18 ಅಸಿಸ್ಟಂಟ್ ಪ್ರೊಫೆಸರ್‍ಗಳನ್ನು ಡಾ.ನಾಯಕ್ ತರಾತುರಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕನಿಷ್ಠವೆಂದರೂ 10 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿರುವ ಬ್ಯಾಕ್ ಲಾಗ್ ಗೋಲ್ ಮಾಲ್ ನಿಷ್ಠುರ ತನಿಖೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ.
ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಾರವಾರ ಮೆಡಿಕಲ್ ಕಾಲೇಜ್) ಕಳೆದ ಐದು ವರ್ಷಗಳಿಂದ ಒಂದರ ಹಿಂದೊಂದರಂತೆ ಹಗರಣಗಳಲ್ಲಿ ಸಿಲುಕಿದೆ. ಅಕ್ರಮ, ಅನ್ಯಾಯ, ಅಧ್ವಾನಗಳ ಅಡ್ಡೆ ಎಂದೇ ಪ್ರಸಿದ್ಧವಾಗಿದೆ. ಡೀನ್-ಡೈರೆಕ್ಟರ್ ಆಗುವ ಯಾವ ಅರ್ಹತೆಯೂ ಇಲ್ಲದ ಡಾ.ಗಜಾನನ ನಾಯಕ್ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿ ಅಡ್ಡ ದಾರಿಗಳನ್ನು ಬಳಸಿ ಈ ಪ್ರತಿಷ್ಠಿತ ಸಂಸ್ಥೆಯ ‘ಯಜಮಾನಿಕೆ’ ಪಡೆದುಕೊಂಡಿದ್ದರು.
ಅದಕ್ಕೆ ತಕ್ಕಂತೆ ಕ್ರಿಮ್ಸ್‌ನಲ್ಲಿ ಅಂಧಾ ದರ್ಬಾರ್ ಮಿತಿಮೀರಿತು. ಕಾನೂನುಬಾಹಿರ ನೇಮಕಾತಿಗಳು, ಕಮಿಷನ್ ಕಳಪೆ ಕಾಮಗಾರಿಗಳು, ಖರೀದಿಗಳು, ಸ್ವಜನ ಪಕ್ಷಪಾತ, ಎಸ್ಸಿ-ಎಸ್ಟಿ ಅನುದಾನದ ದುರ್ಬಳಕೆ, ದಲಿತ ವೈದ್ಯರ ಮೇಲೆ ದೌರ್ಜನ್ಯ, ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ ಹೆಚ್ಚಾದವು.
ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಆಗುತ್ತಿರುವ ಸರಣಿ ಭ್ರಷ್ಟಾಚಾರ, ಭಾನಗಡಿ ಮತ್ತು ದಲಿತ ದ್ರೋಹದ ದೂರುಗಳು ಎಂಎಂಸಿ(ರಾಷ್ಟ್ರೀಯ ವೈದ್ಯಕೀಯ ಪರಿಷತ್ತು), ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ(ಡಿಎಂಇ) ಹಾಗೂ ನಾಗರಿಕ ಹಕ್ಕು ನಿರ್ದೇಶನಾಲಯಗಳಿಗೂ ತಲುಪಿತ್ತು. ಆದರೆ ಕ್ರಮ ಕೈಗೊಂಡಿದ್ದು ಕಾಣಲಿಲ್ಲ.
ಕಳೆದ ವರ್ಷದ ಕೊನೆಯ ದಿನ ಡೀನ್-ಡೈರೆಕ್ಟರ್ ಹುದ್ದೆಯಿಂದ ಡಾ.ನಾಯಕ್ ನಿವೃತ್ತರಾಗಿದ್ದಾರೆ. ಡೀನ್-ಡೈರೆಕ್ಟರಿಕೆಯ ‘ರುಚಿ’ ಹತ್ತಿದ್ದ ಡಾ.ನಾಯಕ್ ಗುತ್ತಿಗೆ ಆಧಾರದಲ್ಲಿ ಮತ್ತದೇ ಕುರ್ಚಿಯಲ್ಲಿ ಮುಂದುವರೆಯಲು ಶತಾಯಗತಾಯ ‘ಹೋರಾಟ’ ನಡೆಸಿದ್ದರು. ಅದಾಗದಿದ್ದರೆ ತನ್ನ ಮಾತು ಕೇಳುವ ಕಾರವಾರ ಮೂಲದ ಗೈನೋಕಾಲಜಿಸ್ಟ್ ಪ್ರಾಧ್ಯಾಪಕರೋರ್ವರನ್ನಾದರೂ ಡೀನ್-ಡೈರೆಕ್ಟರ್ ಪೀಠದಲ್ಲಿ ಪ್ರತಿಷ್ಠಾಪಿಸಿ ಕ್ರಿಮ್ಸ್‌ನ ರಿಮೋಟ್ ಕಂಟ್ರೋಲ್ರ್ ಆಗಬೇಕೆಂದು ಹಂಬಲಿಸಿದ್ದರು. ಅಂತೂ ಇಂತೂ ಎರಡೂ ಆಗದೆ ಕ್ರಿಮ್ಸ್ ಸರ್ವಾಧಿಕಾರದ ಅಟ್ಟಹಾಸದಿಂದ ಮುಕ್ತವಾಗಿದೆ. ಆದರೆ ಡಾ.ನಾಯಕ್ ಕುಲಗೆಡಿಸಿರುವ ಕ್ರಿಮ್ಸ್‌ನ ಆಡಳಿತವನ್ನು ಹಳಿಗೆ ತರುವುದು ದಕ್ಷ-ನಿಷ್ಠುರ ಎಂಬ ಪ್ರತೀತಿಯ ಹೊಸ ಡೀನ್-ಡೈರೆಕ್ಟರ್ ಡಾ.ಪೂರ್ಣಿಮಾರಿಗೂ ಅಷ್ಟು ಸುಲಭವಲ್ಲ. ತನ್ನ ಅವ್ಯವಹಾರ ಹೊರಬರುವ ಅಂಜಿಕೆಯಲ್ಲಿರುವ ಡಾ.ನಾಯಕ್ ಮತ್ತು ಡೀನ್-ಡೈರೆಕ್ಟರ್ ಪೀಠದ ಮೇಲೆ ಕಣ್ಣಿಟ್ಟಿರುವ ವಿವಾದಾಸ್ಪದ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರ್ಕರ್ ಬಳಗ ಡಾ.ಪೂರ್ಣಿಮಾರನ್ನು ಅಡಿಗಡಿಗೆ ಕಾಡದೆ ಬಿಡದು ಎಂದು ಕ್ರಿಮ್ಸ್ ಸಿಬ್ಬಂದಿ ಪಿಸುಗುಡುತ್ತಿದೆ.
ಕ್ರಿಮ್ಸ್‌ನಿಂದ ಡಾ.ನಾಯಕ್ ಹೊರಹೋಗುವ ಸಂದರ್ಭದಲ್ಲಿ ದಲಿತ ವರ್ಗಕ್ಕೆ ಮೀಸಲಾದ ಬ್ಯಾಕ್‌ಲಾಗ್ ಹುದ್ದೆಗಳನ್ನು ಮರೆಮಾಚಿ ಮೇಲ್ವರ್ಗದ ಅನರ್ಹರಿಗೆ ಬೋಧಕರಾಗಿ ನೇಮಿಸಿಕೊಂಡ ಕೋಟ್ಯಂತರ ರೂಪಾಯಿಗಳ ಹಗರಣ ದೊಡ್ಡ ಸದ್ದು ಮಾಡಿತ್ತು. ಹಾಗೆ ನೋಡಿದರೆ ಗಜಾನನ ನಾಯಕ್ ಕಾಲದಲ್ಲಿ ಕ್ರಿಮ್ಸ್‌ನಲ್ಲಿ ನಡೆದಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಳೆಲ್ಲವೂ ಅಕ್ರಮವೇ. ಎಲ್ಲ ನೀತಿ-ನಿಯಮ ಪ್ರಜ್ಞಾಪೂರ್ವಕವಾಗಿಯೇ ಧಿಕ್ಕರಿಸಿ ಡಾ.ನಾಯಕ್ ಮನಸೋಇಚ್ಛೆ ಹುದ್ದೆಗಳನ್ನು ಹಂಚಿದ್ದಾರೆ. ದಲಿತ ಹಾಗೂ ದುರ್ಬಲ ವರ್ಗದವರನ್ನು ವ್ಯವಸ್ಥಿತವಾಗಿ ವಂಚಿಸಿದ್ದಾರೆ. 2014ರಲ್ಲಿ ಸ್ಥಾಪಿತವಾದ ಕ್ರಿಮ್ಸ್‌ನಲ್ಲಿ ಆರಂಭದಿಂದಲೂ ಬೋಧಕ ಹುದ್ದೆಗಳ ಭರ್ತಿಯಲ್ಲಿ ಬ್ಯಾಕ್‌ಲಾಗ್ ನಿಯಮ ಪಾಲಿಸುತ್ತ ಬರಲಾಗಿತ್ತು. ಆದರೆ ಡಾ.ನಾಯಕ್ ಡೀನ್ ಕಮ್ ಡೈರೆಕ್ಟರ್ ಆಡಳಿತದಲ್ಲಾದ 20.10.2020ರ ಬೋಧಕ ಹುದ್ದೆ ಆಯ್ಕೆ ಪ್ರಕ್ರಿಯೆಯಲ್ಲಿ ಈ ಬ್ಯಾಕ್‌ಲಾಗ್ ಪದ್ಧತಿಗೆ ಮೊದಲಬಾರಿ ಪಂಗನಾಮ ಹಾಕಲಾಯಿತು. ಒಂದು ವರ್ಷದ ಹಿಂದೆ(26.12.2023) ನಡೆಸಲಾದ ನೇರನೇಮಕಾತಿ ‘ನಾಟಕ’ದಲ್ಲಂತೂ ಡಾ.ನಾಯಕ್ ಬ್ಯಾಕ್‌ಲಾಗ್‌ನೊಂದಿಗೆ ಇನ್ನಿತರ ಮೀಸಲಾತಿ ಹಾಗೂ ನೇಮಕಾತಿ ನಿಯಮಗಳನ್ನೂ ಗಾಳಿಗೆ ತೂರಿಬಿಟ್ಟರು.
ಭರ್ತಿಯಾಗದ ಬ್ಯಾಕ್‌ಲಾಗ್ ಮತ್ತು ಹೊಸದಾಗಿ ಮಂಜೂರಾದ ಹುದ್ದೆಗಳ ನೇಮಕಾತಿಗಾಗಿ 8.8.2019, 12.12.2019 ಮತ್ತು 7.2.2020ರಂದು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಆದರೆ 4.12.2023 ಹಾಗೂ 5.12.2023ರ ಅಧಿಸೂಚನೆ(KRIMS/ACC/730/2023-24) ಪ್ರಕಟಣೆಯಲ್ಲಿ ಹೈದ್ರಾಬಾದ್ ಕರ್ನಾಟಕ ಮತ್ತು ಮೀಸಲಾತಿ ರೋಸ್ಟರ್‍ಗಳ ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆಯನ್ನು ಡಾ.ನಾಯಕ್ ನಮೂದಿಸಿಲ್ಲ. ಡೀನ್-ಡೈರೆಕ್ಟರ್ ಈ ಕೈಚಳಕದಿಂದ ಮೀಸಲಾತಿ ಪ್ರಕಾರ ನ್ಯಾಯವಾಗಿ ಕ್ರಿಮ್ಸ್‌ನ ಬೋಧಕ ಸ್ಥಾನಗಳಿಗೆ ಅರ್ಹರಾಗಿದ್ದ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಘೋರ ಅನ್ಯಾಯವಾಗಿದೆ.
ಡಾ.ನಾಯಕ್ ದಲಿತ ವರ್ಗದ ಬ್ಯಾಕ್‌ಲಾಗ್ ಬುದ್ಧಿಪೂರ್ವಕವಾಗೇ ಬಚ್ಚಿಡುವುದರ ಜತೆಗೇ ಅನೇಕ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿದ್ದಾರೆ. ಸರಕಾರಿ ಆದೇಶ-ಡಿಪಿಎಆರ್ 19 ಎಸ್ಬಿಸಿ 89 ದಿ.12.7.1989ರಂತೆ ನೇರ ನೇಮಕಾತಿ ಹೊತ್ತಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ್ದ ಸ್ಥಾನಗಳನ್ನು ತುಂಬಲು ಆ ವರ್ಗಗಳಿಗೆ ಸೇರಿದ ಅರ್ಹರು ಲಭ್ಯವಿಲ್ಲದೆ ಇದ್ದರೆ ಅಂತಹ ರಿಕ್ತ ಸ್ಥಾನಗಳನ್ನು ಮುಂದಿನ ನೇಮಕಾತಿಗೆ ಕಾಯ್ದಿರಿಸಬೇಕು. ಅದು ಬ್ಯಾಕ್‌ಲಾಗ್ ಎನಿಸಿಕೊಳ್ಳುತ್ತದೆ. ಈ ಹುದ್ದೆಗಳ ಮರುವರ್ಗೀಕರಣ ಅಥವಾ ಬೇರೆ ಮೀಸಲು ವರ್ಗಕ್ಕೆ ವರ್ಗಾಯಿಸುವ ಅವಕಾಶವಿಲ್ಲ. ಬ್ಯಾಕ್‌ಲಾಗ್ ಹುದ್ದೆಗಳು ಇಲ್ಲದಿದ್ದರೆ ಬ್ಯಾಕ್‌ಲಾಗ್ ಇರುವುದಿಲ್ಲ. ಅನ್ವಯವಾಗದಿದ್ದರೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ದಾಖಲಿಸಬೇಕು.
ಆದರೆ ಕ್ರಿಮ್ಸ್‌ನ ಬೋಧಕರ ಆಯ್ಕೆ ಸಂರ್ಭದಲ್ಲಿ ಸಾಕಷ್ಟು ಬ್ಯಾಕ್‌ಲಾಗ್ ಹುದ್ದೆಗಳು ಇದ್ದರೂ ಅದನ್ನು ಮುಚ್ಚಿಟ್ಟು ಬೇರೆ ಮೀಸಲು ವರ್ಗಕ್ಕೆ ವರ್ಗಾಯಿಸಲಾಗಿದೆ. ಒಳ ಉದ್ದೇಶವಿಟ್ಟುಕೊಂಡು ದಲಿತರಿಗೆ ಮೋಸ ಮಾಡುವ ಈ ಸಂಚು ಶಿಕ್ಷಾರ್ಹ ಅಪರಾಧ. ನೇಮಕಾತಿಗಳಲ್ಲಿ ಪರಿಶಿಷ್ಟರ ಮೀಸಲು ಶರತ್ತುಗಳನ್ನು ಮುರಿಯುವುದು-1989ರ ಪರಿಶಿಷ್ಟ ಜಾತಿ-ಪಂಗಡಗಳ ಮೇಲಾಗುವ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಜಾರಿ ನಿರ್ದೇಶನಾಲಯ ಡಾ.ನಾಯಕ್‌ರ ಸರಣಿ ಪ್ರಮಾದ ಕಂಡೂ ಕಾಣದಂತಿರುವುದು ದಲಿತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಂಚಿತ ಅಭ್ಯರ್ಥಿಗಳು ಚಡಪಡಿಸುತ್ತಾರೆ.
ಆಯ್ಕೆ ಪ್ರಕ್ರಿಯೆ ಶುರುವಾದಾಗ ಮೀಸಲಾತಿ ಬದಲಿಸಬಾರದು ಮತ್ತು ಮರುವರ್ಗೀಕರಣ(ಡಿಕೆಟಗರೈಸೇಶನ್) ನಡೆಸದೆಂಬ ಕಟ್ಟುನಿಟ್ಟಿನ ನಿಯಮವಿದೆ. ಹಾಗೊಮ್ಮೆ ಡಿಕೆಟಗರೈಸೇಶನ್ ಅಗತ್ಯವಿದ್ದರೆ ಹೊಸದಾಗಿ ಪ್ರಟಣೆ ಹೊರಡಿಸಬೇಕು. ಈ ಷರತ್ತುಗಳನ್ನೆಲ್ಲ ಕಡೆಗಣಿಸಿ ಬೇಕಾಬಿಟ್ಟಿಯಾಗಿ ಡಿಕೆಟಗರೈಸೇಶನ್ ‘ಆಟ’ ಆಡಿರುವ ಡಾ.ನಾಯಕ್ ವಿಕಲಚೇತನರ ಮತ್ತು ತೃತೀಯ ಲಿಂಗಿಗಳ ಅವಕಾಶಕ್ಕೆ ಕಲ್ಲುಹಾಕಿದ್ದಾರೆ. ವಿಕಲಚೇತನ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಆ ರಿಕ್ತ ಸ್ಥಾನಗಳು ಮುಂದಿನ ನೇಮಕಾತಿಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಬೇಕು. ಡಾ.ನಾಯಕ್ ಈ ನಿಯಮಗಳನ್ನೆಲ್ಲ ಬೇಕಂತಲೇ ನಿರ್ಲಕ್ಷಿಸಿದ್ದಾರೆ.
ಹುದ್ದೆಗಳ ವರ್ಗೀಕರಣದಲ್ಲೂ ಮೀಸಲಾತಿ ಗಾಳಿಗೆ ತೂರಲಾಗಿದೆ. ನಿಯಮದಂತೆ ಶೇ.25ರಷ್ಟು ಗ್ರಾಮೀಣ ಮೀಸಲಾತಿ ಒದಗಿಸಬೇಕು. ಆದರೆ ಕ್ರಿಮ್ಸ್‌ನ 26 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ 11(42%), ಸಾಮಾನ್ಯ ವರ್ಗದ 10 ಹುದ್ದೆಗಳಲ್ಲಿ 5(50%) ಮೀಸಲಾತಿ ಹೆಚ್ಚಿಸಲಾಗಿದೆ. ಮಹಿಳೆಯರಿಗೆ ರೋಸ್ಟರ್ ಪಾಯಿಂಟ್ ಪ್ರಕಾರ ಶೇ.33ರಷ್ಟು ಮೀಸಲಾತಿ ಕೊಡಬೇಕು. ಆದರೆ ಒಟ್ಟೂ 26 ಹುದ್ದೆಗಳಲ್ಲಿ ಕೇವಲ ನಾಲ್ಕನ್ನು ಮಾತ್ರ ಮಹಿಳೆಯರಿಗೆ ಕೊಡಲಾಗಿದೆ. ಅಂದರೆ ಮಹಿಳಾ ಮೀಸಲಾತಿಯನ್ನು ಶೇ.15ಕ್ಕೆ ಇಳಿಸಲಾಗಿದೆ. ಎಲ್ಲ 26 ಹುದ್ದೆಗಳನ್ನು ಸಮಾನಾಂತರ ಮತ್ತು ಸಮತಳದ ನೆಪದಲ್ಲಿ ಯದ್ವಾತದ್ವಾ ವರ್ಗೀಕರಣ ಮಾಡಿ ಮೀಸಲಾತಿ ಆಶಯಕ್ಕೆ ಅಪಚಾರ ಮಾಡಲಾಗಿದೆ. ಇದಕ್ಕೆಲ್ಲ ಕ್ರಿಮ್ಸ್ ಅನ್ನು ಸ್ವಂತ ಕಂಪನಿಯಾಗಿಸಿಕೊಂಡಿದ್ದ ಡಾ.ನಾಯಕ್‌ರ ಒಳ ಒಪ್ಪಂದವೇ ಕಾರಣ ಎನ್ನಲಾಗಿದೆ.
ಬೋಧಕ ನೇಮಕಾತಿ ವೇಳೆ ಡಾ.ನಾಯಕ್ ಸರಕಾರದ ಒಂದೇ ಒಂದು ಆದೇಶ, ನಿಯಮಾವಳಿ ಪಾಲಿಸಿಲ್ಲ. ಕರ್ನಾಟಕ ನಾಗರಿಕ ಸೇವಾ ನೇರ ನೇಮಕಾತಿ (ಸಾಮಾನ್ಯ) ನಿಯಮಾವಳಿಗಳು 2021ರ ಉಪನಿಯಮ 7ರ ಪ್ರಕಾರ ರಾಜ್ಯ ಸರಕಾರದ ನೌಕರಿ ಪಡೆಯಲು ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಆದರೆ ಕ್ರಿಮ್ಸ್‌ನಲ್ಲಿ ಕನ್ನಡ ಭಾಷಾ ಪರೀಕ್ಷೆಯೇ ನಡೆಸಿಲ್ಲ. ಕಡ್ಡಾಯವಾಗಿರುವ ಜಾತಿ ಸಿಂದುತ್ವ ಪ್ರಮಾಣ ಪತ್ರ ಇಲ್ಲದಿದ್ದರೂ ನೇಮಕಾತಿ ಆದೇಶ ಕೊಡಲಾಗಿದೆ ಎನ್ನಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ತವರು ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಾತಿ ಪರಿಶೀಲನಾ ಸಮಿತಿಯಿಂದ ‘ಜಾತಿ ಸಿಂಧುತ್ವ’ ಪ್ರಮಾಣ ಪತ್ರ ತಂದು ತೋರಿದ ನಂತರವೇ ಉದ್ಯೋಗಕ್ಕೆ ಸೇರಿಸಿಕೊಳ್ಳಬೇಕು. ನಕಲಿ ಜಾತಿ ಪ್ರಮಾಣ ಪತ್ರ ತಡೆಯಲು ಈ ನಿಯಮ ರೂಪಿಸಲಾಗಿದೆ. ಆದರೆ ಕ್ರಿಮ್ಸ್‌ನಲ್ಲಿ ಇದಕ್ಕೆಲ್ಲ ಬೆಲೆಯಿಲ್ಲ. ಹಾಗಾಗಿ ಫೋರ್ಜರಿ ಜಾತಿ ಪ್ರಮಾಣ ಪತ್ರದವರೂ ಹುದ್ದೆ ಗಿಟ್ಟಿಸಿದ್ದರೆ ಅಚ್ಚರಿ ಪಡುವಂತದ್ದೇನಿಲ್ಲ.

ಹಾಗೇಯೇ ಗ್ರಾಮೀಣ ಮೀಸಲಾತಿ ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮಾಂತರ ಶಾಲೆಗಳಲ್ಲಿ 1-10ನೇ ತರಗತಿವರೆಗೆ ಪ್ರಮಾಣ ಪತ್ರದ ಜತೆ ಸಂಬಂಧಿಸಿದ ತಹಶೀಲ್ದಾರರಿಂದ ತಮ್ಮ ಕುಟುಂಬದ ವಾರ್ಷಿಕ ಆದಾಯ 8 ಲಕ್ಷದ ಒಳಗಿದೆ ಎಂಬ ಪ್ರಮಾಣ ಪತ್ರ ಪಡೆದಿರಬೇಕು. ಆದರೆ ಡಾ.ನಾಯಕ್ ‘ಬೇಲೆಕೇರಿ ಬಂಧು’ ಒಬ್ಬರಿಗೆ ಆದಾಯ ಪ್ರಮಾಣ ಪತ್ರವಿಲ್ಲದಿದ್ದರೂ ಆಯ್ಕೆ ಮಾಡಿದ್ದಾರೆ. ಡಾ.ನಾಯಕ್ ಸಿದ್ಧಪಡಿಸಿರುವ ಆಯ್ಕೆ ಪಟ್ಟಿ ತುಂಬ ತಪ್ಪುಗಳೇ ತುಂಬಿಕೊಂಡಿವೆ. ಸಿಲೆಕ್ಷನ್ ಲಿಸ್ಟ್‌ನಲ್ಲಿ ತೀರಾ ಅಗತ್ಯವಾಗಿ ದಾಖಲಿಸಬೇಕಾದ ಅಭ್ಯರ್ಥಿಗಳ ಜನ್ಮ ದಿನಾಂಕವೇ ಇಲ್ಲ. ವಯೋಮಿತಿ ದಾಟಿದವರ ಆಯ್ಕೆ ಮಾಡಿರುವುದೇ ಈ ‘ಆಟ’ಕ್ಕೆ ಕಾರಣ ಎಂಬ ಮಾತು ಕಾರವಾರ ಮೆಡಿಕಲ್ ಕಾಲೇಜಿನ ಆವರಣ ದಾಟಿ ವೈದ್ಯಕೀಯ ಶಿಕ್ಷಣ ವಲಯದಲ್ಲಿ ಅನುರಣಿಸುತ್ತಿದೆ. ಎರಡು ವರ್ಷದ ಹಿಂದೆ ಡಾ.ನಾಯಕ್ ಇಬ್ಬರು ತಮ್ಮ ಆಪ್ತ ವಲಯದ ಮಹಿಳೆಯರಿಗೆ ಅರ್ಹತೆಯಿಲ್ಲದಿದ್ದರೂ ನಿಯಮಬಾಹಿರವಾಗಿ ಪ್ರಾಧ್ಯಾಪಕಿಯರನ್ನಾಗಿ ನೇಮಿಸಿದ ಇತಿಹಾಸ ಕ್ರಿಮ್ಸ್‌ನಲ್ಲಿದೆ.
ಇಷ್ಟೆಲ್ಲ ವಿರೋಧಾಭಾಸ, ಅನ್ಯಾಯ, ಅವಾಂತರದ ನಡುವೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹೈಕೋರ್ಟ್ ಬೇರೆ-ಬೇರೆ ಕಾರಣಕ್ಕಾಗಿ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ಕೊಡುತ್ತದೆ. ಮಾಜಿ ಸೈನಿಕರಿಗೆ ಮೀಸಲಾಗಿದ್ದ ಹುದ್ದೆಗಳನ್ನು ಡಿಕೆಟಗೆರೈಸೇಶನ್ ಮಾಡಿದ್ದನ್ನು ಪ್ರಶ್ನಿಸಿ ಇಬ್ಬರು ಅರ್ಹ ವೈದ್ಯರು ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ(ಸಂಖ್ಯೆ 8429/2024 ಮತ್ತು 8431/2024) ಸಲ್ಲಿಸುತ್ತಾರೆ. ವಿಚಾರಣೆ ನಡೆಸಿದ ಹೈಕೋರ್ಟ್ ಪೆಥಾಲಜಿ, ಮೈಕ್ರೋ ಬಯಾಲಜಿ, ಪೀಡಿಯಾಟ್ರಿಕ್ಸ್ ಹಾಗೂ ಅನೆಸ್ತೇಷಿಯಾ ವಿಭಾಗದ ಸಹಾಯಕ ಅಧ್ಯಾಪಕರ ಹುದ್ದೆಗಳಿಗೆ ನೇಮಕ ಮಾಡದಂತೆ ನಿರ್ಬಂಧಿಸುತ್ತದೆ. ಇದೇ ಆದೇಶದಲ್ಲಿ-ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಕಾನೂನಿನಂತೆ ಕೊಡಬೇಕು ಎಂದು ಹೇಳುತ್ತದೆ. ‘ಕಾನೂನಿನಂತೆ’ ಎಂಬ ಶಬ್ಧವನ್ನು ಮುಚ್ಚಿಟ್ಟು ಹೈಕೋರ್ಟ್ ಆದೇಶವನ್ನು ತನ್ನ ಮೂಗಿನ ನೇರಕ್ಕೆ ಅರ್ಥೈಸಿದ ಡಾ.ನಾಯಕ್ ತನ್ನೆಲ್ಲ ಅಕ್ರಮ ಸಕ್ರಮಕ್ಕೆ ಹೈಕೋರ್ಟ್ ಆದೇಶ ಹತಾರವಾಗಿಸಿಕೊಂಡು ಬೋಗಸ್ ನೇಮಕಾತಿ ಕಾರ್ಯಾಚರಣೆ ಮುಂದುವರೆಸುತ್ತಾರೆ.
ಇದನ್ನು ಓದಿದ್ದೀರಾ?: ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಕ್; ಅಕ್ಷರದ ಬೆಳಕಿಗಾಗಿ ಉರಿದ ದೀಪ!
ಮತ್ತೊಂದೆಡೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಾತಿ ಪಡೆಯುವ ಅಭ್ಯರ್ಥಿಗಳ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಬೋಧಕ ಸಿಬ್ಬಂದಿ ಆಯ್ಕೆ ಜರಗುತ್ತಿದೆ. ಈ ಅವ್ಯವಹಾರದಿಂದ ಅರ್ಹ ದಲಿತ ಅಭ್ಯರ್ಥಿಗಳಿಗೆ ಮೋಸ-ವಂಚನೆ-ಅನ್ಯಾಯ ಆಗುತ್ತಿದೆ. ಆದ್ದರಿಂದ ಈ ನೇಮಕಾತಿ ಪ್ರಕ್ರಿಯೆ ನಿಲ್ಲಿಸಬೇಕೆಂದು ದೂರುಗಳು ಹೋಗುತ್ತವೆ. ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ‘ಮುಂದಿನ ಆದೇಶದ ವರೆಗೆ ಕ್ರಿಮ್ಸ್‌ನಲ್ಲಿ ಆಗುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ’ ಉತ್ತರ ಕನ್ನಡದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್‌ಗೆ ಆದೇಶಿಸುತ್ತಾರೆ.[ಆದೇಶ ಸಂಖ್ಯೆ:ಉ.ನಿ.ಸ.ಕ.ಇಕಾ ಜಾತಿ ಪರಿಶೀಲನೆ(ಬ್ಯಾಕ್‌ಲಾಗ್) ಸಿ.ಆರ್.-153(2023-24 ದಿನಾಂಕ 13.2.2024)]. ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ ಡಾ.ನಾಯಕ್ ‘ಹೈಕೋರ್ಟ್ ನೇಮಕಾತಿಗೆ ಒಪ್ಪಿದೆ’ ಎನ್ನುತ್ತ ಆಯ್ಕೆ ಲಿಸ್ಟ್ ಪ್ರಕಟಿಸುತ್ತಾರೆ.
ತಮಾಷೆಯೆಂದರೆ, ಡಾ.ನಾಯಕ್ ಹೇಳುವಂತೆ ಹೈಕೋರ್ಟ್ ಮುಂದೆ ದಲಿತರ ಬ್ಯಾಕ್‌ಲಾಗ್ ಕಣ್ಕಟ್ಟು ಪ್ರಕರಣ ಬಂದಿರಲಿಲ್ಲ. ಹೈಕೋರ್ಟಲ್ಲಿ ಮಾಜಿ ಸೈನಿಕರ ಮೀಸಲಾತಿ ಹುದ್ದೆಗಳ ಡಿ-ಕೆಟಗರೈಸಶನ್ ಮಾತ್ರ ಪ್ರಸ್ತಾಪವಾಗಿತ್ತು. ಜತೆಗೆ ‘ಕಾನೂನಿನಂತೆ ನೇಮಕಾತಿ ಆದೇಶ ಕೊಡಿ’ ಎಂದು ಹೈಕೋರ್ಟ್ ಹೇಳಿತ್ತು. ಡೀನ್-ಡೈರೆಕ್ಟರ್ ಡಾ.ನಾಯಕ್ ‘ಕಾನೂನಿನಂತೆ’ ಎಲ್ಲಿ ನಡೆದುಕೊಂಡಿದ್ದಾರೆ? ನೈತಿಕತೆ ಪಾಲಿಸಿದ್ದಾರೆ? ಎಂಬ ಜಿಜ್ಞಾಸೆ ಈಗ ಮೂಡಿದೆ. ಒಟ್ಟೂ 18 ಅಸಿಸ್ಟಂಟ್ ಪ್ರೊಫೆಸರ್‍ಗಳನ್ನು ಡಾ.ನಾಯಕ್ ತರಾತುರಿಯಲ್ಲಿ ನೇಮಿಸಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಒಂದೊಂದು ಹುದ್ದೆ ಕನಿಷ್ಠ 50 ಲಕ್ಷಕ್ಕೆ ಹರಾಜಾಗಿದೆ ಎಂಬ ಸಮಾಚಾರ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕ್ರಿಮ್ಸ್ ಕಾರಿಡಾರಲ್ಲಿದೆ. ಕನಿಷ್ಠವೆಂದರೂ 10 ಕೋಟಿ ರೂ.ಗಳದು ಎನ್ನಲಾಗುತ್ತಿರುವ ಈ ಗೋಲ್ ಮಾಲ್ ನಿಷ್ಠುರ ತನಿಖೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ.
ಕ್ರಿಮ್ಸ್‌ನಲ್ಲಾಗಿರುವ ದಲಿತರ ವಂಚಿಸುವ ಭ್ರಷ್ಟಾಚಾರದ ಬೋಧಕ ನೇಮಕಾತಿ ರದ್ದುಪಡಿಸುವಂತೆ ಹಲವು ದಲಿತ ಸಂಘಟನೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಸದ್ರಿ ಇಲಾಖೆಯ ಮಂತ್ರಿಗಳಿಗೆ ದೂರುತ್ತಲೇ ಇದ್ದಾರೆ. ವಿಧಾನ ಪರಿಷತ್ ಸದಸ್ಯ ಎಚ್.ಪಿ.ಸುಧಾಮ್ ದಾಸ್ ವೈದ್ಯಕೀಯ ಶಿಕ್ಷಣ ಮಂತ್ರಿ ಶರಣಪ್ರಕಾಶ್ ಪಾಟೀಲ್ ಮತ್ತು ಸಮಾಜ ಕಲ್ಯಾಣ ಸಚಿವ ಮಹದೇವಪ್ಪರಿಗೆ ಪತ್ರ ಬರೆದು ಕ್ರಿಮ್ಸ್ ಡೀನ್-ಡೈರೆಕ್ಟರ್ ಡಾ.ನಾಯಕ್ ಮಾಡಿರುವ ದಲಿತ ದ್ರೋಹ ವಿವರಿಸಿದ್ದಾರೆ. ನೊಂದವರಿಗೆ ನ್ಯಾಯ ಮಾತ್ರ ಸಿಕ್ಕಿಲ್ಲ. ಬ್ಯಾಕ್‌ಲಾಗ್ ನುಂಗಿರುವ ಡಾ.ನಾಯಕ್ ನಿವೃತ್ತರಾಗಿ ಕ್ರಿಮ್ಸ್‌ನಿಂದ ಹೊರಹೋಗಿದ್ದಾರೆ. ಈ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ನಾಯಕ್ ಮಾಡಿದ ಸಕಲ ಲೋಪ-ದೋಷದ ಹೊಣೆ ಹೊರಬೇಕಾಗಿದೆ. ಸ್ವತಃ ವೈದ್ಯರಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಶರಣಪ್ರಕಾಶ್ ಪಾಟೀಲ್ ಸುಮ್ಮನಿರುವುದು ಏಕೆಂಬುದು ಮಿಲಿಯನ್ ಡಾಲರ್ ಒಗಟಾಗಿದೆ.
-ನಹುಷ
