ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ

Date:

Advertisements
ಕರಾವಳಿಯ ಬಹುತೇಕ ವಿದ್ಯಮಾನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು 'ಹೊರಗಿನವರು' 'ಅಪರಾಧಿ'ಗಳು ಎಂದು ನಿರ್ಣಯಿಸಿ ಕೃತ್ಯಗಳನ್ನು ನಡೆಸಲಾಗುತ್ತಿತ್ತು. ಅದು ನಿಧಾನಕ್ಕೆ ದಲಿತರ ಕಡೆ ತಿರುಗಿತು. ಈಗ ಪರಿಶಿಷ್ಟ ಜಾತಿಯ 'ಜಿಲ್ಲೆಯ ಹೊರಗಿನ' ಮಹಿಳೆಯ ಮೇಲೆ ತಿರುಗಿದೆ. ಇದು 'ಹಿಂದುತ್ವವಾದಿ' ನಮೂನೆಯ ನ್ಯಾಯ ನಿರ್ಣಯ...  

ಮಾರ್ಚ್ 18, 2025 ಮಂಗಳವಾರ ಸಂಜೆ 4 ಗಂಟೆಯ ಹೊತ್ತಿಗೆ, ಉಡುಪಿ ನಗರ ಸಭೆಯ ಭಾಗವಾಗಿರುವ ಮಲ್ಪೆಯ ಮೀನು ಪೇಟೆಯಲ್ಲಿ ಮೀನು ಕಳುವಿನ ಸುತ್ತ ಗಲಾಟೆ ಶುರುವಾಯಿತು. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಿಂದ ಆರೇಳು ವರ್ಷಗಳ ಹಿಂದೆ ಉಡುಪಿಗೆ ವಲಸೆ ಬಂದು, ಮಲ್ಪೆಯ ಬಂದರಲ್ಲಿ ಕೂಲಿ‌ಕೆಲಸ ಮಾಡಿಕೊಂಡಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಹಿಳೆಯೊಬ್ಬರು ‘ಬೆಲೆ ಬಾಳುವ 20 ಕೆ.ಜಿ. ಸೀಗಡಿ ಮೀನಿನ ಬುಟ್ಟಿ ಕದ್ದಿದ್ದಾರೆ’ ಎಂದು ಆರೋಪಿಸಿ, ಅಲ್ಲಿನ ಕೆಲವು ಗಂಡಸರು, ಹೆಂಗಸರೂ ಸೇರಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಪದೇ ಪದೇ ಕೆನ್ನೆಗೆ ಹೊಡೆಯುವ ವಿಡಿಯೋವು 19ನೇ ತಾರೀಖು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತು.

ಅದು ರಾಜ್ಯ ಸರಕಾರದ ಗಮನಕ್ಕೂ ಬಂದು, ಮುಖ್ಯಮಂತ್ರಿಗಳು ಖಂಡನಾ ಹೇಳಿಕೆ ನೀಡಿ ತಪ್ಪಿತಸ್ಥರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆ ನೀಡಿದರು. ಉಡುಪಿ  ಜಿಲ್ಲೆ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾನೂನು ಕ್ರಮ ಜರುಗಿಸಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ತಿಳಿಸಿರುವುದಾಗಿ ಹೇಳಿಕೆ ನೀಡಿದರು. 19ನೇ ತಾರೀಖು ನಾಲ್ಕು ಜನರ ಮೇಲೆ FIR ದಾಖಲು ಮಾಡಿ ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದರು. ಎಂದಿನಂತೆ ದಲಿತ ಸಂಘರ್ಷ ಸಮಿತಿ, ‘ಸಹಬಾಳ್ವೆ’ಯಂತಹ ಸೌಹಾರ್ದ ವೇದಿಕೆಗಳು ಘಟನೆಯನ್ನು ಖಂಡಿಸಿ ಕಠಿಣ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿದವು; ಸಾಮಾಜಿಕ ಜಾಲತಾಣಗಳು, ವೆಬ್ ಮಾಧ್ಯಮಗಳಲ್ಲಿ ಖಂಡನಾ ಬರಹಗಳು ಪ್ರಕಟವಾದವು.

ಕುತೂಹಲಕರವಾಗಿ ಜಿಲ್ಲೆಯ ಕಾಂಗ್ರೆಸ್ ಹಾಗೂ ಭಾಜಪ ಪಕ್ಷಗಳು ಮತ್ತೂ ಉಡುಪಿಯ ಶಾಸಕರು ಸೇರಿದಂತೆ ಜಿಲ್ಲೆಯ ಐವರು ಭಾಜಪ ಶಾಸಕರಿಂದ ಯಾವ ಪ್ರತಿಕ್ರಿಯೆಯೂ ತಕ್ಷಣಕ್ಕೆ ವ್ಯಕ್ತವಾಗಿಲ್ಲ. ಉಡುಪಿಯ ಶಾಸಕರು ಅಲ್ಪಸಂಖ್ಯಾತರ ಮೇಲೆ ಸದಾ ನಿಗಾ ಇಟ್ಟು, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳ ಕೃತ್ಯಗಳು ನಡೆದರೆ ಅದಕ್ಕೆ ತಕ್ಷಣವೇ ‘ಅಂತಾರಾಷ್ಟ್ರೀಯ ಪಿತೂರಿ’ಯ ಕೋನ ನೀಡಿ, ಕೇಂದ್ರ ತನಿಖಾ ದಳ, ರಾಷ್ಟ್ರೀಯ ತನಿಖಾ ದಳದ ಮೂಲಕ ಅಪರಾಧ ಅನಾವರಣಕ್ಕೆ ತುಂದಿಲವಾಗಿರುವಂಥವರು. ಅವರು 20ನೇ ತಾರೀಖು ಬಾಯ್ಬಿಚ್ಚಿ ‘ಮಲ್ಪೆ ಬಂದರಿನ ನಿರ್ವಹಣೆ ಬಗ್ಗೆ ಮೀನುಗಾರಿಕೆ ಇಲಾಖೆಯ ನಿರ್ಲಕ್ಷ್ಯ ಇಂತಹ ಘಟನೆಗಳಿಗೆ ಅವಕಾಶ ನೀಡಿದೆ. ನಿರಂತರವಾಗಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರೂ ಸಿ.ಸಿ.ಟೀವಿ ಅಳವಡಿಸಿಲ್ಲ, ಭದ್ರತಾ ಸಿಬ್ಬಂದಿ ನೇಮಿಸಿಲ್ಲ’ ಎಂದರು! ಮಾತ್ರವಲ್ಲ, ಮಲ್ಪೆಯ ಮೀನುಗಾರರ ಸಂಘವು ಬಡವ ಬಲ್ಲಿದರೆಂಬ, ಹೊರ ರಾಜ್ಯ ಹೊರ ಜಿಲ್ಲೆಯವರೆಂಬ ಭೇದವೆಣಿಸದೆ ದುಡಿಯುವ ಎಲ್ಲರ ಶಾಂತಿ ಸೌಹಾರ್ದಕ್ಕೆ ದುಡಿಯುವ ಸಂಘವಾಗಿದೆ; ಈ ಸಂಘವು ‘ಸಣ್ಣಪುಟ್ಟ ಘಟನೆಗಳು ನಡೆದಾಗ’ ಮಧ್ಯಸ್ಥಿಕೆ ವಹಿಸಿ ಶಾಂತಿಯುತ ನ್ಯಾಯ ಪರಿಹಾರ ನೀಡಿದೆ ಎಂಬ ಶ್ಲಾಘನೆ ಕೂಡ ಮಾಡಿದರು.

Advertisements

ಇದನ್ನು ಓದಿದ್ದೀರಾ?: ಕರಾವಳಿಯಲ್ಲಿ ಮೀನಿಗೂ ತಟ್ಟಿದ ‘ಬರಗಾಲ’: ಉದ್ಯಮಿಗಳ ಸಹಿತ ಸಂಕಷ್ಟದಲ್ಲಿ ಲಕ್ಷಾಂತರ ಕುಟುಂಬಗಳು

ಸನ್ಮಾನ್ಯ ಶಾಸಕರ ಈ ಮೊದಲ ಸಾರ್ವಜನಿಕ ಹೇಳಿಕೆಯ ಬೆನ್ನಿಗೇ, ಅವರು ಶ್ಲಾಘಿಸಿದ ಮಲ್ಪೆ ಮೀನುಗಾರರ ಸಂಘವು ತನ್ನ ಸಾರ್ವಜನಿಕ ಹೇಳಿಕೆಯನ್ನು ನೀಡಿದೆ. ಆ ಹೇಳಿಕೆಯು ಸಮಾಜ ಶಾಸ್ತ್ರಜ್ಞರಿಗೆ ಅಭ್ಯಾಸಯೋಗ್ಯ ಆಗಿರುವುದರಿಂದ, ಸ್ವಲ್ಪ ವಿವರವಾಗಿಯೇ ಅದನ್ನು ಗಮನಿಸಬಹುದು:

‘ಮಲ್ಪೆ ಬಂದರಿನಲ್ಲಿ ಮೀನು ಹೊರುವ ಮಹಿಳೆಯ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆದಿಲ್ಲ. ಅದು ಕ್ಷಣಿಕ ಸಿಟ್ಟಿನಿಂದ ಆಗಿದ್ದು. ಮಾರ್ಚ್ 18ರಂದು ಮೀನು ಖಾಲಿ ಮಾಡುವ ಸಂದರ್ಭದಲ್ಲಿ ಮೀನು ಹೊರುವ ಮಹಿಳೆಯು ಒಂದು ಬುಟ್ಟಿ ಬೆಲೆಬಾಳುವ  ಸೀಗಡಿ ಮೀನನ್ನು  ಕದ್ದೊಯ್ದಿದ್ದಾರೆ. ಆ ಬಗ್ಗೆ ಆಕ್ರೋಶಗೊಂಡ ಜನರಿಂದ ಮಹಿಳೆ ಮೇಲೆ ಹಲ್ಲೆ ನಡೆದಿದೆ… ಹಲ್ಲೆ ಪ್ರಕರಣ ನಮ್ಮ ಗಮನಕ್ಕೆ ಬಂದಕೂಡಲೇ ಅಂದು ಸಂಜೆ ಮಲ್ಪೆಯ ಠಾಣಾಧಿಕಾರಿಯ ಗಮನಕ್ಕೆ ತಂದು ಎರಡೂ ಪಾರ್ಟಿಯವರನ್ನು ಮೀನುಗಾರರ ಸಮಕ್ಷಮದಲ್ಲಿ ವಿಚಾರಿಸಿದಾಗ ಎರಡೂ ಕಡೆಯವರೂ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಠಾಣಾಧಿಕಾರಿ ಎರಡೂ ಪಾರ್ಟಿಯವರಿಂದ ತಪ್ಪೊಪ್ಪಿಗೆ ಹಿಂಬರಹವನ್ನು ಬರೆಸಿಕೊಂಡು ಅದನ್ನು ಇತ್ಯರ್ಥಗೊಳಿಸಿದ್ದರು. ಆದರೆ ಮಾರ್ಚ್ 19ರಂದು ಬೋಟ್ ಮಾಲೀಕರನ್ನು ರಾಜಿ ಪಂಚಾಯಿತಿಗೆ ಸಹಿ ಹಾಕಲೆಂದು ಕರೆಸಿ ಸತ್ಯಾಸತ್ಯತೆಯನ್ನು ಅರಿಯದೇ ಪೊಲೀಸರು ಬಂಧಿಸಿದ್ದಾರೆ. ಠಾಣಾಧಿಕಾರಿ ಮಾಡಿರುವ ರಾಜಿ ಪಂಚಾಯಿತಿಗೆ ಮಾನ್ಯತೆ ನೀಡದೇ ಮರುದಿನ ನಾಲ್ವರ ಮೇಲೆ ಜಾಮೀನುರಹಿತ ಸೆಕ್ಷನ್‌ಗಳನ್ನು ಹಾಕಿ ಎಫ್.ಐ.ಆರ್. ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಯಾರದೋ ಒತ್ತಡಕ್ಕೆ ಒಳಗಾಗಿ ಬಡ ಮೀನುಗಾರರನ್ನು ಬಂಧನ ಮಾಡಿರುವ ಹಾಗಿದೆ… ಹೀಗಾಗಿ ಮಲ್ಪೆ ಮೀನುಗಾರಿಕ ಬಂದರಿನಲ್ಲಿ ಇದೇ 22ರಂದು ಸ್ವ ಇಚ್ಛೆಯಿಂದ ಮೀನುಗಾರಿಕೆ ಸ್ಥಗಿತಗೊಳಿಸಿ ಎಲ್ಲ ಮೀನುಗಾರರು ಪ್ರತಿಭಟನೆ ನಡೆಸಲಿದ್ದಾರೆ.’

‘ಮಲ್ಪೆ ಮೀನುಗಾರರ ಸಂಘ (ರಿ)’ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿರುವ ಸಾರ್ವಜನಿಕ ಹೇಳಿಕೆಯ ಮೊದಲ ಭಾಗದಲ್ಲಿ, ಉಡುಪಿಯ ಶಾಸಕರ ಹೇಳಿಕೆಯಲ್ಲಿರುವ ಮೀನುಗಾರಿಕಾ ಇಲಾಖೆಯನ್ನು ಕುರಿತ ದೂರುಗಳು ಪ್ರಸ್ತಾವಿತವಾಗಿವೆ. ನಂತರ ಹಲವಾರು ಕಳ್ಳತನದ ಕೃತ್ಯಗಳಿಂದ ಮೀನುಗಾರರು ಬಾಧಿತರಾಗಿದ್ದು, ಈ ಕುರಿತು ನೀಡಿದ ದೂರುಗಳಿಗೆ ನ್ಯಾಯ ಸಿಗದೆ ಮೀನುಗಾರರು ‘ಆಕ್ರೋಶಿತರಾಗಿದ್ದಾರೆ’ ಎಂಬ ಪ್ರಸ್ತಾವನೆ ಇದೆ.

ಪ್ರಸ್ತುತ ವಿದ್ಯಮಾನ ಹಾಗೂ ಅದರಲ್ಲಿ ಅಪರಾಧದ ಆರೋಪಿಗಳ ಪರವಾಗಿ ಮಾತನಾಡುವವರ ವರಸೆಯು ಗಮನಾರ್ಹವಾಗಿದೆ:

1) ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಆದರೆ ಅದು ‘ಬೆಲೆಬಾಳುವ ಬುಟ್ಟಿ ದುಬಾರಿ ಮೀನನ್ನು ಕದ್ದೊಯ್ದ’ ಕಾರಣಕ್ಕೆ ‘ಆಕ್ರೋಶಿತರಾದ ಜನರ’ ‘ಕ್ಷಣಿಕ ಸಿಟ್ಟಿನಿಂದ’ ನಡೆದದ್ದೇ ವಿನಹ ಬೇರೆ ದುರುದ್ದೇಶವಿಲ್ಲ.

2) ‘ಜನರ ಆಕ್ರೋಶ’ಕ್ಕೆ ತಮ್ಮ ಮೇಲೆ ಅನ್ಯಾಯವಾಗುತ್ತಿದ್ದರೂ ‘ನ್ಯಾಯ ಸಿಗದ’ ಕಾರಣಗಳು ಇವೆ. ಇದಕ್ಕೆ ‘ಶೀಘ್ರ ನ್ಯಾಯ’ ಒದಗಿಸಿದವರು ಕಾರಣ.

3) ‘ಮಲ್ಪೆ ಮೀನುಗಾರರ ಸಂಘ’ವು ನ್ಯಾಯಪರವಾದದ್ದು, ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು. ಹಾಗಾಗಿ, ಜಗಳಗಳು ನಡೆದಾಗ ಅದಕ್ಕೆ ರಾಜಿ ಪಂಚಾಯ್ತಿಕೆ ಮಾಡಿ ನ್ಯಾಯ ನಿರ್ಣಯ ಮಾಡುವ ನೈತಿಕ ಅಧಿಕಾರ ಸಹಜವಾಗಿ ಇದೆ.

4) ಪ್ರಸ್ತುತ ವಿದ್ಯಮಾನದಲ್ಲೂ, ಮಹಿಳೆಯು ‘ಬೆಲೆ ಬಾಳುವ ಮೀನು ಬುಟ್ಟಿಯನ್ನು ಕದ್ದಿರುವುದು’ ಮತ್ತು ‘ಕ್ಷಣಿಕ ಸಿಟ್ಟಿನಿಂದ’ ಜನರು ಹಲ್ಲೆ ಮಾಡಿರುವುದು, ಎರಡನ್ನೂ ಸಂಘವೇ ತನಿಖೆ ಮಾಡಿದೆ. ಆ ನಂತರ ಮಲ್ಪೆ ಠಾಣಾಧಿಕಾರಿಗಳಿಗೆ ತಿಳಿಸಿ, ಎರಡೂ ಪಾರ್ಟಿಗಳಿಂದ ತಪ್ಪೊಪ್ಪಿಗೆ ಬರೆಸಿಕೊಂಡು, ಠಾಣಾಧಿಕಾರಿಗಳಿಂದ ಹಿಂಬರಹ ಬರೆಸಿ, ವಿವಾದವನ್ನು ಇತ್ಯರ್ಥಗೊಳಿಸಿದೆ. ಅಲ್ಲಿಗೆ ‘ರಾಜಿ ಪಂಚಾಯ್ತಿಕೆ’ಯ ಶಾಂತಿಯುತ ತೀರ್ಮಾನವು 18ರಂದೇ ಆಗಿಹೋಗಿದೆ.

5) ಇಷ್ಟಿದ್ದೂ ‘ಮಲ್ಪೆ ಠಾಣಾಧಿಕಾರಿಯವರು ಮಾಡಿದ ರಾಜಿ ಪಂಚಾಯ್ತಿಕೆಗೆ ಮಾನ್ಯತೆ ನೀಡದೇ… ಮೇಲ್ನೋಟಕ್ಕೆ ಯಾರದೋ ಒತ್ತಡಕ್ಕೆ ಮಣಿದು ಬಡ ಮೀನುಗಾರರನ್ನು ಬಂಧಿಸಲಾಗಿದೆ’.

6) ಸಂಘದ ನ್ಯಾಯ ಪಂಚಾಯ್ತಿಕೆಯನ್ನು ಮೀರಿ ಕಾನೂನುಕ್ರಮ ಜರುಗಿಸುತ್ತಿರುವುದು ಅನ್ಯಾಯವೆಂದು ಪರಿಗಣಿಸಿ ‘ಮೀನುಗಾರರು ಪ್ರತಿಭಟನೆ ನಡೆಸಲಿದ್ದಾರೆ’.

ಇಲ್ಲಿ ಒಂದು ಬಗೆಯ ‘ನ್ಯಾಯ ಕ್ರಮ’ವನ್ನು ನಾವು ಗಮನಿಸಬಹುದು:

1) ಮಹಿಳೆ ಬೆಲೆ ಬಾಳುವ ಮೀನು ಕದ್ದಿದ್ದಾಳೆ- ಅದು ಅವಿವಾದಿತ. ಯಾವ ವಿಚಾರಣೆ, ಸಾಕ್ಷಿ ಪುರಾವೆಗಳ ಅಗತ್ಯವಿಲ್ಲದೆ, ಸ್ಥಳದಲ್ಲಿದ್ದ ಗುಂಪು ಮಹಿಳೆಯನ್ನು ‘ಅಪರಾಧಿ’ ಎಂದು ನಿರ್ಣಯಿಸಿಬಿಡುತ್ತದೆ.

2) ಹೀಗೆ ನಿರ್ಣಯಿತವಾದ ಮೇಲೆ, ಅದಕ್ಕೆ ಏನು ಶಿಕ್ಷೆ ಎಂದು ‘ಕ್ಷಣಿಕ ಸಿಟ್ಟಿನ’ ವಿವೇಚನೆಯಲ್ಲಿ ನಿರ್ಣಯಿಸಿಬಿಡುವ ಅಧಿಕಾರ ದೊರಕಿಬಿಡುತ್ತದೆ.

3) ಹಾಗೆ ನಿರ್ಣಯಿಸಿದ ವ್ಯಕ್ತಿಗಳು ಗುಂಪು ಸೇರಿಕೊಂಡು, ಸಾರ್ವಜನಿಕರ ಸಮಕ್ಷಮ ಶಿಕ್ಷೆಯನ್ನೂ ವಿಧಿಸಿಬಿಡುತ್ತಾರೆ.

4) ಅದೆಲ್ಲ ಆದ ನಂತರ ಸಂಘವು ಮಧ್ಯ ಪ್ರವೇಶ ಮಾಡಿ, ಅಪರಾಧ ಘಟನೆಗಳು ಸಂವಿಧಾನಬದ್ಧ ಕಾನೂನು ವ್ಯವಸ್ಥೆಯ ಪರಿವ್ಯಾಪ್ತಿಗೆ ಹೋಗದ ಹಾಗೆ ಠಾಣಾಧಿಕಾರಿಯವರ ಸಮಕ್ಷಮ ಕೇಸು ಕ್ಲೋಸ್ ಮಾಡಿಸಿಬಿಡುತ್ತಾರೆ.

5) ಹೀಗೆ ಕೇಸು ‘ಶಾಂತಿಯುತ ಪರಿಹಾರ’ ಆದ ಮೇಲೆ, ಕದ್ದ ಆರೋಪದ ಬಗ್ಗೆಯಾಗಲೀ, ಸ್ಥಳದಲ್ಲೆ ಶಿಕ್ಷಿಸಿದ ನಮೂನೆಯ ಬಗೆಗಾಗಲೀ ಯಾರಾದರೂ ಮುಂದುವರೆದರೆ, ಅದಕ್ಕೆ ‘ಮೇಲಿನ ಯಾವುದೋ ಒತ್ತಡ’ ಇದೆ- ಅದು ಅನ್ಯಾಯ, ಅದನ್ನು  ಸಹಿಸುವುದಿಲ್ಲ.

ಮಾರ್ಚ್ 18ರಂದು ಘಟನೆ ನಡೆಯುತ್ತದೆ. 20ರಂದು ಈ ಬಗೆಯ ನ್ಯಾಯ ನಿರ್ಣಯ ವ್ಯವಸ್ಥೆಯು ತನ್ನ ನ್ಯಾಯ ವಿವೇಚನೆಯನ್ನು, ಸ್ಥಳೀಯ ಶಾಸಕರ ಸಮಜಾಯಿಷಿಯೊಂದಿಗೆ ಪ್ರಕಟಿಸಿ, ‘ಪ್ರತಿಭಟನೆ’ಗೆ ಸನ್ನದ್ಧರಾಗುತ್ತಾರೆ. ಇಷ್ಟು ಸಕ್ಷಮವಾಗಿ ನಡೆಯುವುದು ಹ್ಯಾಗೆ ಸಾಧ್ಯ? ಎಂದು ಸೋಜಿಗಪಡಬೇಕಿಲ್ಲ. ಇದಕ್ಕೆ ಎರಡು ದಶಕಗಳ ತಯಾರಿಯು ಉಡುಪಿ ಜಿಲ್ಲೆಯೊಂದರಲ್ಲೇ ನಡೆದಿದೆ. ಅದಕ್ಕೆ ಎರಡೇ ಉದಾಹರಣೆಗಳನ್ನು ನೋಡಬಹುದು.

1) 2005ರ ಮಾರ್ಚ್ 27ರಂದು, ಇದೇ ಮಲ್ಪೆಯ ಸಮೀಪವಿರುವ ಆದಿ ಉಡುಪಿ ಎಂಬ ಪ್ರದೇಶದಲ್ಲಿರುವ ಸರಕಾರಿ ಹೆಲಿಪ್ಯಾಡಿನಲ್ಲಿ ಈ ನ್ಯಾಯ ವ್ಯವಸ್ಥೆ ಉದ್ಘಾಟನೆ ಆಗಿತ್ತು. ಅಂದು ಹಾಜಬ್ಬ ಎಂಬ 65 ವಯಸ್ಸಿನ ವೃದ್ಧರನ್ನು ಅವರ ಮಗ ಹಸನಬ್ಬ ಎಂಬ ಯುವಕನನ್ನು ‘ದನಗಳನ್ನು ಕದ್ದು ಸಾಗಾಟ ಮಾಡುತ್ತಿದ್ದಾರೆ’ ಎಂಬ ಆರೋಪವನ್ನು ಹಿಂದುತ್ವವಾದಿ ಸಂಘಟನೆ ‘ಹಿಂದು ಯುವ ಸೇನೆ’ಯು ಹೊರಿಸಿತು; ಅವರನ್ನು ಬೆತ್ತಲೆಗೊಳಿಸಿ, ಗಂಟೆಗಟ್ಟಲೆ ದೈಹಿಕ ಹಲ್ಲೆ ನಡೆಸಲಾಯಿತು. ಸ್ಥಳೀಯ ಪತ್ರಕರ್ತರೋರ್ವರು ಘಟನೆಯ ಛಾಯಾಚಿತ್ರ ಹಿಡಿದು ಪತ್ರಿಕೆಗಳಿಗೆ ನೀಡಿದ ಕಾರಣ ಅದು ರಾಜ್ಯಾದ್ಯಂತ ಸುದ್ಧಿ ಆಯಿತು. ಈ ಘಟನೆಯಲ್ಲಿ ಹಾಲಿ ಉಡುಪಿಯ ಶಾಸಕರು ಪ್ರಮುಖ ಆರೋಪಿಯಾಗಿದ್ದರು. ಆಗಲೂ, ‘ಇದು ಹಿಂದುಗಳಿಗೆ ಪವಿತ್ರವಾದ ಸಾವಿರಾರು ಹಸುಗಳನ್ನು ಕದ್ದು ಕಡಿಯುವ ಅಪರಾಧ ಎಸಗುವವರ ಮೇಲೆ ಯಾವ ಕಾನೂನು ಕ್ರಮವು ಜರುಗುತ್ತಿಲ್ಲ’ ಎಂಬ ‘ಆಕ್ರೋಶದಲ್ಲಿ’ ಈ ಕೃತ್ಯ ನಡೆದಿದೆ ಎಂಬ ವಾದವನ್ನು ಹೂಡಲಾಗಿತ್ತು. ಕೇಸು ಕೋರ್ಟಿಗೆ ಹೋಗಿ, 5 ವರ್ಷ ನಡೆದು, ಸಾಕ್ಷಿಗಳಿಲ್ಲವೆಂದು ಆರೋಪಿಗಳು ಖುಲಾಸೆ ಆದರು. ಖುಲಾಸೆ ಆದ ತಕ್ಷಣವೇ ಅವರು ಮಾಡಿದ ಕೆಲಸವೆಂದರೆ, ಯಾರಪ್ಪಣೆಯನ್ನು ಕೇಳದೆ ಉಡುಪಿಯ ಮುಖ್ಯ ಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ಹೊರಟು, ಜನನಿಬಿಡ ಸ್ಥಳದಲ್ಲಿ ಸಭೆ ಸೇರಿ ‘ಮುಂದೆ ದನ ಕದಿಯುವವರಿಗೆ ಇದೇ ಬಗೆಯ ಶಿಕ್ಷೆ ನೀಡುತ್ತೇವೆ’ ಎಂಬ ಎಚ್ಚರಿಕೆ ನೀಡಿ ಸಾಂವಿಧಾನಿಕ ನ್ಯಾಯ ವ್ಯವಸ್ಥೆಯ ಮುಖಕ್ಕೆ ಉಗಿದದ್ದು.

2) ಉಡುಪಿ ಜಿಲ್ಲೆಯಲ್ಲಿ ಗಂಗೊಳ್ಳಿ ಎಂಬ ಮತ್ತೊಂದು ಮೀನುಗಾರಿಕೆ ಪ್ರದೇಶವಿದೆ. ಆ ಊರಿನ ಮುಸಲ್ಮಾನರಿಗೆ ಸೇರಿದ ಜಾಮಿಯ ಮಸೀದಿ ಕಟ್ಟಡಕ್ಕೆ ಬೆಂಕಿ ಹಾಕಿದ ಪ್ರಕರಣವು 2014ರ ನವೆಂಬರ್ ತಿಂಗಳಲ್ಲಿ ನಡೆಯಿತು. ಆ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರು ನೀಡಿದ ದೂರಿನ ಮೇರೆಗೆ, ಕೆಲವು ಆರೋಪಿಗಳನ್ನು ಬಂಧಿಸಲಾಯಿತು. ಬಂಧನವಾದದ್ದೇ, ಹಿಂದುತ್ವವಾದಿ ಸಂಘಟನೆಗಳು ‘ಅಮಾಯಕ ಹಿಂದುಗಳನ್ನು ಬಂಧಿಸಿದ್ದಾರೆ’ ಎಂದು ಆರೋಪಿಸಿ, ಸಾವಿರಾರು ಸಂಖ್ಯೆಯ ಜನರನ್ನು ಸೇರಿಸಿ, ಹೆದ್ದಾರಿ ಬಂದ್ ಮಾಡಿ, ಪೊಲೀಸು ಅಧಿಕಾರಿಗಳನ್ನು ದಿಗ್ಬಂದಿಸಿ ಉದ್ರಿಕ್ತ ವಾತಾವರಣ ಉಂಟುಮಾಡಿದರು. ಕಠಿಣ ಕಲಮ್ಮುಗಳಡಿ ಬಂಧಿತರಾದವರನ್ನು ಲೀಲಜಾಲವಾಗಿ ಜಾಮೀನಿನಲ್ಲಿ ಬಿಡುಗಡೆ ಮಾಡಿಸಿ, ಮತ್ತೆ ಸಾವಿರಾರು ಜನರನ್ನು ಸೇರಿಸಿ ವಿಜಯೋತ್ಸವ ಮೆರವಣಿಗೆ ಮಾಡಲಾಯಿತು. ಕೇಸಲ್ಲಿ ಯಾರಿಗೂ ಶಿಕ್ಷೆ ಆಗಲಿಲ್ಲ.

ಇವೆರಡಕ್ಕೆ ವ್ಯತಿರಿಕ್ತವಾದ ಮತ್ತೊಂದು ವಿದ್ಯಮಾನವನ್ನು ಇಲ್ಲಿ ಗಮನಿಸುವುದು ಸೂಕ್ತ. 2023ರ ನವೆಂಬರ್ ತಿಂಗಳಿನಲ್ಲಿ, ಉಡುಪಿಯ ಸಮೀಪದ ನೇಜಾರು ಎಂಬ ಗ್ರಾಮದಲ್ಲಿ, ವ್ಯಕ್ತಿಯೊಬ್ಬ ಮುಸಲ್ಮಾನರ ಮನೆಗೆ ಹೋಗಿ ಸಂಸಾರದ ನಾಲ್ವರನ್ನು ಹತ್ಯೆ ಮಾಡಿ ತಪ್ಪಿಸಿಕೊಂಡಿದ್ದ. ಪೊಲೀಸರು ಅವನ‌ ಪತ್ತೆ ಹಚ್ಚಿ ಮಹಜರಿಗೆಂದು ಘಟನೆಯ ಸ್ಥಳಕ್ಕೆ ಕರೆದು ತಂದಾಗ, ಉದ್ರಿಕ್ತ ಜನರ ಗುಂಪು ಆತನನ್ನು ತಮ್ಮ ವಶಕ್ಕೆ ನೀಡಬೇಕೆಂದು ಗಲಭೆ ಎಬ್ಬಿಸಿತು. ಆಗ ಸ್ಥಳದಲ್ಲಿ‌‌ ಮುಂಜಾಗ್ರತೆಯಿಂದ ಇದ್ದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಂದಾಳುಗಳು ಮಧ್ಯಪ್ರವೇಶಿಸಿ, ಕಾನೂನು ಕೈಗೆತ್ತಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿ, ಪೊಲೀಸರ ಜೊತೆ ಸೇರಿ ಶಾಂತಿ ಕಾಪಾಡಿದರು. ಕೇಸು ನಡೆಯುತ್ತಿದೆ. ಸಾಂವಿಧಾನಿಕ ನ್ಯಾಯ ಪ್ರಕ್ರಿಯೆಯಲ್ಲಿ ಏನಾಗುತ್ತದೋ ಅದು ಆಗಲಿ ಎಂದು ವಿವೇಕವುಳ್ಳ ಸಮುದಾಯವು ಶಾಂತಿ ಸೌಹಾರ್ದ ಕಾಪಾಡಿತು. ಇದು ಉಡುಪಿ ಜಿಲ್ಲೆಯ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಹಳ ಅಪರೂಪದ ಘಟನೆ.

ಇದನ್ನು ಓದಿದ್ದೀರಾ?: ಮಲ್ಪೆ ಮಹಿಳೆ ಮೇಲೆ ಹಲ್ಲೆ; ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?

ಮೊದಲ ಎರಡು ಹಿಂಸಾತ್ಮಕ ವಿದ್ಯಮಾನಗಳಂತಹ ಇನ್ನು ಹತ್ತಾರು ವಿದ್ಯಮಾನಗಳು ಜಿಲ್ಲೆಯಲ್ಲಿ ನಡೆದಿವೆ. ಅವೆಲ್ಲವುಗಳಲ್ಲಿ ‘ಹಿಂದುತ್ವ ವಾದಿ’ ಗುಂಪುಗಳು, ತಾವೇ ಆರೋಪ ಹೋರಿಸಿ, ತಾವೇ ವಿಚಾರಣೆ ನಡೆಸಿ, ತಾವೇ ಶಿಕ್ಷೆ ನೀಡಿದ್ದಾರೆ. ಅದಕ್ಕೆ ‘ಹಿಂದುಗಳ ಮೇಲೆ ನಡೆಯುತ್ತಿರುವ ಅನ್ಯಾಯಗಳಿಗೆ ಆಕ್ರೋಶ’ ಎಂಬ ಸಮರ್ಥನೆ ನೀಡಿದ್ದಾರೆ. ಆರೋಪಿಗಳನ್ನು ಕಾನೂನಾತ್ಮಕವಾಗಿ ಬಂಧಿಸಿ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಿದಾಗ, ಗುಂಪು ಸೇರಿಸಿ ದುಂಡಾವರ್ತಿ ನಡೆಸಿದ್ದಾರೆ. ‘ಸಾಕ್ಷಿಗಳಿಲ್ಲದ ಕಾರಣ’ ಕೇಸುಗಳು ಬಿದ್ದು ಹೋದಾಗ ವಿಜಯೋತ್ಸವ ಆಚರಿಸಿದ್ದಾರೆ.

ಬಹುತೇಕ ಇಂತಹ ವಿದ್ಯಮಾನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ‘ಹೊರಗಿನವರು’ ‘ಅಪರಾಧಿ’ಗಳು ಎಂದು ನಿರ್ಣಯಿಸಿ ಕೃತ್ಯಗಳನ್ನು ನಡೆಸಲಾಗುತ್ತಿತ್ತು. ಅದು ನಿಧಾನಕ್ಕೆ ದಲಿತರ ಕಡೆ ತಿರುಗಿ ಅವರ ‘ಅಪರಾಧ’ ತೀರ್ಮಾನಿಸಿ ಹಲ್ಲೆ ನಡೆಸಿದ ಪ್ರಕರಣಗಳು ‘ರಾಜಿ ಪಂಚಾಯ್ತಿಕೆ’ಯಿಂದ ಮುಚ್ಚಿ ಹೋಗಿವೆ.

ಇದೀಗ, ಪರಿಶಿಷ್ಟ ಜಾತಿಯ ‘ಜಿಲ್ಲೆಯ ಹೊರಗಿನ’ ಮಹಿಳೆಯ ಮೇಲೆ ‘ಹಿಂದುತ್ವವಾದಿ’ ನಮೂನೆಯ ನ್ಯಾಯ ನಿರ್ಣಯ ನಡೆದಿದೆ. ಮೀನುಗಾರರಾದ ಮೊಗವೀರ ಸಮುದಾಯದವರಾಗಿರಲೀ, ಮತ್ತ್ಯಾವುದೇ ಸಮುದಾಯದವರಾಗಿರಲೀ, ಈ ಬಗೆಯ ಗುಂಪು ಹಿಂಸೆ, ‘(ಅ)ನ್ಯಾಯನಿರ್ಣಯ’ ವ್ಯವಸ್ಥೆಯು ಆ ಸಮುದಾಯಗಳ ಲಕ್ಷಣವಂತೂ ಅಲ್ಲವೇ ಅಲ್ಲ. ಹಿಂದುತ್ವವಾದಿ ರಾಜಕಾರಣವು ಸತತ ಎರಡು ದಶಕಗಳ ಕಾಲ ಈ ಬಗೆಯ ಹಿಂಸಾತ್ಮಕ ವ್ಯವಸ್ಥೆಯನ್ನು ಹಿಂದುಳಿದವರು, ಬಡವರೂ ಆದ ಜಾತಿ ಸಮುದಾಯಗಳಲ್ಲಿ ರೂಢಿಸಿದೆ ಮಾತ್ರವಲ್ಲ, ಅಭಯ ನೀಡಿ ಪ್ರೋತ್ಸಾಹಿಸಿ ಬೆಳೆಸುತ್ತಿದೆ. ಅವರನ್ನು ‘ಸಂವಿಧಾನಬದ್ಧ ನ್ಯಾಯ ವ್ಯವಸ್ಥೆ’ಯ ವಿರುದ್ಧ ಎತ್ತಿ ಕಟ್ಟುವ ವರಸೆಗಳನ್ನೂ ಸಹಜಗೊಳಿಸುತ್ತಿದೆ.

ಮಲ್ಪೆಯ ಪ್ರಸ್ತುತ ವಿದ್ಯಮಾನದಲ್ಲಿ ಈ ಎಲ್ಲ ಲಕ್ಷಣಗಳು ಯೋಜಿತವಾಗಿ ಕಂಡು ಬರುತ್ತಿವೆ. ಇದಲ್ಲದಿದ್ದರೆ ‘ಠಾಣಾಧಿಕಾರಿಯವರು ಮಾಡಿದ ರಾಜಿ ಪಂಚಾಯ್ತಿಕೆಗೆ ಮಾನ್ಯತೆ’ ಇನ್ನೆಲ್ಲಿ ಸಿಗಬೇಕು?!

paniraj
ಕೆ. ಫಣಿರಾಜ್
+ posts

ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೆ. ಫಣಿರಾಜ್
ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

Download Eedina App Android / iOS

X