ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ಅಖಿಲ ಭಾರತ ಮಟ್ಟದ ಟೇಬಲ್ ಟೆನಿಸ್ ಕ್ರೀಡಾಂಗಣ ಸಜ್ಜಾಗಿದೆ. ಈ ಕ್ರೀಡಾಂಗಣದಲ್ಲಿ ಅಖಿಲ ಭಾರತ ಮಟ್ಟದ ಐಪಿಎಸ್‌ಸಿ ಒಕ್ಕೂಟದ ಶಾಲೆಗಳ ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ.
ಕರ್ನಾಟಕದ ನಾನಾ ಜಿಲ್ಲೆ, ಮಧ್ಯಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಪ್ರದೇಶದ ಇಂದೋರ್‌ನ ಎಂಬ್ರಾಲ್ಡ್ ಹೈಟ್ ಇಂಟರ್ನ್ಯಾಷನಲ್ ಸ್ಕೂಲ್, ಗ್ವಾಲಿಯರ್‌ನ ಸಿಂಧ್ಯಾ ಕನ್ಯಾ ವಿದ್ಯಾಲಯ ಸೇರಿದಂತೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಶಾಲೆಯ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.
ಹಲವಾರು ವಿಭಾಗಗಳಲ್ಲಿ ಅಗ್ರಗಣ್ಯ ಸಾಧನೆ ಮಾಡಿ ಮಧ್ಯಪ್ರದೇಶ ತಂಡವು ಬಂಗಾರದ ಪದಕ ತನ್ನದಾಗಿಸಿಕೊಂಡಿತು. ಸೈನಿಕ ಶಾಲೆಗೆ ಬೆಳ್ಳಿ ಪದಕ ಲಭಿಸಿತು.
12ವರ್ಷ, 14ವರ್ಷ, 17ವರ್ಷ ಹಾಗೂ 19ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಥಮ ಸ್ಥಾನವನ್ನು ಇಂದೋರ್‌ನ ಎಂಬ್ರಾಲ್ಡ್ ಹೈಟ್ ಇಂಟರ್ನ್ಯಾಷನಲ್ ಶಾಲೆ ಪಡೆದುಕೊಳ್ಳುವ ಮೂಲಕ ಬಂಗಾರದ ಪದಕ ಗೆದ್ದುಕೊಂಡಿತು. 12ವರ್ಷ ಮತ್ತು 14ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ಲ್ಲಿ ಅತಿಥೇಯ ವಿಜಯಪುರದ ಸೈನಿಕ ಶಾಲೆ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.
17ವರ್ಷ ಹಾಗೂ 19ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನ ಸಿಂಧ್ಯಾ ಕನ್ಯಾ ವಿದ್ಯಾಲಯ ತಂಡ ಬೆಳ್ಳಿ ಪದಕ ಪಡೆದರೆ, 12ವರ್ಷ, 14ವರ್ಷ ಹಾಗೂ 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಸ್ಕೂಲ್ ತಂಡ ಕಂಚಿನ ಪದಕ ಪಡೆದುಕೊಂಡಿತು.
ಸೈನಿಕ ಶಾಲೆ ವಿಜಯಪುರದ ಕ್ರೀಡಾಪಟುಗಳಾದ 12 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಲಾವಣ್ಯ, ಪ್ರಿಯಾಂಕ, ಸಾನ್ವಿ ಹೂಗಾರ್ ಮತ್ತು ಗಾಯತ್ರಿ, 14 ರ‍್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಸುಪ್ರಿಯಾ ಹಾಗೂ ಅಭಿಜ್ಞಾ, 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ರೀಡಾಪಟು ಪ್ರಿಯದರ್ಶಿನಿ ಸ್ಥಾನ ಗಿಟ್ಟಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಸೈನಿಕ ಶಾಲೆಯ ಪ್ರಾಚಾರ್ಯರಾದ ಪ್ರತಿಭಾ ಬಿಸ್ಟ್ ಅವರು ವಿಜೇತ ತಂಡಗಳಿಗೆ ಪಾರಿತೋಷಕ ವಿತರಿಸಿ ಹಾಗೂ ಶುಭಕೋರಿದರು.