ಭದ್ರಾವತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದರು ನಗರಸಭೆ ಮತ್ತು ಆರೋಗ್ಯ ಇಲಾಖೆ ಸುಮ್ಮನೆ ಕುಳಿತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನಗರದಲ್ಲಿ ಪ್ರಸ್ತುತ 94 ಮಂದಿ ಡೆಂಗ್ಯೂಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಭದ್ರಾವತಿ ನಗರದ ಜಾನ್ನಾಪುರ, ಅಂಬೇಡ್ಕರ್ ಕಾಲೋನಿ, ಸಂತೆ ಮೈದಾನ, ಎನ್‌ಎಂಸಿ ಮುಖ್ಯ ರಸ್ತೆ, ಕನಕ ನಗರ, ಭೂತನ ಗುಡಿ ಹಾಗೂ ನಗರದ ಹೊರವಲಯದ ಬೆಳ್ಳಿಗೆರೆ ಹೀಗೆ, ಎಲ್ಲೇ ನೋಡಿದರು ಕಸದ ರಾಶಿ ಮತ್ತು ಚರಂಡಿಗಳು ಸ್ವಚ್ಛವಾಗಿಲ್ಲ.
ನಗರದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚವಾಗಿಲ್ಲ. ಆದರೂ ಜನರು ಅಲ್ಲಿನ ನೀರನ್ನು, ಕುಡಿಯುವುದಲ್ಲದೇ ಬಾಟಲ್‌ಗೆ ತುಂಬಿಸಿಕೊಳ್ಳುತ್ತಿದ್ದಾರೆ. ಕನಕ ನಗರದ ಭದ್ರಾನದಿ ಸೇತುವೆ ಮೇಲಿಂದ ಮಲಿನವಾದ ಕಸಗಳನ್ನು ಕೆಲವರು ನದಿಗೆ ಎಸೆಯುತ್ತಿದ್ದಾರೆ. ಇದು ಸೊಳ್ಳೆಗಳು ಹೆಚ್ಚಾಗಲು ಕಾರಣವಾಗಿದೆ.
ಆದರೆ, ಮೇಲ್ನೋಟಕ್ಕೆ ನಗರದಲ್ಲಿ ಯಾವದೇ ಸ್ವಚ್ಛತೆ ಕಂಡುಬರುತ್ತಿಲ್ಲ. ಜಾಗೃತಿಯಬಗ್ಗೆ ಜನರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಯಾವ ಆಶಾ ಕಾರ್ಯಕರ್ತರು ಬಂದು ಮಾಹಿತಿ ನೀಡಿಲ್ಲ ಮತ್ತು ಔಷಧಿ ಸಿಂಪಡಿಸುವ ಯಾವದೇ ಕ್ರಮ ತಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ತ್ವರಿತಗತಿಯಿಂದ ನಗರದಲ್ಲಿ ಸ್ವಚ್ಚತಾ ಕ್ರಮಗಳು ಮತ್ತು ಔಷಧಿ ಸಿಂಪಡಿಸಿ, ಜನರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಇಲ್ಲವಾದಲ್ಲಿ ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯರ ದೂರಿನಬಗ್ಗೆ ವಿಚಾರಿಸಲು ಈ ದಿನ.ಕಾಮ್ ನಗರಸಭೆ ಆಯುಕ್ತರನ್ನು ಸಂಪರ್ಕಿಸಲು ಯತ್ನಿಸಿತು,ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.
ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ಹಿರಿಯ ಆರೋಗ್ಯ ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ಡೆಂಗ್ಯೂ ಹರಡದಂತೆ ತಡೆಯಲು, ಆರೋಗ್ಯ ಇಲಾಖೆ ನಗರ ಸ್ವಚ್ಛತಾ ಕಸದ ವಾಹನಗಳಿಗೆ ಡೆಂಗ್ಯೂ ಅರಿವು ಮೂಡಿಸುವ ಹಾಡು ಹಾಕಲು ಸೂಚಿಸಿದ್ದೇವೆ. ಹಾಗೆ, ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸಿ, ಎಚ್ಚರದಿಂದ ಇರಲು ಮತ್ತು ಸೊಳ್ಳೆ ಹರಡಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಮಾಹಿತಿ ನೀಡಲಾಗುತ್ತಿದೆ. ಕರಪತ್ರಗಳ ಮುಖಾಂತರ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ಡೆಂಗ್ಯೂ ಮತ್ತು ಸಾಂಕ್ರಾಮಿಕ ಕಾಯಿಲೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.