ಪುತ್ತೂರು(Puttur) ಶಾಸಕ(MLA) ಅಶೋಕ್ ರೈ(Ashok rai)ಗೆ ತನ್ನ ಗೆಲುವಿನ ಗುಟ್ಟು ಗೊತ್ತಿದೆ. ಇದು ಅರ್ಹ ಗೆಲುವಲ್ಲ, ಆಕಸ್ಮಿಕ ಲಾಟರಿ ಎಂಬ ಅರಿವಿದೆ. ಹೀಗಾಗಿ ಹಿಂದುತ್ವದ ಆಧಾರದಲ್ಲೇ ಈಗವರು ಮುಂದಿನ ಚುನಾವಣೆಗೆ ಅಖಾಡ ಹದಗೊಳಿಸಿಕೊಳ್ಳುತ್ತಿದ್ದಾರೆ.
ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಘೋಷಿತ ಧರ್ಮಾತೀತ ನೀತಿಯ ಕಾಂಗ್ರೆಸ್ ಪಕ್ಷದವರೋ? ಪಕ್ಕಾ ಮತೀಯ ಮಸಲತ್ತಿನ ಬಿಜೆಪಿಯವರೋ? ಈ ಎಮ್ಮೆಲ್ಲೆಯ ಬದ್ಧತೆ ಸಂವಿಧಾನಕ್ಕೋ? ಸಂಘಪರಿವಾರದ ದ್ವೇಷಾಸೂಯೆಯ ಹಿಂದುತ್ವಕ್ಕೋ? ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಪುತ್ತೂರನ್ನು ಸಂಯಮ-ಸಾಮರಸ್ಯದಿಂದ ಮುನ್ನಡೆಸುವ ಕಳಕಳಿಯವರೋ?ಬಹುಸಂಖ್ಯಾತ ಹಿಂದುಗಳನ್ನು ಧರ್ಮದ ಆಧಾರದಲ್ಲಿ ಮೆಚ್ಚಿಸಿ ಆ ಹೆಚ್ಚುಗಾರಿಕೆ ‘ಮೆರಿಟ್’ನಿಂದ ಮುಂದಿನ ಚುನಾವಣೆಯಲ್ಲಿ ಕೇಸರಿ ಪಾರ್ಟಿಯ ಟಿಕೆಟ್ ಗಿಟ್ಟಿಸುವ ಗುಪ್ತ ಕಾರ್ಯಸೂಚಿ ಏನಾದರೂ ಹಾಕಿಕೊಂಡಿದ್ದಾರೋ…?
ಈ ಎಲ್ಲ ಪ್ರಶ್ನೆಗಳು, ಅದರ ಸುತ್ತಲಿನ ಚರ್ಚೆಗಳು ಪುತ್ತೂರಲ್ಲಿ ಶುರುವಾಗಿ ತುಂಬಾ ಸಮಯವಾಗಿದೆ. ಸ್ವತಃ ಶಾಸಕ ರೈಗಳ ಎಡಬಿಡಂಗಿ ನಡೆ-ನುಡಿಗಳೇ ಇಂಥದೊಂದು ಅನುಮಾನ-ಆತಂಕದ ಜಿಜ್ಞಾಸೆ ಹುಟ್ಟುಹಾಕಿದೆ!
ಹೇಳಿಕೇಳಿ ಪುತ್ತೂರು ಹಿಂದುತ್ವದ ಪ್ರಯೋಗ ಶಾಲೆ(ದಕ್ಷಿಣ ಕನ್ನಡ)ಯ ಮೂಲ ನೆಲೆ. ಜನಸಂಘದ ಕಾಲದಲ್ಲೇ ಹಿಂದುತ್ವದ ಹಿರೇಮಣಿ ಎನಿಸಿದ್ದ ಉರಿಮಜಲು ರಾಮ್ ಭಟ್ಟ ಇಲ್ಲಿಂದ ಎಮ್ಮೆಲ್ಲೆಯಾಗಿದ್ದರು. ಪಕ್ಕದಲ್ಲೇ ಕರಾವಳಿ ಬಿಜೆಪಿ-ಸಂಘ ಪರಿವಾರದ ರಿಂಗ್ ಮಾಸ್ಟರ್ ಪ್ರಭಾಕರ ಭಟ್ಟರಿರುವ ಕಲ್ಲಡ್ಕವಿದೆ. ಇಲ್ಲೇ ಸಂಘ ಪರಿವಾರದ ಬೈಠಕ್, ಚಿಂತನೆ, ಯೋಚನೆ ಮತ್ತು ಯೋಜನೆಗಳು ರೂಪುಗೊಳ್ಳುವುದುಂಟು.
ದಿವಂಗತ ರಾಮ್ ಭಟ್ಟರು ಮತ್ತ್ಯಾರೂ ಅಲ್ಲ, ಕಲ್ಲಡ್ ಭಟ್ಟರ ಖಾಸಾ ಭಾಮೈದ. 1960-70ರ ದಶಕದಲ್ಲಿ ರಾಮ್ ಭಟ್ ಅವಿಭಜಿತ ದಕ್ಷಿಣ ಕನ್ನಡ ಸಂಘ ಪರಿವಾರದ ಅಗ್ರಣಿಯಾಗಿದ್ದರು. ಆಗ ಪ್ರಭಾಕರ್ ಭಟ್ಟ ಭೂಗತ ಹಿಂದುತ್ವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಕಲ್ಲಡ್ಕರ ಮಡದಿ ಡಾ.ಕಮಲಾ ಭಟ್ಟರೂ ಹಿಂದುತ್ವ ಗಲಾಟೆಯ ಮುಂಚೂಣಿಯಲ್ಲಿ ಇರುತ್ತಿದ್ದರೆಂದು ಹಳೆ ತಲೆಮಾರಿನವರು ಹೇಳುತ್ತಾರೆ. ಹಿಂದೆ ದಲಿತ ಸಮುದಾಯದ ಪ್ರಮುಖ ನಾಯರಾಗಿದ್ದ ಮಂತ್ರಿ ಕೆ.ಎಚ್.ರಂಗನಾಥ್ ಕಲ್ಲಡ್ಕಕ್ಕೆ ಬಂದಾಗ ದೊಣ್ಣೆಯಿಂದ ಹೊಡೆದ ಪ್ರಕರಣದಲ್ಲಿ ಪ್ರಭಾಕರ ಭಟ್ಟರ ಹೆಂಡತಿಯೂ ಇದ್ದರೆಂಬ ಆರೋಪವಿತ್ತು.
ಎಮರ್ಜೆನ್ಸಿ ಸಮಯದಲ್ಲಿ ಇಸ್ಮಾಯಿಲ್ ಎಂಬ ಕಾಂಗ್ರೆಸ್ ಮುಂದಾಳಿನ ಹತ್ಯೆ ಕೇಸಲ್ಲಿ ಪ್ರಭಾಕರ್ ಭಟ್ಟ ಮತ್ತವರ ಸಹೋದರರು ಆರೋಪಿಗಳಾಗಿದ್ದರು. ಆದರೆ ಕೇಸು ಕೋರ್ಟಲ್ಲಿ ಬಿದ್ದುಹೋಯಿತು. ಆರೋಪಿಗಳನ್ನು ಮಂಗಳೂರಿಂದ ಕಲ್ಲಡ್ಕವರೆಗೆ ವಿಜಯೋತ್ಸವದ ಮೆರವಣಿಗೆಯಲ್ಲಿ ಕರೆತರಲಾಗಿತ್ತು. ಸುಮಾರು 2000ದ ದಶಕದವರೆಗೂ ಭಾವ-ನೆಂಟ(ರಾಮ್‌ಭಟ್-ಕಲ್ಲಡ್ಕ್ ಭಟ್) ಅನ್ಯೋನ್ಯವಾಗಿಯೇ ಇದ್ದರು. ಆ ಬಳಿಕದ ಹಿಂಸೋನ್ಮಾದದ ಹಿಂದುತ್ವದ ಅಬ್ಬರದಲ್ಲಿ ರಾಮ್ ಭಟ್ ಕಳೆ ಕಳೆದುಕೊಂಡು ಕಲ್ಲಡ್ಕ ಭಟ್ ಪ್ರವರ್ಧಮಾನಕ್ಕೆ ಬಂದರು. ಭಾವ-ನೆಂಟನ ನಡುವಿನ ಸಂಬಂಧವೂ ಹಳಸಿತು. ಕ್ರಮೇಣ ರಾಮ್ ಭಟ್ಟರನ್ನು ಮೂಲೆ ಗುಂಪು ಮಾಡಲಾಯಿತು. ಭಾವನ ಕಿರಿಕಿರಿ ತಾಳಲಾಗದೆ ಬಿಜೆಪಿಯಿಂದ ಹೊರಬಂದ ರಾಮ್ ಭಟ್ಟ ಸ್ವಾಭಿಮಾನಿ ಸಂಘಟನೆ ಕಟ್ಟಿಕೊಂಡರು. ಮುಸಲ್ಮಾನ್ ಗುಮ್ಮ(ಇಸ್ಲಾಮೋಫೋಬಿಕ್) ತೋರಿಸಿ ಹಿಂದುಗಳನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳುವ ಕಲೆ ಕರಗತವಾಗಿರುವ ಕಲ್ಲಡ್ಕ ಭಟ್ಟರ ಬಿಜೆಪಿ ಪ್ರಬಲವಾಯಿತು; ರಾಮ್ ಭಟ್ಟರ ಸ್ವಾಭಿಮಾನಿ ಸಂಘಟನೆ ನೆಲ ಕಚ್ಚಿತು.
ಇದನ್ನು ಓದಿದ್ದೀರಾ?: ಟ್ರಂಪ್ ಸುಂಕಗಳು, ತೆರಿಗೆ ಕಡಿತಗಳು, ವಾಣಿಜ್ಯ ಯುದ್ಧಗಳು, ಜಾಗತಿಕ ಮಾರುಕಟ್ಟೆಯ ಕಂಪನಗಳು
ಇಂಥ ಹಿನ್ನೆಲೆಯ ಪುತ್ತೂರು ಇವತ್ತಿಗೂ ಹಿಂದುತ್ವದ ಭದ್ರ ಕೋಟೆಯೇ. ಆದರೆ ಕಳೆದ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಈ ಕೇಸರಿ ಕೋಟೆ ಬಿರುಕು ಬಿಟ್ಟಿತ್ತು. ಹಿಂದುತ್ವದ ಕಷ್ಟ-ನಷ್ಟಕ್ಕೆ ಎದೆಗೊಟ್ಟು ಹಗಲು-ರಾತ್ರಿ ಮುನ್ನುಗ್ಗಿ ‘ಧರ್ಮ ರಕ್ಷಣೆ’ಯ ಹೋರಾಟ ಅರ್ಥಾತ್ ಹೊಡೆದಾಟದ ಫೈಟರ್‌ಗಳ ಜತೆ ಕೋರ್ಟು-ಕಚೇರಿ ಓಡಾಡುತ್ತಿದ್ದ ಅರುಣ್ ಭಟ್ಟ ಪುತ್ತಿಲ ಎಂಬ ತರುಣ ಕೇಸರಿ ಟಿಕೆಟ್ ಕ್ಲೇಮ್ ಮಾಡಿದ್ದರು. ಈ ಅರುಣ್ ಭಟ್ಟರ ಕಂಡರೆ ಕಲ್ಲಡ್ಕ ಭಟ್ಟ, ಅಂದು ರಾಜ್ಯ ಬಿಜೆಪಿ ಅಧ್ಯಕ್ಷನಾಗಿದ್ದ ಪುತ್ತೂರು ಮೂಲದ ನಳಿನ್‌ಕುಮಾರ್ ಕಟೀಲ್, ಮಾಜಿ ಸಿಎಂ ಸದಾನಂದ ಗೌಡ ವಗೈರೆ ಹಿಂದುತ್ವವಾದಿ ಅತಿರಥ ಮಹಾರಥರಿಗೆ ಆಗುತ್ತಿರಲಿಲ್ಲ. ಈ ಮೂವರೂ ಪರಸ್ಪರ ವಿರೋಧಿಗಳಾದರೂ ಬೇರೆ-ಬೇರೆ ಕಾರಣಕ್ಕೆ ಇವರಿಗೆ ಅರುಣ್ ಭಟ್ಟ ಶಾಸಕನಾಗುವುದು ಬೇಡವಾಗಿತ್ತು. ಹಿಂದುತ್ವದ ಕಾಲಾಳು ಪಡೆಯ ಶೂದ್ರರ ನಿಕಟ ಒಡನಾಟದ ಅರುಣ್ ಭಟ್ಟ ಎಮ್ಮೆಲ್ಲೆಯಾದರೆ ತಮಗೆ ಒವರ್ ಟೇಕ್ ಮಾಡುತ್ತಾನೆಂಬ ಒಳ ಅಳುಕು ಹಳೆ ತಲೆಯಾಳುಗಳದಾಗಿತ್ತು.
ಬಿಜೆಪಿ ಟಿಕೆಟ್ ಪಡೆದು ಶಾಸಕನಾಗುವ ಆಸೆ ನಳಿನ್ ಕಟೀಲ್‌ಗಿತ್ತು. ಅವರ ‘ಗುರು’ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ದೂ ಅದೇ ಯೋಜನೆಯಾಗಿತ್ತು. ಆದರೆ ಕಲ್ಲಡ್ಕ ಭಟ್ಟ ‘ಉದ್ಧಟ’ ನಳಿನ್‌ಗೆ ಟಿಕೆಟ್ ಕೊಡುವುದಕ್ಕೆ ಒಪ್ಪಲಿಲ್ಲ. ಪುತ್ತೂರು ಬಿಜೆಪಿಯ ಭಿನ್ನಮತದ ಬೆಂಕಿಗೆ ಎಣ್ಣೆ ಎರೆದಂತಾಗುತ್ತದೆಂಬ ಭಯದಿಂದ ಟಿಕೆಟ್ ಕಮಿಟಿ ಸ್ಥಳಿಯ ನಾಯಕರಾದ ಡಿವಿ, ಕಲ್ಲಡ್ಕ ಮತ್ತು ನಳಿನ್‌ಗೆ ಸಹ್ಯವಾದ ‘ರಾಜಿ’ ಅಭ್ಯರ್ಥಿಯಾಗಿ ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡರಿಗೆ ಅಖಾಡಕ್ಕೆ ಇಳಿಸಲಾಯಿತು. ಆಶಾ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಅರೆ ಭಾಷೆಗೌಡ ಸಮುದಾಯದವರೆಂಬ ಕಾರಣಕ್ಕೆ ಟಿಕೆಟ್ ಕೊಡಲಾಗಿತ್ತು. ಆದರೆ ಬಂಡಾಯವೆದ್ದು ಸ್ಫರ್ಧಿಸಿದ್ದ ಹಿಂದುತ್ವದ ಕಾಲಾಳು ಸೈನ್ಯದ ಕಮಾಂಡರ್ ಪುತ್ತಿಲ ಭಟ್ಟರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಘ ಪರಿವಾರದ ಸೋಕಾಲ್ಡ್ ನಾಯಕಾಗ್ರೇಸರನ್ನು ಹೊರತುಪಡಿಸಿ ಉಳಿದ ಇಡೀ ಪರಿವಾರವೇ ಪುತ್ತಿಲ ಭಟ್ಟರ ಬೆನ್ನಿಗೆ ನಿಂತಿತು. ಚುನಾವಣಾ ಮತದಾನ ಹತ್ತಿರತ್ತಿರವಾಗುತ್ತಿದ್ದಂತೆ ಪುತ್ತಿಲ ಭಟ್ಟ ಗೆದ್ದೇಬಿಟ್ಟರು ಎಂಬಂತೆ ಚಿತ್ರಣ ಮೂಡಿತ್ತು. ಆದರೆ ಪುತ್ತಿಲ ಭಟ್ಟ ಗೆಲುವಿನ ಹೊಸಿಲಿಗೆ ಬಂದು ತೀರಾ ಸಣ್ಣ ಮತದಂತರದಿಂದ ಎಡವಿದರು. ಬಿಜೆಪಿಯ ಠೇವಣಿಯೂ ಉಳಿಯಲಿಲ್ಲ.
ಇದನ್ನು ಓದಿದ್ದೀರಾ?: ಕಾಂಗ್ರೆಸ್ ವಿರುದ್ಧ ಯುದ್ಧ ಆರಂಭ, ನನ್ನನ್ನು ಕೆಣಕಬೇಡಿ: ಡಿಕೆಶಿಗೆ ಎಚ್ಚರಿಕೆ ಕೊಟ್ಟ ಹೆಚ್‌ಡಿಕೆ
ಸಂಘ ಪರಿವಾರದ ಒಳಗಿನ ವ್ಯಕ್ತಿ ಪ್ರತಿಷ್ಠೆಯ ಸಂಘರ್ಷದ ಲಾಭವಾಗಿದ್ದು ಕಾಂಗ್ರೆಸ್ ಕ್ಯಾಂಡಿಡೇಟ್ ಅಶೋಕ್‌ಕುಮಾರ್ ರೈಗೆ. ಆಕಸ್ಮಿಕವಾಗಿ ರೈ ಗೆದ್ದುಬಿಟ್ಟಿದ್ದರು. ಖುದ್ದು ಅಶೋಕ್‌ಕುಮಾರ್ ರೈಗಳನ್ನೇ ಬೆಚ್ಚಿಬೀಳಿಸಿದ ಅನಿರೀಕ್ಷಿತ ಕಾಂಗ್ರೆಸ್ ವಿಜಯವಿದಾಗಿತ್ತು! ಸಂಘ ಪರಿವಾರದ ಹಿಂದುತ್ವ ‘ಸಂಸ್ಕಾರ’ದ ಅಶೋಕ್‌ಕುಮಾರ್ ರೈ ಪೂರ್ವಾಶ್ರಮ ಬಿಜೆಪಿ. ಪುತ್ತೂರಿನ ಮಾಜಿ ಶಾಸಕ, ಮಾಜಿ ಕೇಂದ್ರ ಮಂತ್ರಿ, ಮಾಜಿ ಸಿಎಂ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡರ ಅತ್ಯಾಪ್ತ ಶಿಷ್ಯ. ಅಂದು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ನಳಿನ್ ಕಟೀಲ್‌ಗೆ ಮಾತ್ರ ರೈ ಎಂದರೆ ಅಷ್ಟಕ್ಕಷ್ಟೇ ಆಗಿತ್ತು. ಹೀಗಾಗಿ ತನಗೆ ಕೇಸರಿ ಟಿಕೆಟ್ ಸಿಗುವುದಿಲ್ಲ ಎಂಬುದು ರೈಗೆ ಖಚಿತವಾಗಿತ್ತು. ಸಾವಕಾಶವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಖ್ಯ ಕುದುರಿಸಿಕೊಂಡರು. ಈ ರಿಯಲ್ ಎಸ್ಟೇಟ್ ದಂಧೆದಾರ ಚುನಾವಣೆಗೆ ಕೆಲವೇ ತಿಂಗಳಿರುವಾಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದ ಟಿಕೆಟ್ ಭರವಸೆ ಪಡೆದುಕೊಂಡೇ ಕಾಂಗ್ರೆಸ್ ಸೇರಿದ್ದರು. ಇವತ್ತಿಗೂ ರೈ ಕೈ ಟಿಕೆಟ್ ಕೊಂಡುಕೊಂಡ ಶ್ರೀಮಂತ ಎಂಬ ಮಾತೂ ಕರಾವಳಿ ರಾಜಕೀಯ ಪಡಸಾಲೆಯಲ್ಲಿದೆ.

1989ರಲ್ಲಿ ವಿನಯ್‌ಕುಮಾರ್ ಸೊರಕೆ ಕಾಂಗ್ರೆಸ್ ಶಾಸಕರಾಗಿದ್ದೇ ಕೊನೆ. ಆ ನಂತರ ಕಾಂಗ್ರೆಸ್ ಪುತ್ತೂರಲ್ಲಿ ತಲೆಯೆತ್ತಿರಲಿಲ್ಲ. ಸೊರಕೆ ಊರನ್ನೇ ಬಿಟ್ಟು ಉಡುಪಿ, ಕಾಪು ಕಡೆಯಲ್ಲಿ ಸೆಟ್ಲ್ ಆದರು. 2004ರಲ್ಲಿ ಬಿಜೆಪಿಯಿಂದ ಎಮ್ಮೆಲ್ಲೆಯಾಗಿದ್ದ ನಿಷ್ಠೂರಿ ಶಕುಂತಲಾ ಶೆಟ್ಟಿ ಯಾನೆ ಶಕು ಅಕ್ಕ ಕರಾವಳಿ ಆರೆಸೆಸ್ ಸುಪ್ರಿಮೋ ಕಲ್ಲಡ್ಕ ಭಟ್ಟರ ಕೆಂಗಣ್ಣಿಗೆ ತುತ್ತಾಗಿ ಉರಿಮಜಲು ರಾಮ್ ಭಟ್ಟರ ಸ್ವಾಭಿಮಾನಿ ಬಳಗ ಸೇರಿಕೊಂಡಿದ್ದರು. 2008ರಲ್ಲಿ ಈ ಬಂಡುಕೋರಳಿಗೆ ಬಿಜೆಪಿಯನ್ನು ಮಣಿಸಲಾಗಲಿಲ್ಲ. ಆನಂತರ ಮಾಜಿ ಸಂಸದ ಸೊರಕೆ ಶಕು ಅಕ್ಕನನ್ನು ಕಾಂಗ್ರೆಸ್‌ಗೆ ಸೇರಿಸಿದರು. 2013ರ ಚುನಾವಣೆಯಲ್ಲಿ ಶಕು ಅಕ್ಕ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟರು. 2018ರ ಚುನಾವಣೆಲ್ಲಿ ಶಕು ಅಕ್ಕನಿಗೆ ಸಂಘೀ ತಂತ್ರಗಾರರು ಕರಾವಳಿ ಗುಂಟ ಹುಟ್ಟುಹಾಕಿದ್ದ (ಹುಸಿ) ಇಸ್ಲಾಮ್ ಭೂತದ ಭಯದ ಅಲೆ ಎದುರಿಸಿ ಗೆಲ್ಲಲಾಗಲಿಲ್ಲ.
ನ್ಯಾಯಯುತವಾಗಿ 2023ರ ಇಲೆಕ್ಷನ್‌ನಲ್ಲಿ ಶಕು ಅಕ್ಕ ಕೈ ಕ್ಯಾಂಡಿಡೇಟ್ ಆಗಬೇಕಿತ್ತು. ಜನಪರ ಯೋಚನೆಯ ಶಕು ಅಕ್ಕನಷ್ಟು ವರ್ಚಸ್ವೀ ಮುಂದಾಳುಗಳ್ಯಾರೂ ಪುತ್ತೂರು ಕಾಂಗ್ರೆಸ್‌ನಲ್ಲಿ ಇಲ್ಲ. ಆದರೆ ಆಗವರಿಗೆ ಕಾಂಗ್ರೆಸ್‌ನ ಒಳರಾಜಕೀಯದಿಂದ ಸ್ಫರ್ದೆಯ ಅವಕಾಶ ತಪ್ಪಿತು. ಶಕುಂತಲಾ ಶೆಟ್ಟಿ ಗೆದ್ದರೆ ಹಿರಿತನ ಮತ್ತು ಅನುಭವದಿಂದ ಮಂತ್ರಿಯಾಗುವ ಅವಕಾಶವಿತ್ತು. ಹೀಗಾಗಿ ಮಹಿಳಾ ಕೋಟಾದಲ್ಲಿ ಸಚಿವೆಯಾಗುವ ಯೋಗ ತನಗೆ ಬಿಟ್ಟು ಬೇರ್‍ಯಾರಿಗೂ ದಕ್ಕಬಾರದೆಂಬ ಯೋಜನೆ ಹಾಕಿದ್ದ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆಶಿ ಮೂಲಕ ಶಕು ಅಕ್ಕನಿಗೆ ಮುಳುವಾದರೆಂಬ ಮಾತೊಂದು ರಾಜಕೀಯ ವಲಯದಲ್ಲಿದೆ. ಅಂತಿಮವಾಗಿ ಅಶೋಕ್‌ಕುಮಾರ್ ರೈ ಎಂಬ ಬಿಜೆಪಿಯಿಂದ ಆಮದಾಗಿದ್ದ ಆಸಾಮಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತಷ್ಟೇ ಅಲ್ಲ, ಅಚಾನಕ್ ಎಮ್ಮೆಲ್ಲೆಯೂ ಆಗಿಬಿಟ್ಟರು! ಆದರೆ ಗೆದ್ದ ಬಳಿಕ ಅಶೋಕ್‌ಕುಮಾರ್ ರೈ ಸೆಕ್ಯುಲರ್ ಕಾಂಗ್ರೆಸ್‌ನ ಎಮ್ಮೆಲ್ಲೆ ಆಗಲಿಲ್ಲ; ಪಕ್ಕಾ ಕಮ್ಯುನಲ್ ಬಿಜೆಪಿ ಚಹರೆ ಪ್ರದರ್ಶಿಸ ಹತ್ತಿದರು.
ಅಶೋಕ್ ರೈ ಶಾಸಕ ಭಾಗ್ಯ ಕಂಡಿರುವುದೇ ಪುತ್ತೂರು-ಉಪ್ಪಿನಂಗಡಿ ಭಾಗದಲ್ಲಿ ದೊಡ್ಡ ಸಂಖೆಯಲ್ಲಿರುವ ಮುಸಲ್ಮಾನರ ಮತದಿಂದ. ಹಿಂದುತ್ವದ ನಿರಂತರ ದಾಳಿಗಳಿಂದ ಕಂಗಾಲಾಗಿರುವ ಸ್ಥಳಿಯ ಮುಸಲ್ಮಾನರು ಅಪರೂಪಕ್ಕೆ ಆಯ್ಕೆಯಾಗಿರುವ ಕಾಂಗ್ರೆಸ್ ಎಮ್ಮೆಲ್ಲೆಯಿಂದ ಒಂದಿಷ್ಟು ನೆಮ್ಮದಿ ಸಿಗಬಹುದೆಂದು ಭಾವಿಸಿದ್ದರು. ಆಗಿದ್ದು ಮಾತ್ರ ಉಲ್ಟಾ-ಪಲ್ಟಾ! ದಿನಗಳೆದಂತೆ ಶಾಸಕ ಅಶೋಕ್ ರೈ ಹಿಂದುತ್ವದ ಉಗುರುಗಳು ಹೊರಬರಲಾರಂಭಿಸಿದ್ದು ಅಲ್ಪಸಂಖ್ಯಾತರು ಮತ್ತು ಜಾತ್ಯತೀತವಾಗಿ ಚಿಂತಿಸುವವರ ನಿದ್ದೆಗೆಡಿಸಿಬಿಟ್ಟತು. ತಮ್ಮ ಮತ ಬಲದಿಂದ ಶಾಸಕನಾಗಿರುವ ರೈಗೆ ತಮ್ಮ ಬಗ್ಗೆಯೇ ಕಾಳಜಿಯಿಲ್ಲ ಎಂದು ಮುಸಲ್ಮಾನ್ ಲೀಡರ್‌ಗಳು ಅಲವತ್ತುಕೊಳ್ಳತೊಡಗಿದರು. ಈ ಶಾಸಕನಿಂದ ಉಪಕಾರವಾಗುವುದಿರಲಿ, ಉಪದ್ರವ ಆಗದಿದ್ದರೆ ಸಾಕು ಎಂಬಂತಾಯಿತು ಮುಸಲ್ಮಾನರ ಪಾಡು! ರೈಗಳ ಶಾಸಕ ಕಾರ್ಯವೈಖರಿಯಲ್ಲಿ ಕಾಂಗ್ರೆಸ್ ಅಧಿನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗಳು ಪದೇಪದೇ ಸಾರುವ ಧರ್ಮ ನಿರಪೇಕ್ಷೆ, ಸಹಬಾಳ್ವೆಗೆ ತದ್ವಿರುದ್ಧ ನಡಾವಳಿಗಳೇ ಕಾಣಿಸತೊಡಗಿತು. ಶಾಸಕ ರೈ ಮಾತುಗಾರಿಕೆ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಪುತ್ತೂರಲ್ಲಿರುವುದು ಪಕ್ಕಾ ಮತೀಯ ಮನಃಸ್ಥಿತಿಯ ಬಿಜೆಪಿ ಶಾಸಕ ಎಂಬಂತೆ ಭಾಸವಾಗತೊಡಗಿತು.
ಪುತ್ತೂರಲ್ಲಿ ಸಂಘ ಪರಿವಾರದ ಭಜರಂಗ ದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ, ಆರೆಸೆಸ್, ಭಜನಾ ಮಂಡಳಿ, ಮಾತೃ ಮಂಡಳಿ, ಮಹಿಳಾ ಮಂಡಳಿ, ಅರಿಶಿಣ-ಕುಂಕುಮ ತಂಡ, ಬ್ರಹ್ಮ ಕಲಶೋತ್ಸವ ಬಳಗ… ಹೀಗೆ ನಾನಾ ನಮೂನೆಯ ಸಂಘಟನೆಗಳು ಪ್ರಬಲವಾಗಿವೆ. ಈ ಕೇಸರಿ ಪಡೆಗಳಿಗೆ ಬೇಸರ-ಸಿಟ್ಟು ಬರದಂತೆ ಸಂಭಾಳಿಸಿಕೊಂಡು ಹೋಗುವುದೇ ಶಾಸಕತ್ವದ ಪರಮ ಕರ್ತವ್ಯ ಎಂಬಂತೆ ಅಶೋಕ್‌ಕುಮಾರ್ ರೈ ಜಾಗ್ರತೆಯ ಹಜ್ಜೆ ಇಡುತ್ತಿದ್ದಾರೆ. ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರೈಗೆ ಹಣ-ಅಧಿಕಾರ ಎರಡೇ ಮುಖ್ಯ. ಸರ್ವ ಧರ್ಮೀಯರ ನಡುವೆ ಸಾಮರಸ್ಯ ಕುದುರಿಸಿ ಕ್ಷೇತ್ರದ ನೆಮ್ಮದಿಯ ಬದುಕಿಗೆ ಎಚ್ಚರ ವಹಿಸುವುದೇ ಶಾಸಕನ ಸಾಂವಿಧಾನಿಕ ಕರ್ತವ್ಯವೆಂಬ ಕನಿಷ್ಠ ಪ್ರಜ್ಞೆಯೇ ಶಾಸಕನಿಗಿಲ್ಲ. ಉಗ್ರ ಹಿಂದತ್ವ ಪ್ರತಿಪಾದನೆಯ ವಿಶ್ವ ಹಿಂದೂ ಪರಿಷತ್ ಸನ್ಮಾನಕ್ಕೆ ಕರೆದರೂ ರೈ ಓಡೋಡಿ ಹೋಗಿ ನಡುಬಗ್ಗಿಸಿ ಹಾರ-ಶಾಲು ಹಾಕಿಸಿಕೊಂಡು ಬರುತ್ತಾರೆ ಎಂದು ಪುತ್ತೂರಿನ ಪ್ರಜ್ಞಾವಂತರು ಬೇಸರಿಸುತ್ತಾರೆ.
ಬಿಜೆಪಿ ಶಾಸಕರಿಗಿಂತಲೂ ವ್ಯವಸ್ಥಿತವಾಗಿ ಹಿಂದುತ್ವದ ಹಿಡನ್ ಅಜೆಂಡಾಗಳನ್ನು ಕಾಂಗ್ರೆಸ್ ಶಾಸಕ ಅಶೋಕ್‌ಕುಮಾರ್ ರೈಯೇ ಕಾಂಗ್ರೆಸ್ ವೇದಿಕೆ ಮೂಲಕವೇ ಅನುಷ್ಠಾನಗೊಳಿಸುತ್ತಿದ್ದಾರೆಂಬ ಅನಿಸಿಕೆ ಪುತ್ತೂರು ಮತ್ತು ಕರಾವಳಿಯಲ್ಲಿ ಸಾಮಾನ್ಯವಾಗಿದೆ. ಈ ಆರೋಪ ನಿಸ್ಸಂದಿಗ್ಧವಾಗಿ ಸಾಬೀತು ಪಡಿಸುವಂತಿದೆ ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆ ಪೇಟೆ ವ್ಯವಹಾರಕ್ಕೆ ಬರದಂತೆ ಮುಸಲ್ಮಾನರನ್ನು ನಿರ್ಭಂಧಿಸುವ ಅಶೋಕ್‌ಕುಮಾರ್ ರೈಗಳ ಮತಾಂಧ ಹೇಳಿಕೆ! ಇತ್ತೀಚಿನ ಕೆಲವು ವರ್ಷಗಳಿಂದ ಸಂಘ ಪರಿವಾರದ ಪುಂಡರು ಅವಿಭಜಿತ ದಕ್ಷಿಣ ಕನ್ನಡದ ಜಾತ್ರೋತ್ಸವಗಳಲ್ಲಿ ಮುಸಲ್ಮಾನರು ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ-ವಹಿವಾಟು ಮಾಡಕೂಡದು. ಜಾತ್ರೆ ಪೇಟೆಗಳೇನಿದ್ದರೂ ಹಿಂದು ವ್ಯಾಪಾರಸ್ಥರಿಗಷ್ಟೇ ಮೀಸಲು ಎಂಬ ‘ತಾಲಿಬಾನಿ’ ಫರ್ಮಾನು ಹೊರಡಿಸುತ್ತಿದ್ದಾರೆ.
ಈ ಕುಚೋದ್ಯದ ಹಿಂದೆ ಸಂಘೀ ಸರದಾರರ ಹೊಟ್ಟೆಕಿಚ್ಚು ಅಡಗಿದೆ. ಜಾತ್ರೆ ಪೇಟೆಗಳಲ್ಲಿ ಬ್ಯಾರಿ ಮುಸ್ಲಿಮ್ ವ್ಯಾಪಾರಸ್ಥರು ಹೆಚ್ಚಿರುತ್ತಾರೆ. ಸಾಮಾನ್ಯವಾಗಿ ಈ ಬ್ಯಾರಿಗಳು ಕೊಂಕಣಿ(ಗೌಡ ಸಾರಸ್ವತ ಬ್ರಾಹ್ಮಣ)ಗಳಂತೆ ವ್ಯಾಪಾರಿ ಜಾಯಮಾನದವರು. ಬೆವರು ಸುರಿಸಿ ವ್ಯಾಪಾರ-ವಹಿವಾಟು ನಡೆಸಿ ಬ್ಯಾರಿಗಳು ಹಣ ಗಳಿಸುವುದು ಹಿಂದುತ್ವವಾದಿಗಳಿಗೆ ಸಹಿಸಲಾಗುತ್ತಿಲ್ಲ. ಹಾಗಂತ ಈ ಮತೋತ್ಮತ್ತ ‘ಕಟ್ಟಳೆ’ಯನ್ನು ಕರಾವಳಿಯ ಬಹುತೇಕ ದೇವಸ್ಥಾನಗಳ ಆಡಳಿತ ಮಂಡಳಿಗಳೇನೂ ಒಪ್ಪಲಿಲ್ಲ. ಸರಕಾರಿ ಸ್ವಾಮಿತ್ವದ ಮುಜರಾಯಿ ಇಲಾಖೆಯ ದೇವಸ್ಥಾನ ಆಡಳಿತಗಾರರು ಮಾತ್ರವಲ್ಲ ಖಾಸಗಿ ದೇವಸ್ಥಾನ ವ್ಯಸ್ಥಾನ ಕಮಿಟಿಯವರೂ ಹಿಂದುತ್ವದ ಅತಿರೇಕಕ್ಕೆ ಸೊಪ್ಪುಹಾಕಲಿಲ್ಲ!
ಆದರೆ ಕಳೆದ ಕೆಲವು ವರ್ಷಗಳಿಂದ ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆ ಪೇಟೆ ವ್ಯಾಪಾರಕ್ಕೆ ಬರದಂತೆ ಮುಸಲ್ಮಾನರನ್ನು ತಡೆಯಲಾಗುತ್ತಿದೆ. ಲಕ್ಷಾಂತರ ಜನರು ಜಮೆಯಾಗುವ-ಕೋಟ್ಯಂತರ ರೂಪಾಯಿ ವಹಿವಾಟಾಗುವ ದೊಡ್ಡ ಜಾತ್ರೋತ್ಸವಗಳಲ್ಲಿ ಒಂದಾಗಿರುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಈ ವರ್ಷದ ಜಾತ್ರೆ ಇದೇ ಎಪ್ರಿಲ್ 10ರಿಂದ 20ರವರೆಗೆ ನಡೆಯಲಿದೆ. ಈ ಬಾರಿಯೂ ಜಾತ್ರೆಯಲ್ಲಿ ಮುಸಲ್ಮಾನರು ಅಂಗಡಿ ಹಾಕದಂತೆ ನೋಡಿಕೊಳ್ಳಬೇಕೆಂದು ಹಿಂದುತ್ವವಾದಿ ಸಂಘಟನೆಗಳು ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಮಂಡಳಿ ಮೇಲೆ ಒತ್ತಡ ಹಾಕಿದ್ದವು. ಮತ್ತೊಂದೆಡೆ ಹಿಂದುತ್ವ ಸಂಘಟನೆಗಳ ಮಾತು ಕೇಳದೆ ಈ ವರ್ಷದಿಂದಾದರೂ ಮತ್ತೆ ಮೊದಲಿನಂತೆ ಮುಸಲ್ಮಾನರಿಗೆ ಜಾತ್ರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹಗಳೂ ಕೇಳಿಬಂದಿತ್ತು.
ಈ ವಾದ-ವಿವಾದದ ನಡುವೆಯೇ ಶಾಸಕ ಅಶೋಕ್ ರೈ ಸಮ್ಮುಖದಲ್ಲಿ ಸಭೆ ನಡೆಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಳೆದ ವರ್ಷದಂತೆ ಈ ಬಾರಿಯೂ ಮುಸಲ್ಮಾನ್ ವ್ಯಾಪಾರಿಗಳು ಜಾತ್ರೆ ಪೇಟೆ ಪ್ರವೇಶಿಸದಂತೆ ಬಹಿಷ್ಕಾರ ಹಾಕುವ ನಿರ್ಣಯ ತೆಗೆದುಕೊಂಡಿದೆ. ಹಿಂದುತ್ವವಾದಿ ಹಾಗೂ ಬಿಜೆಪಿ ತೀವ್ರಗಾಮಿ ಪರಿವಾರಕ್ಕೆ ಸಂತೋಷವಾಗುವ ಈ ಕಾನೂನು ವಿರೋಧಿ, ಸಹಬಾಳ್ವೆ ವಿರೋಧಿ ತೀರ್ಮಾನವನ್ನು ಖುದ್ದು ಕಾಂಗ್ರೆಸ್ ಶಾಸಕ ಅಶೋಕ್ ರೈಗಳೇ ಸಾರ್ವಜನಿಕವಾಗಿ ಘೋಷಿಸಿ ತನ್ನ ‘ಬಣ್ಣ’ ತೋರಿಸಿಕೊಂಡಿದ್ದಾರೆ. ಶಾಸಕ ಅಶೋಕ್ ರೈ ವರ್ತನೆಯಿಂದ ಉದ್ಭವಿಸಿರುವ ‘ಸಾಂವಿಧಾನಿಕ ಬಿಕ್ಕಟ್ಟಿನ’ ಬಗ್ಗೆ ಈಗ ನಾನಾ ನಮೂನೆಯ ವ್ಯಾಖ್ಯಾನಗಳು ಶುರುವಾಗಿದೆ. ಸರ್ವ ಧರ್ಮೀಯರನ್ನು ಸಮಾನವಾಗಿ ಕಾಣುವ ಸಂವಿಧಾನ ತತ್ವಕ್ಕೆ ಬದ್ಧನಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕನೊಬ್ಬ ಹೀಗೆ ಧರ್ಮಾಧಾರಿತ ಭೇದ-ತಾರತಮ್ಯ-ಅನ್ಯಾಯ ಮಾಡಬಹುದೆ? ಈ ‘ಅಧಿಕ ಪ್ರಸಂಗಿ’ ಶಾಸಕನಿಗೆ ಮೂಗುದಾರರ ಹಾಕುವವರು ಯಾರೂ ಇಲ್ಲವೇ? ಎಂಬ ಮಾತುಗಳು ಕೇಳಿಬರುತ್ತಿದೆ.
ಇದನ್ನು ಓದಿದ್ದೀರಾ?: ವಿಧಾನ ಪರಿಷತ್ ನಾಮನಿರ್ದೇಶನ: ನಾಲ್ಕು ಸ್ಥಾನಗಳಿಗೆ ಇವರೇ ಬಹುತೇಕ ಖಚಿತ!
ಕೆಲವು ದೇವಸ್ಥಾನಗಳಿಗೆ ಅದರದೆ ಕಟ್ಟು-ಪಾಡುಗಳಿವೆ. ಅದರಂತೆ ಮುಸಲ್ಮಾನ ವ್ಯಾಪಾರಿಗಳಿಗೆ ಮಹಾಲಿಂಗೇಶ್ವರ ಜಾತ್ರೆ ಪೇಟೆ ವ್ಯಾಪಾರ ವಿಷೇಧಿಸಲಾಗಿದೆ ಎಂದು ಶಾಸಕ ಅಶೋಕ್ ರೈ ನೆಲದ ಕಾನೂನು, ನಾಗರಿಕ ಶಿಷ್ಟಾಚಾರಗಳನ್ನೇ ಧಿಕ್ಕರಿಸಿದ್ದಾರೆ. ವಾಸ್ತವವಾಗಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಸರಕಾರದ ಅಧೀನದ ಮುಜರಾಯಿ ಇಲಾಖೆಯದು. ಈ ದೇಗುಲದ ಆಡಳಿತದಲ್ಲಿ ಧರ್ಮಾಧಾರಿತ ಪ್ರತ್ಯೇಕತೆ, ನಿಷೇಧ, ನಿರ್ಬಂಧಕ್ಕೆ ಆಸ್ಪದವೇ ಇಲ್ಲ. ಧರ್ಮದ ನೆಪದಲ್ಲಿ ಬಹಿಷ್ಕಾರ, ದುಡಿದು ಜೀವಿಸುವ ಹಕ್ಕಿನ ನಿರಾಕರಣೆ ಅಕ್ಷಮ್ಯ ಅಪರಾಧ! ಇದೆಲ್ಲ ಶಾಸಕ ರೈಗೆ ಗೊತ್ತಿಲ್ಲದ್ದೇನಲ್ಲ. ಪ್ರಜ್ಞಾಪೂರ್ವಕವಾಗೇ ಹಿಂದುತ್ವದ ಜಬರ್ದಸ್ತ್ ಆಡಳಿತ ರೈ ನಡೆಸಿರುವುದರ ಹಿಂದೆ ಮತ್ತೆ ಶಾಸಕನಾಗುವ ದೂ(ದು)ರಾಲೋಚನೆಯಿದೆ ಎಂದು ರಾಜಕೀಯ ಕಟ್ಟೆಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
ಅಶೋಕ್ ರೈಗೆ ತನ್ನ ಗೆಲುವಿನ ಗುಟ್ಟು ಗೊತ್ತಿದೆ. ಇದು ಅರ್ಹ ಗೆಲುವಲ್ಲ. ಆಕಸ್ಮಿಕ ಲಾಟರಿ ಎಂಬ ಅರಿವಿದೆ. ಇಸ್ಲಾಮೋಫೋಬಿಯಾದ ಹಿಂದುತ್ವ ಪರಾಕಾಷ್ಠೆಯಲ್ಲಿರುವ ಪುತ್ತೂರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿದರೆ ದಡ ಸೇರುವುದು ಸಾಧ್ಯವಿಲ್ಲ. ತನ್ನ ಹಿಂದುತ್ವದ ಹರಾಕಿರಿಯಿಂದ ಘಾಸಿಗೊಂಡಿರುವ ಮುಸಲ್ಮಾನರೂ ಕೈಕೊಡುತ್ತಾರೆ ಎಂಬುದು ಖಾತ್ರಿಯೂ ಆಗಿದೆ. ಹೀಗಾಗಿ ಹಿಂದುತ್ವದ ಆಧಾರದಲ್ಲೇ ಈಗವರು ಮುಂದಿನ ಚುನಾವಣೆಗೆ ಅಖಾಡ ಹದಗೊಳಿಸಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಶಾಸಕನೆಂಬ ನೆಲೆಯಲ್ಲಿ ಸಾಕಷ್ಟು ಕಾಮಗಾರಿ, ಯೋಜನೆ ತಂದುಕೊಂಡು ಇಮೇಜ್ ವೃದ್ಧಿಸಿಕೊಳ್ಳುತ್ತ ಮತ್ತೊಂದೆಡೆ ಹಿಂದುತ್ವಕ್ಕೆ ಒಗ್ಗಿಕೊಂಡಿರವ ಬಹುಸಖ್ಯಾತ ಸಮುದಾಯವನ್ನು ಓಲೈಸುವ ತಂತ್ರಗಾರಿಕೆ ಅಶೋಕ್ ರೈ ನಾಜೂಕಾಗಿ ಹೆಣೆಯುತ್ತಿದ್ದಾರೆಂಬುದು ಎಂಥವರಿಗೂ ಅಂದಾಜಾಗುತ್ತದೆ.

2028ರ ಅಸೆಂಬ್ಲಿ ಚುನಾವಣೆ ಹತ್ತಿರತ್ತಿರವಾದಂತೆ ಬಿಜೆಪಿಗೆ ಚಿಮ್ಮಲು ಅಶೋಕ್ ರೈ ಹಲಗೆ ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಬಣ ಬಡಿದಾಟದಿಂದ ತತ್ತರಿಸಿರುವ ಪುತ್ತೂರು ಬಿಜೆಪಿಗೆ ಸಮರ್ಥ ಹುರಿಯಾಳು ಸಿಗದಾಗಿದೆ. ಬಿಜೆಪಿಯಲ್ಲಿ ಮುಂದಿನ ಚುನಾವಣೆಯಲ್ಲಿ ಕೇಸರಿ ಟಿಕೆಟ್ ಸಿಗಬಹುದೆಂಬ ಆಸೆಯಿಂದ ಬಿಜೆಪಿಗೆ ವಾಪಸಾಗಿರುವ ಅರುಣ್ ಭಟ್ಟ ಪುತ್ತಿಲರ ಮೊದಲಿನ ವರ್ಚಸ್ಸು ಉಳಿದಿಲ್ಲ. ಕಳೆದ ಚುನಾವಣೆಯಲ್ಲಿ ಕಲ್ಲಡ್ಕ ಭಟ್ಟರಂಥ ಕಲ್ಲಡ್ಕ ಭಟ್ಟರಿಗೇ ಸೆಡ್ಡು ಹೊಡೆದು ಬಂಡುಕೋರನಾಗಿ ಚುನಾವಣೆಗೆ ನಿಂತು 63,458ರಷ್ಟು ದೊಡ್ಡ ಮೊತ್ತದ ಮತ ಪಡೆದಿದ್ದರು. ಸೋತರೂ ಹೀರೋ ಎನಿಸಿದ್ದರು.
ಆದರೆ ಪುತ್ತಿಲ ಭಟ್ಟ ಎಮ್ಮೆಲ್ಲೆ ಲಾಲಸೆಯಿಂದ ರಾತ್ರೋರಾತ್ರಿ ‘ಪುತ್ತಿಲ ಪರಿವಾರ’ ವಿಸರ್ಜಿಸಿ ಬಿಜೆಪಿಗೆ ಮರಳಿದ್ದು ಹಿಂದೆ ಅವರ ಬೆನ್ನಿದ್ದವರನ್ನೆಲ್ಲ ಕೆರಳಿಸಿದೆ. ಇತ್ತ ಬಿಜೆಪಿಗರೂ ಇಲ್ಲ; ಅತ್ತ ಪುತ್ತಿಲ ಪರವಾರಿಗರೂ ಇಲ್ಲದೆ ಪುತ್ತಿಲ ಭಟ್ಟರು ಏಕಾಂಗಿಯಾಗಿದ್ದಾರೆ. ಈ ನಡುವೆ ಸಂಘೀ ‘ಚಾಣಾಕ್ಯ’ರು ಅರುಣ್ ಭಟ್ಟರನ್ನು ಲೈಂಗಿಕ ಹಗರಣವೇ ಮುಂತಾದ ಅಪವಾದದಲ್ಲಿ ಸಿಲುಕಿಸಿ ಡಿಮಾರಲೈಸ್ ಮಾಡಿದ್ದಾರೆ. ಇದೆಲ್ಲದರಿಂದ ಮಂಕಾಗಿರುವ ಪುತ್ತಿಲ ಭಟ್ಟರಿಗೆ ಬಿಜೆಪಿ ಅಭ್ಯರ್ಥಿತನ ಸಿಗೋದು ಅಷ್ಟು ಸುಲಭವಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಿರುವ ಶಾಸಕ ಅಶೊಕ್ ರೈ ಬಿಜೆಪಿ ಟಿಕೆಟ್ ತನಗೆ ಸುಲಭವಾಗಿ ಸಿಗುತ್ತದೆಂದು ಭಾವಿಸಿದ್ದಾರೆ ಎನ್ನುವ ಚರ್ಚೆಗಳು ಪುತ್ತೂರು ರಾಜಕೀಯ ವಲಯದಲ್ಲಿದೆ. ಭೂ ದಂಧೆಯ ಹಣವಂತ ಅಶೊಕ್ ರೈಗೆ ಬಿಜೆಪಿ ಟಿಕೆಟ್ ಖರೀದಿಯೂ ಕಷ್ಟವೇನಲ್ಲ ಎನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಪುತ್ತೂರಲ್ಲಿ ಕಾಂಗ್ರೆಸ್ ಸಾಯುತ್ತಿದೆ. ಬಿಜೆಪಿ ಸೊರಗುತ್ತಿದೆ. ಇದರ ನಿವ್ವಳ ಫಾಯ್ದೆಯ ನಿರೀಕ್ಷೆಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಇದ್ದಾರೆ.
-ನಹುಷ