ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣವೆಂದು ಆರೋಪಿಸಿರುವ ಮಾಜಿ ಸಚಿವ ಡಾ. ಸುಧಾಕರ್ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬುಧವಾರ ಟ್ವೀಟ್ ಮಾಡಿದ್ದ ಸುಧಾಕರ್, “ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ” ಎಂದು ಹೇಳಿದ್ದರು.
ಸುಧಾಕರ್ ಆರೋಪವನ್ನು ನಿರಾಕರಿಸಿರುವ ಎಂಟಿಬಿ ನಾಗರಾಜ್, “ಇಷ್ಟು ದಿನ ಮೌನವಾಗಿದ್ದು, ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು? ಸುಧಾಕರ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸುಧಾಕರ್ ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಮೈತ್ರಿ ಸರ್ಕಾರದ ಆಡಳಿತ ವೇಳೆ, ಸಿದ್ದರಾಮಯ್ಯರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಿದ್ದೆ. ಆಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿಯೆಂದು ಅವರು ಹೇಳಿದ್ದರಷ್ಟೇ” ಎಂದು ಸ್ಪಷ್ಟನೆ ನೀಡಿದ್ದಾರೆ.