- ಏ. 20ರಂದು ಖರೀದಿಸಿರುವ ಛಾಪಾಕಾಗದ ಏ. 19 ರಂದೇ ಅಪ್ಲೋಡ್
- ಗಡುವು ಮುಗಿದ ಬಳಿಕ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಕೆ
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಗಡುವು ಮುಗಿದ ನಂತರ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಶುಲ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಏಪ್ರಿಲ್ 20ರಂದು ಖರೀದಿಸಿರುವ ಛಾಪಾಕಾಗದದ ದಾಖಲೆಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಏಪ್ರಿಲ್ 19 ರಂದೇ ಅಪ್ಲೋಡ್ ಮಾಡಿದೆ. ಇದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
“ಪ್ರಮಾಣಪತ್ರದ ಛಾಪಾ ಕಾಗದವನ್ನು ಏ. 20 ರಂದು ಸಂಜೆ 7.30ಕ್ಕೆ ವಿಕಾಸ್ ಕೋಆಪರೇಟಿವ್ ಸೊಸೈಟಿ ಸಹಕಾರ ಸಂಘದಿಂದ ಖರೀದಿಸಲಾಗಿದೆ. ಇ ಸ್ಟಾಂಪಿಂಗ್ ಪ್ರಕಾರ ಇಡೀ ರಾಜ್ಯದಲ್ಲಿ ಅದನ್ನು ಸಂಜೆ 5 ಗಂಟೆ ಒಳಗಾಗಿ ನೀಡಬೇಕು ಎಂದು ಕಾನೂನಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ 7.38ಕ್ಕೆ ಛಾಪಾಕಾಗದ ನೀಡಲಾಗಿದೆ. ಈ ಛಾಪಾಕಾಗದ ಖರೀದಿ ಮಾಡಿರುವುದೇ ಅಕ್ರಮ” ಎಂದು ಹೇಳಿದರು.
“ಬಿಜೆಪಿ ಅಭ್ಯರ್ಥಿ ನಾಮಪತ್ರ ರಕ್ಷಣೆ ಮಾಡಲು ರಾಜ್ಯ ಚುನಾವಣಾ ಆಯೋಗ ನೀತಿ ನಿಯಮ ಉಲ್ಲಂಘಿಸಿದ್ದು, ಏ. 20ರಂದು ಸಲ್ಲಿಕೆ ಮಾಡಲಾಗಿರುವ ದಾಖಲೆಯನ್ನು 19ರಂದೇ ಅಪ್ಲೋಡ್ ಮಾಡಲಾಗಿದೆ ಎಂದು ತೋರಿಸಲಾಗಿದೆ. ಇದು ಹೇಗೆ ಸಾಧ್ಯ? ನಡ್ಡಾ, ಅಮಿತ್ ಶಾ, ಮೋದಿ ಅಥವಾ ನಮ್ಮ ಪೇಸಿಎಂ ಬೊಮ್ಮಾಯಿ ಇದರಲ್ಲಿ ಹಸ್ತಕ್ಷೇಪ ಮಾಡಿದ್ದಾರಾ? ಕೇಂದ್ರ ಚುನಾವಣಾ ಆಯೋಗದ ರಾಜ್ಯ ವಿಭಾಗದ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಪ್ರಭಾವ ಬೀರಿದ್ದಾರೆಯೇ ಎನ್ನುವುದನ್ನು ಮುಖ್ಯಚುನಾವಣಾಧಿಕಾರಿ ತಿಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಕ್ಷಗಳಿಗೆ ತಗ್ಗಿದ ಬಂಡಾಯದ ಬಿಸಿ; ಚುನಾವಣೆ ಕಣದಲ್ಲಿ 2,613 ಅಭ್ಯರ್ಥಿಗಳು
“ರಾಜ್ಯದ ಆರೂವರೆ ಕೋಟಿ ಜನರ ನಂಬಿಕೆಗೆ ಚುನಾವಣಾ ಆಯೋಗ ದ್ರೋಹ ಬಗೆಯಬಾರದು. ಡಬಲ್ ಎಂಜಿನ್ ಸರ್ಕಾರದ ಕಚೇರಿಗಳಿಂದ ಒತ್ತಡ ಬಂದಿದ್ದರೆ ಅದನ್ನು ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.