ಆಹಾರ ಪಡಿತರ ಚೀಟಿ ಪಡೆಯಲು ರಾಜ್ಯದ ಬಡಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿ ಹೊಸ ಪಡಿತರ ಚೀಟಿ ನೀಡುವುದು ಸೇರಿದಂತೆ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ನಿಗಧಿಗೊಳಿಸಿರುವ ಮಾನದಂಡಗಳನ್ನು ಸರಳೀಕರಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಕೊಳಗೇರಿ ಸಮಿತಿಯಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆಯ ಅಂಗವಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ನುಡಿದಂತೆ ನಡೆದಿರುವ ರಾಜ್ಯ ಸರ್ಕಾರ ಬಡಜನರಿಗೆ ಚುನಾವಣೆ ಪೂರ್ವ ಭರವಸೆ ನೀಡಿರುವಂತೆ ಬಡಜನರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಮುಂದುವರಿಸಬೇಕು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಮತ್ತು ಯುವನಿಧಿಯಿಂದ ಬಡವರಿಗೆ ಆರ್ಥಿಕ ಚೈತನ್ಯ ವೃದ್ಧಿಸುತ್ತಿದೆ. ಆಗಸ್ಟ್ 1 ರಿಂದ ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅಧಿಕೃತ ಪ್ರಕಟಣೆ ನೀಡಿದ್ದು ಆದರೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸರದಿ ಸಾಲಿನಲ್ಲಿ ನಿಂತರು 1 ದಿನಕ್ಕೆ 2ರಿಂದ 5 ಜನರಿಗೆ ಮಾತ್ರ ಸರ್ವರ್ ಸ್ವೀಕರಿಸುತ್ತಿದೆ ಆನ್ಲೈನ್ ಪೋರ್ಟಲ್ನ್ನೇ ಸ್ಥಗಿತಗೊಳಿಸಿರುವುದು ಬಡಜನ ವಿರೋಧಿಯಾಗಿದೆ. ಹಾಗಾಗಿ ನುಡಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದ ಬಡಜನರಿಗೆ ಸಿದ್ದರಾಮಯ್ಯ ಶಕ್ತಿ ತುಂಬಿದ್ದಾರೆ, ನಾವೆಲ್ಲರು ಸಿದ್ದರಾಮಯ್ಯನವರಿಗೆ ಶಕ್ತಿಯಾಗುತ್ತೇವೆ. ಕೇಂದ್ರದ ನೀತಿ ಆಯೋಗ ಬಡಜನರ ಕಲ್ಯಾಣ ಯೋಜನೆಗಳನ್ನು ಕಡತಗೊಳಿಸಿ ರಾಜ್ಯಗಳಿಗೆ ಟಾರ್ಗೇಟ್ ಸಬ್ಸಿಡಿ ನೀಡುತ್ತಿರುವುದು ಸಂವಿಧಾನದ ಕಲ್ಯಾಣ ರಾಜ್ಯಕ್ಕೆ ವಿರುದ್ಧವಾದ ನಡೆಯಾಗಿದೆ, ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ 1.13 ಕೋಟಿ ಕಾರ್ಡುದಾರರಿದ್ದು ಇದರಲ್ಲಿ 80 ಲಕ್ಷ ಗುರಿಯನ್ನು ನೀಡಿರುವುದರಿಂದ 33 ಲಕ್ಷ ಕಾರ್ಡ್ದಾರರನ್ನು ಕಡಿತಗೊಳಿಸಲು ಸೂಚಿಸಿದ್ದು ಇದು ಸ್ಲಂ ನಿವಾಸಿಗಳು ಮತ್ತು ಬಡಜನರ ಮೇಲೆ ಪರಿಣಾಮ ಭೀರಲಿದೆ ಹಾಗಾಗಿ ಕೇಂದ್ರದ ಈ ಶೀಫಾರಸ್ಸನ್ನು ರಾಜ್ಯ ಸರ್ಕಾರ ಒಪ್ಪದೇ ಇಲ್ಲಿವರೆಗೂ 3 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ತಕ್ಷಣವೇ ರೇಷನ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲು ಆಹಾರ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಬೇಕು ಸಾಮಾಜಿಕ ನ್ಯಾಯವನ್ನು ಪ್ರತಿಪಾಧಿಸುತ್ತಿರುವ ಸಿದ್ದರಾಮಯ್ಯನವರ ಪರವಾಗಿ ಸ್ಲಂ ಜನರು ಮತ್ತು ಬಡಜನರು ನಿಲ್ಲುತ್ತೇವೆ. ನಮ್ಮ ಪರವಾಗಿ ಸರ್ಕಾರ ನಿಲ್ಲಬೇಕು. ಅಕ್ಕಿಯ ಬದಲಾಗಿ ಹಣ ನೀಡುವುದನ್ನು ನಿಲ್ಲಿಸಿ ಬೇಳೆ ಕಾಳು ಮತ್ತು ಅಡುಗೆ ಎಣ್ಣೆ ವಿತರಿಸಲು ಕ್ರಮವಹಿಸಬೇಕು ಎಂದರು.
ಬಡವರ ಆರೋಗ್ಯಕ್ಕೆ ಬಿ.ಪಿ.ಎಲ್ ಕಾರ್ಡ್ ಅತೀ ಮುಖ್ಯವಾಗಿದ್ದು ರಾಜ್ಯಸರ್ಕಾರದ ಹಲವಾರು ಗ್ಯಾರಂಟಿಗಳನ್ನು ಪಡೆಯಲು ಕಾರ್ಡ್ ಇರಲೇಬೇಕು ಹಾಗಾಗಿ ಕಾರ್ಡ್ ನೀಡಲು ಸರ್ಕಾರ ಮುಂದಾಗಬೇಕು. ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ನೈಜ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ನೀಡಬೇಕು ತಿದ್ದುಪಡಿಗೆ ಸಮಯವಕಾಶವನ್ನು ವಿಸ್ತರಿಸಬೇಕೆಂದು ಕಾರ್ಯದರ್ಶಿ ಅರುಣ್ ಹೇಳಿದರು.
ಮಹಿಳಾ ಮುಖಂಡರಾದ ಅನುಪಮಾ ಮತ್ತು ಗಂಗಮ್ಮ ಮಾತನಾಡಿ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆಯಲು ವಾಸಸ್ಥಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಪಡಿತರ ಚೀಟಿ ಅಗತ್ಯವಾಗಿ ಬೇಕಿದೆ. ರಾಜ್ಯದಲ್ಲಿ 1.15 ಕೋಟಿ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಪ್ರಯೋಜನಾ ಪಡೆಯುತ್ತಿದ್ದು ಬಡಜನರಿಗೆ ಸಿಗುವ ಈ ಸೌಲಭ್ಯಗಳ ಬಗ್ಗೆ ಶ್ರೀಮಂತರಲ್ಲಿ ಅಸೂಯೆ ಇದೆ ಇದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದೇ ಬಡವರ ಕಲ್ಯಾಣವನ್ನು ಮಾಡಬೇಕು ಎಂದರು
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಶಂಕ್ರಯ್ಯ, ಕಣ್ಣನ್, ಮೋಹನ್, ತಿರುಮಲಯ್ಯ, ಕೃಷ್ಣಮೂರ್ತಿ, ಧನಂಜಯ್, ಮಂಗಳಮ್ಮ, ಪೂರ್ಣೀಮಾ, ಗುಲ್ನಾಜ್, ಗೌರಮ್ಮ, ಲಕ್ಷ್ಮೀಪತಿ, ಜಾಬೀರ್ಖಾನ್, ರಂಗನಾಥ್, ಮುರುಗನ್, ರಾಜ, ಕೃಷ್ಣ, ಮಾಧವನ್, ಚಕ್ರಪಾಣಿ, ಕಾಶಿರಾಜ, ಗಣೇಶ್, ಗೋವಿಂದ್ರಾಜ್, ಪುಟ್ಟರಾಜು,ರಾಜು ನಿವೇಶನ ಹೋರಾಟ ಸಮಿತಿಯ ಸಂಧ್ಯಾಯಾದವ್, ಸುಧಾ,ಹನುಮಕ್ಕ, ರತ್ನಮ್ಮ, ರಾಮಕೃಷ್ಣ, ಗೋವಿಂದ, ಜಗದೀಶ್ ಮುಂತಾದವರು ವಹಿಸಿದ್ದರು.
ವಿವಿಧ ಸ್ಲಂಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
