- ಪ್ರಧಾನಿ ಮೋದಿಯ ಧಮ್ಮು ತಾಕತ್ತು ಕೇಳಿದ ಕಾಂಗ್ರೆಸ್
- ಗುತ್ತಿಗೆದಾರರ ಸಂಘದ ಜೊತೆಗೆ ಮಾತನಾಡುವಂತೆ ಕುಟುಕು
ಸೂಡಾನ್‌ನಲ್ಲಿ ಸಿಲುಕಿದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಕುರಿತು ಮಾತನಾಡದ ಪ್ರಧಾನಿ ಮೋದಿ ಅವರು ಭ್ರಷ್ಟರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ ಮೋದಿ ಅವರು ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡಿರುವ ಕುರಿತು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿಯ ಮೋದಿಯವರ ಕಾಲೆಳೆದಿದೆ.
“ಸೂಡಾನ್‌ನಲ್ಲಿ ಸಿಲುಕಿದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರದ ಕ್ರಮಗಳೇನು? ಕೇಂದ್ರ & ರಾಜ್ಯ ಸರ್ಕಾರಗಳು ಏಕೆ ಈ ಬಗ್ಗೆ ಮೌನವಹಿಸಿವೆ? ಭ್ರಷ್ಟರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸುವ ಮೋದಿ ಅವರೇ, ನಮ್ಮ ಜನರನ್ನು ರಕ್ಷಿಸುವಲ್ಲಿ ಆಸಕ್ತಿ ಇಲ್ಲವೇಕೆ? ಬುಡಕಟ್ಟು ಜನರ ಬಗ್ಗೆ ತಾತ್ಸಾರವೇಕೆ?” ಎಂದು ಪ್ರಶ್ನಿಸಿದೆ.
ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ. ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ. ಮೋದಿ ‘ಭ್ರಷ್ಟಾಚಾರ’ದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?” ಎಂದು ಕಾಂಗ್ರೆಸ್ ಕೇಳಿದೆ.
“ಪ್ರಧಾನಿ ಮೋದಿ ಅವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ?” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.
“ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ನರೋಡಾ ಗಾಮ್ ಹತ್ಯೆ ಪ್ರಕರಣ | ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಸೇರಿದಂತೆ ಎಲ್ಲ ಆರೋಪಿಗಳು ಖುಲಾಸೆ
“ರೌಡಿಗಳಿಗೆ ಕೈ ಮುಗಿಯುತ್ತಾರೆ. ಭ್ರಷ್ಟಾಚಾರಿಗಳಿಗೆ ಕರೆ ಮಾಡಿ ಕುಶಲ ವಿಚಾರಿಸುತ್ತಾರೆ. ಆದರೆ ಭ್ರಷ್ಟಾಚಾರದ ದೂರುಗಳ ಪತ್ರಗಳಿಗೆ ಮಾತ್ರ ಮೌನವಹಿಸುತ್ತಾರೆ. ನೆರೆ ಸಂತ್ರಸ್ತರ ಗೋಳುಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಅಪರೂಪದ ಪ್ರಧಾನಿ, ಮೋದಿ. ಭ್ರಷ್ಟಾಚಾರಕ್ಕೆ ಮೋದಿಯೇ ಮಹಾಪೋಷಕರು” ಎಂದು ಕುಟುಕಿದೆ.
ಮೋದಿ ಅವರಿಗೆ ಸವಾಲು ಹಾಕಿರುವ ಕಾಂಗ್ರೆಸ್, “ನಿಮಗೆ ದಮ್ಮು, ತಾಕತ್ತು ಇದ್ದರೆ ಒಂದೇ ಒಂದು ಬಾರಿ ಗುತ್ತಿಗೆದಾರರ ಸಂಘದವರೊಂದಿಗೆ ಮಾತನಾಡಿ. ಒಂದೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದೊಂದಿಗೆ ಮಾತನಾಡಿ. ಒಂದೇ ಒಂದು ಬಾರಿ PSI ಹಗರಣದಿಂದ ಸಂತ್ರಸ್ತರಾದ ಅಭ್ಯರ್ಥಿಗಳೊಂದಿಗೆ ಮಾತನಾಡಿ. ಇದು ನಿಮ್ಮಿಂದ ಸಾಧ್ಯವೇ?” ಎಂದಿದೆ.