- ಬಿಜೆಪಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ, ಅವಮಾನ ಸಾಕಷ್ಟು ಆಗಿದೆ
- ಪಕ್ಷದ ಸದಸ್ಯತ್ವಕ್ಕೆ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವೆ
“ಯಾವ ಕಾರಣವೂ ಹೇಳದೇ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ನಾನೇನು ರೇಪ್ ಮಾಡಿದ್ದೀನಾ, ಯಾರದಾದರೂ ಸೆರಗು ಎಳೆದಿದ್ದೀನಾ, ಭ್ರಷ್ಟಾಚಾರ ಮಾಡಿದ್ದೀನಾ?…”
ಬಿಜೆಪಿ ವಿರುದ್ಧ ಹೀಗೆ ಆಕ್ರೋಶದ ಮಾತುಗಳನ್ನು ಆಡಿದವರು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ. ಅಥಣಿಯಲ್ಲಿ ಗುರುವಾರ ಮಾತನಾಡಿದ ಅವರು, “ಬಿಜೆಪಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ, ಅವಮಾನ ಸಾಕಷ್ಟು ಆಗಿದೆ. ಇಷ್ಟು ದಿನ ಎಲ್ಲ ಸಹಿಸಿಕೊಂಡು ಇದ್ದೆ” ಎಂದರು.
“ಉಪ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡಾಗಲೂ ನಾನು ಯಾರ ವಿರುದ್ಧವೂ ತುಟಿ ಬಿಚ್ಚಲಿಲ್ಲ. ರಾಜೀನಾಮೆ ಕೊಡು ಅಂತ ಕೇಳಿದ್ದರೆ ಸಂತೋಷದಿಂದ ಕೊಡುತ್ತಿದ್ದೆ. ಅವಮಾನ ಮಾಡಬೇಕು ಎಂತಲೇ ಏಕಾಏಕಿ ತೆಗೆದು ಹಾಕಲಾಯಿತು. ನನ್ನ ತಾಳ್ಮೆಯ ಕಟ್ಟೆ ಈಗ ಒಡೆದಿದೆ” ಎಂದು ಹೇಳಿದರು.
“ಬಿ ಎಲ್ ಸಂತೋಷ್ ಅವರು ಇಂದು ಬೆಳಗ್ಗೆ ತುಂಬಾ ಸಲ ಕಾಲ್ ಮಾಡಿದ್ದಾರೆ. ನಾನೂ ಸಿಟ್ಟಲ್ಲಿ ಏನಾದರೂ ಮಾತನಾಡಿದರೆ ಅವರಿಗೆ ಬೇಸರವಾದೀತು ಎಂದು ಕರೆ ಸ್ವೀಕರಿಸಿಲ್ಲ. ಅವರು ನನ್ನ ಗುರು” ಎಂದರು.
ಈ ಸುದ್ದಿ ಓದಿದ್ದೀರಾ? ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಉಮೇದುವಾರಿಕೆ ಸಲ್ಲಿಸಿ ಗಮನ ಸೆಳೆದ ಅಭ್ಯರ್ಥಿಗಳು
“ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ನಾನು ಪಕ್ಷ ಬಿಡುತ್ತಿಲ್ಲ. ಸ್ವಾಭಿಮಾನಕ್ಕೆ ಬಹಳ ಧಕ್ಕೆಯಾಗಿದೆ. ಇಲ್ಲಿದ್ದು ಪ್ರಯೋಜನವಿಲ್ಲ ಅಂತ ಅನ್ನಿಸಿದ್ದು, ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಹಾಗೆಯೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವೆ” ಎಂದು ತಿಳಿಸಿದರು.
“ಸಂಸದ ಅಣ್ಣಾಸಾಹೇಬ ಜೊಲ್ಲೆ ನನ್ನನ್ನು ಭೇಟಿ ಮಾಡಿದ್ದಾರೆ. ಆದರೆ, ಅದು ಸೌಜನ್ಯದ ಭೇಟಿ ಅಷ್ಟೇ. ರಾಜಕೀಯವಾಗಿ ನಾನು ಏನೂ ಮಾತನಾಡಿಲ್ಲ” ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.