ಜಗದೀಶ್‌ ಶೆಟ್ಟರ್
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಜರಿದ್ದು ಶೆಟ್ಟರ್ ಅವರಿಗೆ ಶುಭ ಕೋರಿದರು.

ಜೊತೆ ಜೊತೆಗೆ ಬೆಳೆದ ಇಬ್ಬರು ಈಗ ಎದುರಾಳಿಗಳು!

ವೃತ್ತಿಯಿಂದ ಕೈಗಾರಿಕೋದ್ಯಮಿಯಾಗಿದ್ದ ಪ್ರಲ್ಹಾದ್ ಜೋಶಿ 1992ರಿಂದ 1994ರವರೆಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ಎಂದೂ ಕರೆಯುತ್ತಾರೆ) ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿ ಸಂಘಟಿಸುವ ಮೂಲಕ ರಾಜಕೀಯವಾಗಿ ಮುನ್ನೆಲೆಗೆ ಬಂದವರು. ಆ ವರ್ಷಗಳಲ್ಲಿ ʼಕಾಶ್ಮೀರ ಉಳಿಸಿ ಆಂದೋಲನʼ ಅವರನ್ನು  ಉತ್ತರ ಕರ್ನಾಟಕದಲ್ಲಿ ಪರಿಚಿತ ವ್ಯಕ್ತಿಯಾಗಿ ಪ್ರತಿಷ್ಠಾಪಿಸಿತು. ನಂತರ ಅವರು ಧಾರವಾಡ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದರು.

1994ರ ಚುನಾವಣೆಯಲ್ಲಿ ಈದ್ಗಾ ಮೈದಾನ ಜಗಳ, ಬಾಬರಿ ಮಸೀದಿ ಉರುಳಿಸಿದ್ದು ಮತ್ತು ಬಿಟ್ಟೂಬಿಡದೆ ನಡೆದ ಕೋಮುದಂಗೆಗಳು ಸಂಘ ಪರಿವಾರದ ವ್ಯವಸ್ಥಿತ ಚಟುವಟಿಕೆಯ ಹುಬ್ಬಳ್ಳಿಯಲ್ಲಿ ಮತೀಯ ಧ್ರುವೀಕರಣಕ್ಕೆ ಕಾರಣವಾಗಿ ಜಗದೀಶ್ ಶೆಟ್ಟರ್ ಅವರನ್ನು ಅನಾಯಾಸವಾಗಿ ವಿಧಾನಸಭೆ ಪ್ರವೇಶಿಸುವಂತೆ ಮಾಡಿತು. 

2004ರಲ್ಲಿ 14ನೇ ಲೋಕಸಭೆ ಚುನಾವಣೆ ಸ್ಪರ್ಧಿಸಿದ ಜೋಶಿ, ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕರ್ನಾಟಕದ 28 ಕ್ಷೇತ್ರಗಳ ನಡುವೆ ಎರಡನೇ ಅತಿ ಹೆಚ್ಚು ಅಂತರದಿಂದ ಗೆದ್ದರು. 2019ರಲ್ಲಿ ಅವರು ಒಂದು ಲಕ್ಷ ಮತಗಳ ಅಂತರದಿಂದ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಯಿತು. ಅತ್ತ ಕೇಂದ್ರದಲ್ಲಿ ಜೋಶಿ ಬೆಳೆಯುತ್ತಿದ್ದರೆ ಇತ್ತ, ಜಗದೀಶ್ ಶೆಟ್ಟರ್ ರಾಜಕೀಯವಾಗಿ ಬೆಳೆಯುತ್ತ 2012 ಜುಲೈ 12ರಿಂದ 2013 ಮೇ 12ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಉನ್ನತ ಸ್ಥಾನ ಅನುಭವಿಸಿದರು.

ಹೀಗೆ ಜೊತೆ ಜೊತೆಯಾಗಿಯೇ ಬೆಳೆದ ಜೋಶಿ ಮತ್ತು ಶೆಟ್ಟರ್ ನಡುವೆ 2018ರಿಂದ ಪರಸ್ಪರ ವೈಮನಸ್ಸು ಹೆಚ್ಚಾಗಿದೆ. ಜಗದೀಶ್ ಶೆಟ್ಟರ್ ಕಾರಸ್ಥಾನದಲ್ಲಿ ಜೋಶಿ ಕೈಯಾಡಿಸುತ್ತ ಶೆಟ್ಟರ್ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದ್ದಾರೆ. ಮೋದಿ ಸಂಪುಟದಲ್ಲಿ ಜೋಶಿ ಸಚಿವರಾದ ಮೇಲಂತೂ ಅವರನ್ನು ಕ್ಷೇತ್ರದಲ್ಲಿ ಹಿಡಿಯುವವರೇ ಇಲ್ಲ.

ಶೆಟ್ಟರ್ ಮನೆಯೊಳಗಾಗುತ್ತಿದ್ದ ರಾಜಕೀಯ ತೀರ್ಮಾನಗಳು ಈಗ ಜೋಶಿ ಮನೆಯಂಗಳಕ್ಕೆ ಶಿಫ್ಟ್ ಆಗಿವೆ.  ಧಾರವಾಡ ಆಯಕಟ್ಟಿನ ಜಾಗಗಳಲ್ಲಿ ಶೆಟ್ಟರ್‌ ಬೆಂಬಲಿಗರ ಬದಲು, ಜೋಶಿ ತನ್ನ ಆಪ್ತರನ್ನು ನೇಮಿಸಿದ್ದಾರೆ ಎನ್ನುವ ಆರೋಪಗಳು ಕೂಡ ಇವೆ. ಜೋಶಿ ನಡೆ ಶೆಟ್ಟರ್‌ಗೆ ಬಿಸಿತುಪ್ಪವಾಗಿಯೇ  ಪರಿಣಮಿಸಿತ್ತು.

2019ರ ಹೊತ್ತಿಗೆ, ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪ್ರಹಸನ ಆರಂಭವಾಗುತ್ತಿದ್ದಂತೆ ಪ್ರಲ್ಹಾದ್ ಜೋಶಿ ಮತ್ತು ಬಿ ಎಲ್ ಸಂತೋಷ್ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಹೆಚ್ಚು ಮುನ್ನಲೆಗೆ ಬಂದವು. ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹೊಸ ಕೋಟ್ ಕೂಡ ಹೊಲಿಸಿಕೊಂಡಿದ್ದರು ಎನ್ನುವ ಮಾತಿದೆ.

ಕೈ ತಪ್ಪಿದ ಮುಖ್ಯಮಂತ್ರಿ ಸ್ಥಾನ ಪಡೆಯಲು ಒಳಗೊಳಗೆ ಹವಣಿಸುತ್ತಿರುವ ಪ್ರಲ್ಹಾದ್ ಜೋಶಿ, ತನಗೆ ಮುಳುವಾಗುವ ಎಲ್ಲ ನಾಯಕರನ್ನು ಅದರಲ್ಲೂ ಲಿಂಗಾಯತ ನಾಯಕರನ್ನು ಸೈಡ್‌ಲೈನ್ ಮಾಡುತ್ತಿದ್ದಾರೆ ಎಂಬುದು ಜಗದೀಶ್ ಶೆಟ್ಟರ್ ಅವರ ಮಾತಲ್ಲೇ ಕಂಡುಬರುತ್ತಿದೆ. ಹೇಗೂ ತನ್ನ ರಾಜಕೀಯ ಜೀವನಕ್ಕೆ ಮುಳ್ಳಾದ ಜೋಶಿಗೆ ತನ್ನ ಶಕ್ತಿ ಏನು ಎಂಬುದನ್ನು ಮನದಟ್ಟು ಮಾಡಲು ಶೆಟ್ಟರ್ ಕಾಂಗ್ರೆಸ್ ಆಶ್ರಯ ಪಡೆದಿದ್ದಾರೆ. ಚುನಾವಣಾ ರಾಜಕೀಯ ಮೂಲಕ ಉತ್ತರಿಸಲು ಶೆಟ್ಟರ್‌ ಸಿದ್ಧವಾಗಿದ್ದಾರೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿಗೆ ಎದುರಾಳಿಯಾಗಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಈಗ ಹರಳುಗಟ್ಟಿವೆ.

ಧಾರವಾಡ ಲೋಕಸಭಾ ಕ್ಷೇತ್ರದ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿರುವ ಪ್ರಲ್ಹಾದ್‌ ಜೋಶಿ ಹಿಂದೆ ನಿಂತಿರುವುದು ಲಿಂಗಾಯತ ಎಂಬ ದೊಡ್ಡ ಸಮುದಾಯ! ಮತ್ತು ಜಗದೀಶ್‌ ಶೆಟ್ಟರ್‌ ಪ್ರಭಾವ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೋಶಿಗೆ ಎದುರಾಳಿಯಾಗುವ ಮೂಲಕ, ಉತ್ತರ ಕರ್ನಾಟಕದಲ್ಲಿ ತಾನು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂಬುದನ್ನು ಸಾಬೀತುಪಡಿಸುತ್ತಲೇ ಪ್ರಲ್ಹಾದ್‌ ಜೋಶಿಯ ರಾಜಕೀಯ ಜೋಶ್‌ ಅನ್ನು ಮಂಕಾಗಿಸುತ್ತಾರಾ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X