ಮೈಸೂರು | ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ಸೂಚಿಸಿದ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ

Date:

Advertisements
  • 13 ಷರತ್ತುಗಳೊಂದಿಗೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲ
  • ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ನಿರ್ಧಾರ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಜೀವ ವಿರೋಧಿ ಆರ್‌ಎಸ್‌ಎಸ್‌–ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ನೀಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಚಾಲನಾ ಸಮಿತಿ ನಿರ್ಧರಿಸಿದೆ.

ಸಮಿತಿಯ ಮುಖಂಡರು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. “2014ರಲ್ಲಿ ಆರ್‌ಎಸ್‌ಎಸ್‌-ಬಿಜೆಪಿ ಕೃತಕವಾಗಿ ಸೃಷ್ಟಿಸಿದ ಕೋಮುದ್ವೇಷದ ಗುಜರಾತ್‌ ಮಾಡಲ್‌ ಭಾಗವಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಅಲ್ಲಿಂದ ಸತತವಾಗಿ ಕೇಂದ್ರ ಸರ್ಕಾರ ಭಾರತದ ಜನಸಾಮಾನ್ಯರ ರಕ್ತ ಹೀರುತ್ತಲೇ ಬಂದಿದೆ. ನೋಟು ರದ್ಧತಿ, ಜಿಎಸ್‌ಟಿ, ಕೋವಿಡ್‌ ಲಾಕ್‌ಡೌನ್‌, ಶ್ರೀಮಂತರ ತೆರಿಗೆ ಕಡಿತ, ಖಾಸಗೀಕರಣದ ಭರಾಟೆ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಬೆಲೆ ಏರಿಕೆ, ಕೋವುದಳ್ಳುರಿ ಗೋಭಯೋತ್ಪಾದನೆ, ವಿಪರೀತ ಜಾತಿದೌರ್ಜನ್ಯಗಳು ಹೀಗೆ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಜನಸಾಮಾನ್ಯರು ಮತ್ತು ದಲಿತರು ನರಕ ನೋಡಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕಾನೂನು, ಶಾಂತಿ ಸುವ್ಯವಸ್ಥೆ ಕುಸಿದು ಅನೈತಿಕ ಪೊಲೀಸ್‌ ಗಿರಿ ರಾರಾಜಿಸುತ್ತಿದೆ. ಕಾರ್ಯಾಂಗದಲ್ಲಿ ಸಂಘಪರಿವಾರದ ಮನಸ್ಥಿತಿಯುಳ್ಳ ಅಧಿಕಾರಿಗಳು ಸ್ವಜನ ಪಕ್ಷಪಾತಿಗಳಾಗಿದ್ದಾರೆ. ಸ್ವತಂತ್ರ, ಸಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತಾರೂಢ ಬಿಜೆಪಿ ಸರ್ಕಾರದ ಅಣತಿಯಂತೆ ವರ್ತಿಸುತ್ತಿವೆ. ಬಿಜೆಪಿ ಸರ್ಕಾರದ ಮಂತ್ರಿಗಳು ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಪಠ್ಯಪುಸ್ತಕಗಳಲ್ಲಿ ಪುರಾಣದ ಕತೆಗಳನ್ನೂ ಮತ್ತು ಸಂಘಪರಿವಾರದ ಸುಳ್ಳುಗಳನ್ನು ಸೇರಿಸಲಾಗುತ್ತಿದೆ. ಹಾಗಾಗಿ ಭಾರತ ದೇಶದಲ್ಲಿ ಈಗ ಸರ್ವಾಧಿಕಾರಿ ಜಾರಿಯಲ್ಲಿದೆ” ಎಂದು ಕಿಡಿಕಾರಿದ್ದಾರೆ.

Advertisements

“ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಆಪರೇಷನ್‌ ಕಮಲ ಎಂಬ ಅನೈತಿಕ ಹಾಗೂ ಅಸಂವಿಧಾನಿಕ ದಾರಿಯಲ್ಲಿ ಸರ್ಕಾರ ರಚಿಸಿದ ಬಿಜೆಪಿಯು ತದನಂತರದಲ್ಲಿ ಉತ್ತರ ಭಾರತದ ಕೋಮುದ್ವೇಷವನ್ನು ಕರ್ನಾಟಕದಲ್ಲೂ ಬಿತ್ತಲು ಆರಂಭಿಸಿತು. ಧರ್ಮ – ಧರ್ಮಗಳ ನಡುವೆ ಜಾತಿ – ಜಾತಿಗಳ ನಡುವೆ ಬಿರುಕು ಮೂಡಿಸಲಾಯಿತು. ಭ್ರಷ್ಟಾಚಾರವೆಂಬುದು ಬೊಮ್ಮಾಯಿ ಸರ್ಕಾರದ ಕಿರೀಟವಾಯಿತು” ಎಂದು ವ್ಯಂಗ್ಯವಾಡಿದ್ದಾರೆ.

“ಸದಾಕಾಲ ಸಮಾನತೆ – ಸಾಮರಸ್ಯವನ್ನೇ ಬಯಸುವ ದಸಂಸ, ದೇಶ ಮತ್ತು ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ವಾಧಿಕಾರಿ, ಜನವಿರೋಧಿ ಆಡಳಿತವನ್ನು ಕಿತ್ತೊಗೆಯಲು ನಿರ್ಧರಿಸಿದೆ. ಈ ಹಿನ್ನೆಲೆ 13 ಷರತ್ತುಗಳನ್ನು ಮುಂದಿಟ್ಟು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮನರೇಗಾ ಅಡಿ ಲಕ್ಷಕ್ಕೂ ಅಧಿಕ ಮಂದಿಗೆ ಕೆಲಸ; ಜಿಲ್ಲೆಗೆ ಪ್ರಥಮ ಸ್ಥಾನ

ಷರತ್ತುಗಳು:

  • ಪರಿಶಿಷ್ಟ ಜಾತಿ/ವರ್ಗಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಅನುಗುಣವಾಗಿ ರಾಜ್ಯ ಬಜೆಟ್ಟಿನ ಶೇ. 24.10 ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಈ ಅನುದಾನವನ್ನು ಸಂಪೂರ್ಣವಾಗಿ ‘ಏಕಗವಾಕ್ಷಿ ಯೋಜನೆ’ ಯಲ್ಲಿ ಅನುಷ್ಠಾನಗೊಳಿಸಬೇಕು. ದಲಿತರ ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದರ ಮೂಲಕ ಅನುದಾನ ದುರ್ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ಇತರ ವೆಚ್ಚಕ್ಕಾಗಿ ಹಣ ಬಳಸಲು ಅವಕಾಶವಿರುವ ‘7ಡಿ ಸಕ್ಷನ್’ ಅನ್ನು ಕಾಯ್ದೆಯಿಂದ ತೆಗೆದುಹಾಕಬೇಕು. ಕೇಂದ್ರ ಸರ್ಕಾರವೂ ಇದೇ ಮಾದರಿ ಕಾಯ್ದೆಯನ್ನು ರೂಪಿಸಬೇಕು.
  • ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಯವರನ್ನು ಹೊರತುಪಡಿಸಿ ವಾರ್ಷಿಕ ಎಂಟು ಲಕ್ಷ ವರಮಾನವಿರುವ ಮೇಲ್ಜಾತಿಯವರಿಗೆ ನೀಡಿರುವ ಇಡಬ್ಲೂಎಸ್‌ ಮೀಸಲಾತಿಯನ್ನು ವಿರೋಧಿಸಬೇಕು. ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು.
  • ರಾಜ್ಯ ಸರ್ಕಾರಗಳಲ್ಲಿ ಬಹುಕಾಲದಿಂದ ಖಾಲಿಯಾಗಿಯೇ ಉಳಿದಿರುವ ಲಕ್ಷಾಂತರ ಎಸ್‌ಸಿ – ಎಸ್‌ಟಿ ಬ್ಯಾಕ್ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು.
  • ‘ಪಿಟಿಸಿಎಲ್‌ ಕಾಯ್ದೆ’ಯನ್ನು ಬಲಪಡಿಸಬೇಕು, ದಲಿತರ ಭೂಮಿಯು ದಲಿತರಲ್ಲಿಯೇ ಉಳಿಯುವಂತೆ ಮಾಡಬೇಕು. ಈ ಕಾಯ್ದೆಯ ಮೂಲ ಉದ್ದೇಶವಾದ ದಲಿತರು ಭೂಮಿ ಹೊಂದುವ ಗುರಿಯನ್ನು ಸಮರ್ಥವಾಗಿ ಅನುಷ್ಟಾನಕ್ಕೆ ತರಬೇಕು.
  • ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೋಹತ್ಯಾ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ದೆ’ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
  • ಎಸ್‌ಸಿ – ಎಸ್‌ಟಿ ಅಲೆಮಾರಿ, ಅರೆ-ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾದರಿಯಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಮೀಕ್ಷೆ ಮಾಡಿ ಸೌಲಭ್ಯ ಒದಗಿಸಬೇಕು. ಡಿ.ಎನ್.ಟಿ (ಡಿನೋಟಿಫೈಯ್ಡ್‌ ಟ್ರೈಬ್ಸ್‌) ಸಮುದಾಯಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು.
  • ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ವೈಜ್ಞಾನಿಕ ಅಧ್ಯಯನದ ಅಂಕಿ ಅಂಶಗಳ ಆಧಾರದ ಮೇಲೆ ಎಲ್ಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿಗೊಳಿಸಲು ಒಕ್ಕೂಟ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದಕ್ಕಾಗಿ ಸಂವಿಧಾನ ತಿದ್ದುಪಡಿಗಾಗಿ ಒತ್ತಡ ಹೇರಬೇಕು.
  • ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ರೈತಾಪಿ ಜನರ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್ ಖಾಸಗೀಕರಣ ಮಸೂದೆ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕು.
  • ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ, ಅಸಮಾನತೆಯನ್ನು ಮತ್ತು ಚಾತುರ್ವರ್ಣ ಪದ್ಧತಿಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಈ ಕೂಡಲೇ ರದ್ದುಗೊಳಿಸಬೇಕು.
  • ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ಸ್ಕಾಲರ್‌ಶಿಪ್‌ ಮೊತ್ತವನ್ನು ಹೆಚ್ಚಿಸಬೇಕು. ಎಸ್‌ಸಿ-ಎಸ್‌ಟಿ ಮೀಸಲಾತಿಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ಹತ್ತು ಲಕ್ಷ ರೂಪಾಯಿಗೆ ಏರಿಸಬೇಕು.
  • ಆರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಟಾನಕ್ಕೆ ತರಬೇಕು. ಮಲ ಹೊರುವ ಪದ್ಧತಿ ನಿಷೇಧಗೊಂಡಿದ್ದರೂ ನೂರಾರು ಸಾವುಗಳು ಇದರಿಂದ ಸಂಭವಿಸಿದೆ. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.
  • ದಲಿತರು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ದೌರ್ಜನ್ಯಗಳನ್ನು ಕೂಡಲೇ ನಿಲ್ಲಿಸಬೇಕು. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿನ ಬಹುತ್ವವನ್ನು ಹಾಳುಗೆಡುವುತ್ತಿರುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
  • ಭಾರತವು ವೈವಿಧ್ಯಮಯವಾದ ಸೌಹಾರ್ಧಯುತ ಮತ್ತು ಬಹುತ್ವ ಸಂಸ್ಕೃತಿಯ ನೆಲೆವೀಡು. ಇಂತಹ ದೇಶದ ಮೇಲೆ ತಾರತಮ್ಯಭರಿತ ವೈದಿಕಶಾಹಿಯು ಏಕ ಸಂಸ್ಕೃತಿಯನ್ನು ಹೇರುತ್ತಾ ದಬ್ಬಾಳಿಕೆ ನೀತಿಯನ್ನು ಅನುಸರಿಸುತ್ತಿದೆ. ಇಂತಹ ದೇಶದ್ರೋಹಿ ಬೆಳವಣಿಗೆಯನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ವೈವಿಧ್ಯಮಯ, ಸೌಹಾರ್ದಯುತ, ಸಾಮರಸ್ಯ ಮತ್ತು ಬಹುತ್ವದ ಸಾಂಸ್ಕೃತಿಕ ಅಸ್ಮಿತೆಯ ಬದುಕನ್ನು ಉಳಿಸಿಕೊಳ್ಳುವ ಸಲುವಾಗಿ ಭಾರತದ ಸಂವಿಧಾನ ಎತ್ತಿಹಿಡಿದಿರುವ ಮೂಲಭೂತ ಹಕ್ಕುಗಳನ್ನು ಸಮಸ್ತ ಭಾರತೀಯರೂ ಅನುಭವಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್‌, ಗುರುಪ್ರಸಾದ್‌ ಕೆರಗೋಡು, ಲಕ್ಷ್ಮಿನಾರಾಯಣ ನಾಗವಾರ, ಡಾ. ಡಿ ಜಿ ಸಾಗರ್‌, ಎನ್‌ ಮುನಿಸ್ವಾಮಿ, ಜಿಗಣಿ ಶಂಕರ್‌, ಇಂದೂಧರ ಹೊನ್ನಾಪುರ, ಅಣ್ಣಯ್ಯ, ವಿ ನಾಗರಾಜ್‌ ಹಾಗೂ ಇತರರು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

Download Eedina App Android / iOS

X