- ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಸಂಪೂರ್ಣ ಮುಚ್ಚಲಿದೆ ಎಂದ ವೀರಪ್ಪ ಮೊಯ್ಲಿ
- ಜೆಡಿಎಸ್ನ ʼಅವಕಾಶವಾದದ ರಾಜಕೀಯʼವನ್ನು ಜನ ತಿರಸ್ಕರಿಸುತ್ತಾರೆ ಎನ್ನುವ ಭರವಸೆ
ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ, “ಈ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
“224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 130ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಬಿಜೆಪಿ 60 ಸ್ಥಾನಗಳನ್ನು ದಾಟುವುದಿಲ್ಲ” ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
“ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿಯಲ್ಲಿ ಯಾವುದೇ ಒಗ್ಗಟ್ಟು ಇಲ್ಲ ಮತ್ತು ಅವರಲ್ಲಿ ಹಲವರು ಟಿಕೆಟ್ ನಿರಾಕರಿಸಿದ ನಂತರ ಪಕ್ಷ ತೊರೆದು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿಯವರೇ, ನಿಮ್ಮ ಯಾವುದೇ ಕುತಂತ್ರಕ್ಕೂ ನಾನು ಅಂಜಲಾರೆ: ರಾಹುಲ್ ಗಾಂಧಿ
“ಕೇಂದ್ರದಲ್ಲಿ ಸರಕಾರ ರಚನೆಯಲ್ಲಿ ಕರ್ನಾಟಕ ಯಾವಾಗಲೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯ ಗೆಲುವು 2024ರ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೆ ದಾರಿ ಮಾಡಿಕೊಡಲಿದೆ” ಎಂದು ತಿಳಿಸಿದ್ದಾರೆ.
ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ ಎಂದು ಪ್ರಶ್ನಿಸಿದಾಗ, “ದೇವೇಗೌಡರ ನೇತೃತ್ವದ ಸಂಘಟನೆಯ ‘ಅವಕಾಶವಾದದ ರಾಜಕೀಯ’ವನ್ನು ಜನರು ತಿರಸ್ಕರಿಸುತ್ತಾರೆ” ಎಂದರು.