ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಹಾಗೂ ಇಂಡಿ ಪ್ರತ್ಯೇಕ ಜಿಲ್ಲೆ ಕೂಗು ಕೇಳಿಬರುತ್ತಿದೆ. ಈ ಬೇಡಿಕೆ ಜನಸಾಮಾನ್ಯರಿಂದ ಬರುತ್ತಿರುವುದಲ್ಲ, ಬದಲಾಗಿ ಆಡಳಿತಾರೂಢ ಕಾಂಗ್ರೆಸ್ ಶಾಸಕರು, ಸಚಿವರಿಂದ.
ವಿಜಯಪುರ ʼಬಿಜಾಪುರʼ ವಿಜಯಪುರವಾಗಿ ಬದಲಾಗಿ ಕೇವಲ ಹತ್ತು ವರ್ಷಗಳಾಗಿವೆ. ಅದಾಗಲೇ ಮತ್ತೆ ಜಿಲ್ಲೆಯ ಹೆಸರು ಬದಲಾವಣೆ ಚರ್ಚೆ ಆರಂಭವಾಗಿದೆ. ವಿಶ್ವಗುರು ಬಸವಣ್ಣನವರ ಹೆಸರನ್ನು ಜಿಲ್ಲೆಗೆ ನಾಮಕರಣ ಮಾಡಬೇಕುಂಬ ಬೇಡಿಕೆ ದಿಢೀರನೆ ವ್ಯಕ್ತವಾಗಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ವಿಶೇಷ ಆಸಕ್ತಿ ಇದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ವಿಜಯಪುರ ಹೆಸರು ಬದಲಾವಣೆಯ ವಿಷಯವಾಗಿ 15ದಿನಗಳ ಒಳಗಾಗಿ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವಕಾಶ ಕಲ್ಪಿಸಿದ್ದರು. ಜಿಲ್ಲೆಯ ಹಿರಿಯ ವಿದ್ವಾಂಸರು, ಸಾಹಿತಿಗಳು, ಜನಪ್ರತಿನಿಧಿಗಳು, ಇತಿಹಾಸ ತಜ್ಞರು, ಸಂಘ, ಸಂಸ್ಥೆಗಳ ಮುಖಂಡರು ಹೆಸರು ಬದಲಾವಣೆ ಪರ, ವಿರುದ್ಧ ಹೇಳಿಕೆಗಳ ಮನವಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಬೇಡ ಎಂಬ ಅಭಿಪ್ರಾಯ ಹೆಚ್ಚು ವ್ಯಕ್ತವಾಗಿದೆ. ಒಂದಷ್ಟು ಸಂಘಟನೆಗಳ ಮುಖಂಡರು ಮಾತ್ರ ಬಸವಣ್ಣನ ಹೆಸರನ್ನು ನಾಮಕರಣ ಮಾಡುವ ಮೂಲಕ ಬಸವಣ್ಣನಿಗೆ ಗೌರವ ಸಲ್ಲಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆಡಳಿತಾತ್ಮಕ ಉದ್ದೇಶದಿಂದ ಪದೇ ಪದೇ ಹೆಸರು ಬದಲಾವಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯ ಹೆಸರು ಬದಲಾವಣೆಗಿಂತ ಬಸವಣ್ಣನವರ ಹೆಸರು ಮುನ್ನೆಲೆಗೆ ಬಂದಿರುವುದರಿಂದ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿಣಮಿಸಿದೆ.
ಅದೇ ರೀತಿ ಇಂಡಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆಯು ಕೇಳಿಬಂದಿದೆ. ಇಂಡಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಜನತೆ ಕೇಳದೆ ಇದ್ದರೂ, ಪ್ರತ್ಯೇಕ ಜಿಲ್ಲೆ ಇಲ್ಲವೇ 2028ರ ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಕ್ಷೇತ್ರದ ಮತದಾರರಿಗೆ ವಾಗ್ದಾನ ಮಾಡಿದ್ದಾರೆ.
ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆಂದು ಶಾಸಕ ಯಶವಂತರಾಯ ಗೌಡ ಪಾಟೀಲ್ ಈಗಾಗಲೇ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.