ಚಿತ್ರದುರ್ಗ ಕ್ಷೇತ್ರ | ತಿಪ್ಪಾರೆಡ್ಡಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕುವವರು ಯಾರು?

Date:

Advertisements
ಇಲ್ಲಿ ಜಾತಿ ಬಲಕ್ಕಿಂತ ಹಣಬಲ ಮತ್ತು ಅಧಿಕಾರ ಬಲ ಉಳ್ಳವರು ನಿರಂತರವಾಗಿ ಗೆಲುವನ್ನು ಸಾಧಿಸುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ..? ಯಾರು ಸೋಲುತ್ತಾರೆ..? ಜಿ ಹೆಚ್ ತಿಪ್ಪಾರೆಡ್ಡಿ ಗೆಲುವಿನ ನಾಗಾಲೋಟಕ್ಕೆ ಯಾರು ಬ್ರೇಕ್‌ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಚಿತ್ರದುರ್ಗವನ್ನು ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ಬಿರು ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದಾರೆ. ಮೂವರಿಗೂ ಸವಾಲೊಡ್ಡಿರುವ ಮಹಿಳಾ ಪಕ್ಷೇತರ ಅಭ್ಯರ್ಥಿಯೊಬ್ಬರು ಕಣಕ್ಕಿಳಿದು ಹೋರಾಟ ನಡೆಸುತ್ತಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರವು ಕಳೆದ 3 ದಶಕಗಳಿಂದ ಹಿರಿಯ ರಾಜಕಾರಣಿ ಜಿ.ಹೆಚ್‌ ತಿಪ್ಪಾರೆಡ್ಡಿ ವಶದಲ್ಲಿದೆ. 2008 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಕೆ ಬಸವರಾಜನ್‌ ಒಮ್ಮೆ ಇವರನ್ನು ಸೋಲಿಸಿರುವುದನ್ನು ಬಿಟ್ಟರೇ, ಕ್ಷೇತ್ರವು ತಿಪ್ಪಾರೆಡ್ಡಿ ಅವರ ತೆಕ್ಕೆಯಲ್ಲಿಯೇ ಇದೆ.

ಚಿತ್ರದುರ್ಗ ಕ್ಷೇತ್ರಾದ್ಯಂತ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳು ಕಾಣದೇ ಹೋದರು ಕೂಡ, ಸ್ಥಳೀಯ ಅಭ್ಯರ್ಥಿಯೆಂಬ ಕಾರಣ ಹಾಗೂ ಇವರನ್ನು ಸಮರ್ಥವಾಗಿ ಎದುರಿಸುವ ಅಭ್ಯರ್ಥಿಗಳ ಕೊರತೆಯಿಂದ ಜಿ.ಹೆಚ್‌ ತಿಪ್ಪಾರೆಡ್ಡಿ ನಿರಂತರವಾಗಿ ಗೆಲುವನ್ನು ಸಾಧಿಸುತ್ತಾ ಬಂದಿದ್ದಾರೆ.

Advertisements

ಬಿಜೆಪಿ ಈ ಬಾರಿಯೂ ಹಾಲಿ ಶಾಸಕ ಜಿ.ಹೆಚ್‌ ತಿಪ್ಪಾರೆಡ್ಡಿಯವರನ್ನೇ ತನ್ನ ಹುರಿಯಾಳನ್ನಾಗಿಸಿದ್ದರೆ, ಕಾಂಗ್ರೆಸ್‌ ಅಳೆದು ತೂಗಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್ ಟಿಕೆಟ್‌ ಸಿಗದ ಕಾರಣ ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡರಿಂದಲೂ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಬಸವರಾಜನ್ ತನ್ನ ಪತ್ನಿ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ಸೌಭಾಗ್ಯ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಹಿರಿಯೂರು ಕ್ಷೇತ್ರ | ಮೈಮರೆತ ಕಾಂಗ್ರೆಸ್‌, ಎಚ್ಚೆತ್ತ ಬಿಜೆಪಿ, ಚಿಗುರಿದ ಜೆಡಿಎಸ್

ಹಾಲಿ ಶಾಸಕ ಜಿ.ಹೆಚ್‌ ತಿಪ್ಪಾರೆಡ್ಡಿ ಅವರಿಗೆ ವಯಸ್ಸಿನ ಆಧಾರದ ಮೇಲೆ ಬಿಜೆಪಿ ಟಿಕೆಟ್‌ ಬಹುತೇಕ ತಪ್ಪುವ ಸಾಧ್ಯತೆ ಇತ್ತು. ಕ್ಷೇತ್ರದಲ್ಲಿ ತನ್ನದೇ ಆದ ಸಾಮರ್ಥ್ಯ ಹೊಂದಿರುವ ತಿಪ್ಪಾರೆಡ್ಡಿಗೆ ಟಿಕೆಟ್‌ ತಪ್ಪಿಸಿದರೆ, ಬಿಜೆಪಿ ಸೋಲುವ ಭಯದಿಂದ ಅವರಿಗೆ ಕೊನೆ ಅವಕಾಶವನ್ನು ನೀಡಿತು.

ಕಾಂಗ್ರೆಸ್‌ನಲ್ಲಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರಘು ಆಚಾರ್‌ ಮತ್ತು ಎಸ್‌.ಕೆ ಬಸವರಾಜನ್‌ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ ವೀರೇಂದ್ರ ಪಪ್ಪಿ ಇವರಿಬ್ಬರಿಗೂ ಚಳ್ಳೆ ಹಣ್ಣು ತಿನ್ನಿಸಿ ಕಾಂಗ್ರೆಸ್ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ದಾವಣಗೆರೆ-ಚಿತ್ರದುರ್ಗ ಭಾಗದಿಂದ ವಿಧಾನಪರಿಷತ್‌ಗೆ ಒಮ್ಮೆ ಪಕ್ಷೇತರನಾಗಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಗೆದ್ದು ಬೀಗಿದ್ದ ರಘು ಆಚಾರ್, ಈ ಸಲ ಕೂಡ ನಿರಾಯಾಸವಾಗಿ ಗೆಲುಸು ಸಾಧಿಸಬಹುದಾಗಿತ್ತು. ಆದರೆ, ಅವರು ವಿಧಾನಸಭೆಗೆ ಚಿತ್ರದುರ್ಗದಿಂದ ಆಯ್ಕೆಯಾಗಬೇಕೆಂದು ಇಚ್ಚಿಸಿದ್ದರು. ಅದಕ್ಕಾಗಿ, ವಿಧಾನ ಪರಿಷತ್ ಚುನಾವಣೆಗೆ ಮೂರನೇ ಬಾರಿ ಸ್ಟರ್ಧಿಸಲು ನಿರಾಕರಿಸಿದ್ದರು.

ರಾಜ್ಯದಲ್ಲಿ ನಡೆದ ಹಲವು ವಿಶ್ವಕರ್ಮ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ರಘು ಆಚಾರ್‌ಗೆ ಟಿಕೆಟ್‌ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ, ಇದಕ್ಕೆ ತಣ್ಣಿರು ಎರಚಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ವೀರೇಂದ್ರ ಪಪ್ಪಿ.

ಚಳ್ಳಕೆರೆ ಮೂಲದವರಾದ ವೀರೇಂದ್ರ ಪಪ್ಪಿ ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ. ಗೋವಾದಲ್ಲಿ ಕೆಸೀನೋ ವ್ಯವಹಾರ ನಡೆಸುವ ಇವರು ಕಳೆದ 10 ವರ್ಷಗಳಿಂದ ಶಾಸಕರಾಗಲೇಬೇಕೆಂಬ ಹಠದಿಂದ ಜೆಡಿಎಸ್‌ ಸೇರಿದ್ದರು. ಕೆಲ ದಿನಗಳ ಕಾಲ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದರು. ಅಲ್ಲಿಂದ ಚಿತ್ರದುರ್ಗಕ್ಕೆ ವಲಸೆ ಬಂದು ಕಳೆದ ಚುನಾವಣೆಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡರು.

ಚಿತ್ರದುರ್ಗದಿಂದ ಹಿರಿಯೂರು ಕ್ಷೇತ್ರಕ್ಕೆ ವಲಸೆ ಬಂದು ಇಲ್ಲಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿ, ಕೆಲಕಾಲ ಜೆಡಿಎಸ್ ಸಂಘಟನೆ ಮಾಡಿದರು. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿ ಚಿತ್ರದುರ್ಗದಿಂದ ಸ್ಪರ್ಧಿಸಲು ಟಿಕೆಟ್‌ ಗಿಟ್ಟಿಸಿಕೊಂಡರು.

ಇನ್ನೂ 2008ರಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿ ಗೆದ್ದಿದ್ದ ಎಸ್‌.ಕೆ ಬಸವರಾಜನ್‌ 2013ರ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಳಲ್ಪಟ್ಟಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಹೆಚ್‌ ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದ್ದರು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೇ ವಂಚಿತರಾಗಿದ್ದರು.

2023ರ ಚುನಾವಣೆಯಲ್ಲಿ ತಾವಾಗಲೀ ತಮ್ಮ ಪತ್ನಿ ಸೌಭಾಗ್ಯ ಬಸವರಾಜನ್‌ ಆಗಲಿ ಸ್ಪರ್ಧಿಸಲೇಬೇಕೆಂಬ ಹಟ ತೊಟ್ಟು, ಕಾಂಗ್ರೆಸ್‌ನಿಂದ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡು ಜೈಲು ಸೇರಿದ್ದರಿಂದ ಇವರಿಗೆ ಹಿನ್ನೆಡೆಯಾಯಿತು.

ಕಾಂಗ್ರೆಸ್‌ ತಪ್ಪಿದರೇ ಮಾತೃ ಪಕ್ಷ ಜೆಡಿಎಸ್‌ನಿಂದಲಾದರೂ ಸ್ಪರ್ಧೆ ಮಾಡಬಬಹುದು ಎಂಬ ಆಸೆಯಲ್ಲಿದ್ದರು. ಆದರೆ, ಕಾಂಗ್ರೆಸ್‌ ಟಿಕೆಟ್‌ ವಂಚಿತ ರಘು ಆಚಾರ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಸೇರಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಇದರಿಂದ ಹತಾಶರಾದ ದಂಪತಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ನಾಲ್ವರು ಪ್ರಭಲ ಅಭ್ಯರ್ಥಿಗಳಂತೆ ಕಂಡುಬಂದರೂ ಜಿದ್ದಾಜಿದ್ದಿ ನಡೆಯುತ್ತಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮಾತ್ರ. ಕಳೆದ 3 ದಶಕಗಳಿಂದಲೂ ತನ್ನದೇ ಆದ ಹಿಡಿದ ಹೊಂದಿರುವ ಜಿ ಹೆಚ್‌ ತಿಪ್ಪಾರೆಡ್ಡಿಯನ್ನು ಶತಾಯಗತಾಯ ಸೋಲಿಸಿ, ಕಳೆದ ಸಲದ ಸೇಡನ್ನು ತೀರಿಸಿಕೊಳ್ಳಬೇಕೆಂದು ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ ಪಪ್ಪಿ ಹಗಲು ಇರುಳು ಪ್ರಯತ್ನ ಮಾಡುತ್ತಿದ್ದಾರೆ.

ಆದರೆ, ಈ ಚುನಾವಣೆಯಲ್ಲಿಯೂ ಗೆದ್ದು ಬಿಜೆಪಿಗೆ ಹಾಗೂ ತನ್ನ ವಿರೋಧಿಗಳಿಗೆ ತನ್ನ ಸಾಮರ್ಥ್ಯವನ್ನು ತೋರಿಸಲು ಜಿ ಹೆಚ್ ತಿಪ್ಪಾರೆಡ್ಡಿ ಯುವಕರನ್ನು ನಾಚಿಸುವಂತೆ ಪ್ರಚಾರದಲ್ಲಿ ತೊಡಗಿದ್ದಾರೆ. “ಚಳ್ಳಕೆರೆಯ ಕಾಂಗ್ರೆಸ್‌ ಅಭ್ಯರ್ಥಿ, ಬೆಂಗಳೂರಿನ ಜೆಡಿಎಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರೆ, ನಿಮ್ಮ ಕಷ್ಟ ಸುಖ ಹೇಳಿಕೊಳ್ಳಲು ಅಲ್ಲಿಗೇ ಹೋಗಬೇಕಾಗುತ್ತದೆ. ನಾನಾದರೇ ಇಲ್ಲಿಯೇ ಇರುತ್ತೇನೆ” ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಚನ್ನಪಟ್ಟಣ ಕ್ಷೇತ್ರ | ಸೈನಿಕನ ಮಣಿಸಿ ಮರಳಿ ಕಿಂಗ್ ಆಗುವರೇ ಕುಮಾರಸ್ವಾಮಿ?

ಜೆಡಿಎಸ್‌ ಅಭ್ಯರ್ಥಿ ರಘು ಆಚಾರ್‌ ಟಿಕೆಟ್‌ ತಪ್ಪಿಸಿದ ಕಾಂಗ್ರೆಸ್‌ ವರಿಷ್ಠರ ವಿರುದ್ಧ ಸಿಟ್ಟಾಗಿ ಅವರಿಗೆ ಪ್ರಚಾರಕ್ಕೆ ಅನುಕೂಲವಾಗಲೆಂದು ನೀಡಿದ್ದ ಹೆಲಿಕ್ಯಾಪ್ಟರ್‌ ಹಿಂಪಡೆದು, ಕುಮಾರಸ್ವಾಮಿ ಅವರಿಗೆ ನೀಡಿದಲ್ಲದೇ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಪಣ ತೊಟ್ಟಿದ್ದಾರೆ.

ಇನ್ನೂ ಪಕ್ಷೇತರರಾಗಿ ಸ್ಪರ್ಧಿಸಿರುವ ಸೌಭಾಗ್ಯ ಬಸವರಾಜನ್ ಚಿತ್ರದುರ್ಗ ನಾಗರೀಕರಿಗೆ ಹಳೆ ಪರಿಚಯ ಉಳ್ಳವರಾಗಿರುವುದರಿಂದ ಎಲ್ಲಡೆ ಹೋಗುತ್ತಾ, ತನ್ನನ್ನೇ ಬೆಂಬಲಿಸಬೇಕು ಎಂದು ಕೇಳಿಕೊಳ್ಳುತ್ತಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಚಿತ್ರದುರ್ಗ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ, ದಲಿತ ಎಡಗೈ ಮತ್ತು ನಾಯಕ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಕುರುಬ ಮತ್ತು ಗೊಲ್ಲ ಸಮುದಾಯ ಸೇರಿದಂತೆ ಇನ್ನಿತರ ಹಿಂದುಳಿದ ಸಮುದಾಯದ ಮತಗಳು ಅಭ್ಯರ್ಥಿಯ ಗೆಲುವನ್ನು ನಿರ್ಣಯಿಸುತ್ತವೆ.

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ ಪಪ್ಪಿ ಲಿಂಗಾಯತ ಸಮುದಾಯದವರಾಗಿದ್ದು, ಜೆಡಿಎಸ್ ಅಭ್ಯರ್ಥಿ ರಘು ಆಚಾರ್‌ ಹಿಂದುಳಿದ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ ಹೆಚ್ ತಿಪ್ಪಾರೆಡ್ಡಿ ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್‌ ಕೂಡ ಲಿಂಗಾಯತ (ಕುಂಚಿಟಿಗ) ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇಲ್ಲಿ ಜಾತಿ ಬಲಕ್ಕಿಂತ ಹಣಬಲ ಮತ್ತು ಅಧಿಕಾರ ಬಲ ಉಳ್ಳವರು ನಿರಂತರವಾಗಿ ಗೆಲುವನ್ನು ಸಾಧಿಸುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ..? ಯಾರು ಸೋಲುತ್ತಾರೆ..? ಜಿ ಹೆಚ್ ತಿಪ್ಪಾರೆಡ್ಡಿ ಗೆಲುವಿನ ನಾಗಾಲೋಟಕ್ಕೆ ಯಾರು ಬ್ರೇಕ್‌ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X