ಕಳೆದ ತಿಂಗಳು ಮಂಗಳೂರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಂದ ಗುಂಪು ಹತ್ಯೆಯಾದ ಕೇರಳ ರಾಜ್ಯದ ವಯನಾಡ್ ಜಿಲ್ಲಾ ನಿವಾಸಿ ಮುಹಮ್ಮದ್ ಅಶ್ರಫ್ ಕುಟುಂಬಕ್ಕೆ ನ್ಯಾಯ ಒದಗಿಸಲು ಕರ್ನಾಟಕ ಸರಕಾರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿ ಸಿಪಿಐಎಂ ವಯನಾಡ್ ಜಿಲ್ಲಾ ಕಮಿಟಿ ಮತ್ತು ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿಯ ನಿಯೋಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ವಯನಾಡ್ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಮೇ 21ರಂದು ಭೇಟಿ ಮಾಡಿದ ಸಿಪಿಐಎಂ ವಯನಾಡ್ ಜಿಲ್ಲಾ ಸಮಿತಿ ಮತ್ತು ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿಯ ನಿಯೋಗ, ಅಶ್ರಫ್ ಗುಂಪು ಹತ್ಯೆಯನ್ನು ಉನ್ನತ ಮಟ್ಟದ ತನಿಖೆ ನಡೆಸಿ ಅಶ್ರಫ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕರ್ನಾಟಕ ಸರಕಾರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿ ಅಶ್ರಫ್ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಒತ್ತಾಯಿಸುವಂತೆ ನಿಯೋಗ ಆಗ್ರಹಿಸಿದೆ. ನಿಯೋಗದ ಮನವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಕಾರಾತ್ಮಕ ಸ್ಪಂದನೆ ನೀಡಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ | ‘ಸಂಸದರ ಈಜು ಕೊಳ’ ಸಮಸ್ಯೆಗೆ ಕೊನೆಗೂ ಪರಿಹಾರ
ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗದಲ್ಲಿ ಮಾಜಿ ಸಚಿವ, ಹಿರಿಯ ಕಮ್ಯುನಿಸ್ಟ್ ನೇತಾರ ಪಾಲೋಳಿ ಮುಹಮ್ಮದ್ ಕುಟ್ಟಿ, ಸಿಪಿಐಎಂ ವಯನಾಡ್ ಜಿಲ್ಲಾ ನಾಯಕರಾದ ಅಹ್ಮದ್ ಮಟ್ಟಿ, ಅಡ್ವಕೇಟ್ ಜಯಕೃಷ್ಣನ್, ಯಾಕ್ಷನ್ ಕಮಿಟಿಯ ನಝರ್ ಪರಪ್ಪೂರ್, ನಾಸರ್ ಕಪ್ಪನ್, ರಹೀಮ್ ಕೆ ಕೆ, ಅಬ್ದುಲ್ ಹಖ್ ಉಪಸ್ಥಿತರಿದ್ದರು.