ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಪದಾಧಿಕಾರಿಗಳು ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಮನರೇಗಾ ಯೋಜನೆಯ ಅಕ್ರಮಗಳ ತನಿಖೆ ಮಾಡುವಂತೆ ಒತ್ತಾಯಿಸಿ ಸೋಮವಾರ (ಜ.22) ವಿಜಯಪುರ ಜಿಲ್ಲಾಧಿಕಾರಿ ಮಹದೇವ್ ಮುರುಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಬೆಂಗಳೂರಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಮಾಜಿಕ ಪರಿಶೋಧನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಹಳ್ಳ ಹಿಡಿದಿದೆ. ನೂರಕ್ಕೆ ಪ್ರತಿಶತ 99 ಯಂತ್ರಗಳನ್ನ ಬಳಸಿ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿ ಇಒ, ಸಿಇಒ ಸೇರಿದಂತೆ ಹಲವು ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ಜೇಬು ತುಂಬಿಕೊಳ್ಳುವ ವಂಶಪಾರಂಪರಿಕ ಪ್ರಕ್ರಿಯೆ ಮುಂದುವರೆದಿದೆ ಎಂದು ಆರೋಪಿಸಿದರು.
ಇತ್ತ ಜಿಲ್ಲೆಯ ಬಡ ಕಾರ್ಮಿಕರು ಕೆಲಸಕ್ಕಾಗಿ ಹೊರರಾಜ್ಯಕ್ಕೆ ಗುಳೆ ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಇತ್ತೀಚಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಭ್ರಷ್ಟ 31 ಪಿಡಿಒಗಳನ್ನು ಮತ್ತು ಒಬ್ಬ ಸಹಾಯಕ ನಿರ್ದೇಶಕನನ್ನ ಸೇವೆಯಿಂದ ಅಮಾನತು ಮಾಡಿದ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ಸರ್ಕಾರದ ಮೇಲೆ ಒಂದು ರೀತಿಯ ಧನಾತ್ಮಕ ವಿಚಾರಗಳು ಹೊರಹೊಮ್ಮಿವೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಚುನಾಯಿತ ಸದಸ್ಯರು ಸೇರಿದಂತೆ ಅಧಿಕಾರಿ ವರ್ಗದಲ್ಲಿ ನಡುಕ ಹುಟ್ಟಿಸುವಂತಹ ಕಾರ್ಯವಾಗಿದೆ.
ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರಲ್ಲಿ ಈ ಮೂಲಕ ವಿನಂತಿ ಮಾಡಿಕೊಳ್ಳುವುದೇನೆಂದರೆ, ವಿಜಯಪುರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆದಂತ ಎಲ್ಲಾ ಕಾಮಗಾರಿಗಳ ತನಿಖೆಗಾಗಿ ಪ್ರತ್ಯೇಕವಾದ ಒಂದು ಸಮಿತಿಯನ್ನ ರಚನೆ ಮಾಡಬೇಕು ಎಂದು ಕೋರಿಕೊಳ್ಳುತ್ತೇವೆ ಎಂದರು.
ಕಡಿಮೆ ಎಂದರು 2,000 ಕೋಟಿಗೂ ಹೆಚ್ಚು ಭ್ರಷ್ಟಾಚಾರವು ಮನರೇಗಾ ಯೋಜನೆಯಡಿ ನಡೆದಿದೆ. ಈ ಭ್ರಷ್ಟಾಚಾರವನ್ನು ಹೊರಗೆ ತರುವುದರ ಮೂಲಕ ವಿಜಯಪುರ ಜಿಲ್ಲೆಯ ಬಡವರ ಮತ್ತು ಕಾರ್ಮಿಕ ವರ್ಗದ ಬದುಕಿಗೆ ಜೀವ ಜಲವಾಗುತ್ತೀರಿ ಎಂದು ಸಾರ್ವಜನಿಕರ ಪರವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿನಂತಿಸಿಕೊಳ್ಳುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಕೇಶ್ ಇಂಗಳಗಿ, ವಿಕ್ರಮ್ ವಾಗಮೋರೆ ಹಮೀದ್ ಇನಾಮದಾರ್, ಪ್ರವೀಣ್ ಕನಸೆ, ಸುರೇಂದ್ರ ಕುನಸಲೇ, ಗಣಪತಿ ರಾಥೋಡ್, ರಾಘವೇಂದ್ರ ಛಲವಾದಿ, ಮೈಬೂಬ್ ತಾಂಬೋಳಿ, ನಬಿರಸುಲ್ ಹುಣಶ್ಯಾಳ, ಭೀಮಾಶಂಕರ್ ಕಾಂಬಳೆ, ಪುಂಡಲಿಕ ಬಿರಾದಾರ್ ಮತ್ತಿತರರಿದ್ದರು.