ನಮ್ಮ ಅಣ್ಣ ಡಿ ಕೆ ಶಿವಕುಮಾರ್ ಅವರು ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ಬಲ ತಂದಿದ್ದಾರೆ. ಸತತ ಮೂರು ವರ್ಷಗಳ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಡಿಕೆಶಿ ಅವರ ಅಧ್ಯಕ್ಷತೆಯಲ್ಲಿ 135 ಸ್ಥಾನ ಪಡೆದಿದೆ. ಇದನ್ನೆಲ್ಲ ಹೈಕಮಾಂಡ್ ಗಮನಿಸಿ ಒಳ್ಳೆಯ ಫಲವನ್ನೇ ನೀಡಲಿದೆ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್ ಅಂಗಳದಲ್ಲಿದ್ದು, ದೆಹಲಿಗೆ ತೆರಳಿರುವ ಡಿ ಕೆ ಸುರೇಶ್ ಅವರು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
“ಡಿಕೆಶಿ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಬಯಕೆ ಕೂಡ ಹೌದು. ಸೋನಿಯಾ ಗಾಂಧಿ ಅವರಿಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್ ನಾಯಕರು ಮಾಡುತ್ತಾರೆ” ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮಾಧ್ಯಮಗಳ ಸೃಷ್ಟಿ ಅದು. ಕಷ್ಟ ಪಟ್ಟವರಿಗೆ ಫಲ ಸಿಗಲಿದೆ ಎಂಬುದು ಡಿಕೆಶಿ ಅವರ ಆಶಯ. ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಾಯಕರನ್ನು ಕೇಳುತ್ತೇವೆ” ಎಂದು ಡಿ ಕೆ ಸುರೇಶ್ ಹೇಳಿದರು.