ರಾಜ್ಯ ವಿಧಾನಸಭಾ ಚುನಾವಣೆಯ ಮುಖ್ಯಘಟ್ಟವಾದ ಮತದಾನ ಪ್ರಕ್ರಿಯೆ ಬುಧವಾರ ಸಂಪನ್ನಗೊಂಡಿದೆ. ಎಲ್ಲ ರಾಜಕೀಯ ನಾಯಕರು ಚುನಾವಣೆ ಪ್ರಚಾರದಿಂದ ನಿರಾಳರಾಗಿದ್ದು, ಫಲಿತಾಂಶ ಕಡೆ ದೃಷ್ಟಿ ನೆಟ್ಟಿದ್ದಾರೆ.
ಈ ನಡುವೆ ಬಹುತೇಕ ರಾಜಕೀಯ ನಾಯಕರು ಸ್ವಲ್ಪ ರಿಲ್ಯಾಕ್ಸ್ ಆಗಿದ್ದು, ತಮ್ಮ ತಮ್ಮ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾವನಾತ್ಮಕ ಕೃತಜ್ಞತೆ ಸಲ್ಲಿಸಿದ್ದಾರೆ.
“ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತರು ಮತ್ತು ಅಭಿಮಾನಿ ಬಂಧುಗಳೇ, ತಾವೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾತ್ರಿ-ಹಗಲೆನ್ನದೆ, ಊಟ-ತಿಂಡಿ-ವಿಶ್ರಾಂತಿಯನ್ನು ಮರೆತು ನಿರಂತರವಾಗಿ ಕೆಲಸ ಮಾಡಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಧನ್ಯವಾದಗಳು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ನಾನು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ಬಂದು ನನ್ನ ಮೇಲಿನ ಪ್ರೀತಿ-ಅಭಿಮಾನದಿಂದ ತಮ್ಮ ಪಾಡಿಗೆ ತಾವು ಪ್ರಚಾರ ಮಾಡಿದ್ದಾರೆ. ಅವರೆಲ್ಲರೂ ನನಗೆ ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಲು ಕೂಡಾ ಸಾಧ್ಯವಾಗಿಲ್ಲ. ಈ ಪ್ರೀತಿ ಮತ್ತು ಅಭಿಮಾನವೇ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಶಕ್ತಿ. ಇವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು” ಎಂದು ಹೇಳಿದ್ದಾರೆ.
“ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ: ಚುನಾವಣೆಗಾಗಿ ಮನೆ ಮತ್ತು ಸಂಸಾರ ತೊರೆದು ಕೆಲಸ ಮಾಡಿದ್ದೀರಿ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ. ಪ್ರಾಮಾಣಿಕವಾದ ನಮ್ಮ ಹೋರಾಟ ಖಂಡಿತ ಫಲಪ್ರದವಾಗುತ್ತದೆ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.