ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದ ವಿದ್ಯುದಾಗಾರದಲ್ಲಿ ನೀರಿನ ಕೊರತೆ ಉಂಟಾಗಿದೆ. ಮಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ದಿನೆದಿನೇ ಕ್ಷೀಣಿಸುತ್ತಿದೆ. ಬೇಸಿಗೆ ಬರುವಷ್ಟರಲ್ಲಿ ಜಲಾಶಯದ ಜಲವಿದ್ಯುತ್ ಉತ್ಪಾದನೆ ಹಂತಹಂತವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಈಗಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಯಾಗಿದ್ದು ರೈತರು, ಜನರು ವಿದ್ಯುತ್ ವ್ಯತ್ಯಯದಿಂದ ಪರಿತಪಿಸುತ್ತಿದ್ದಾರೆ. ಜನರು ಬೇಸಿಗೆಯಲ್ಲಿ ಇನ್ನಷ್ಟು ಸಂಕಷ್ಟ ಎದುರಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಲಿಂಗಮನಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಗೆ ಇನ್ನು ಕೇವಲ 140ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ. ಮಳೆ ಬಾರದೇ ಹೋದರೆ ಬೇಸಿಗೆಯ ಹೊತ್ತಿಗೆ ಜಲಾಶಯದ ನೀರು ಡೆಡ್ ಸ್ಟೋರೇಜ್ ತಲುಪಲಿದೆ.
ಸಾಕಷ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಡಿಕೆ ತಕ್ಕಷ್ಟು ವಿದ್ಯುತ್ ಪೂರೈಸಿದ ಹೆಗ್ಗಳಿಕೆ ಶರಾವತಿ ಕೊಳ್ಳದ ವಿದ್ಯುದಾಗಾರಗಳಿಗಿದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯ ಶೇ. 50ರಷ್ಟು ಮಾತ್ರ ಭರ್ತಿಯಾಗಿದೆ. ಈ ಐದು ಜಲ ವಿದ್ಯುದಾಗಾರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆಯ ಶೇ. 25ರಷ್ಟು ಪೂರೈಸಬಹುದು.
ಜಲಾಶಯದಲ್ಲಿ ಬುಧವಾರ (ಸೆ.25) 1,786.30ಅಡಿ ನೀರಿತ್ತು. ಒಳ ಹರಿವು 629 ಕ್ಯೂಸೆಕ್. ಹಾಲಿ ವಿದ್ಯುತ್ಗೆ 2,691.75 ಕ್ಯೂಸೆಕ್ ನೀರನ್ನು ಬಳಸಲಾಗುತ್ತಿದೆ. ಹಾಲಿ ಜಲಾಶಯದಲ್ಲಿ 43.45% ನೀರಿದೆ. ಕಳೆದ ವರ್ಷ ಜಲಾಶಯದಲ್ಲಿ ಈ ವೇಳೆಗೆ 1,813.60ಅಡಿ ನೀರಿತ್ತು.