2023ರ ಯಶವಂತಪುರ ವಿಧಾನಸಭಾ ಕ್ಷೇತ್ರ ಕೈವಶ ಮಾಡಿಕೊಳ್ಳಲು ಜಿದ್ದಾಜಿದ್ದಿ ಆರಂಭಗೊಂಡಿದೆ. 2019ರ ಉಪ ಚುನಾವಣೆಯು ಸೇರಿ 2013 ಹಾಗೂ 2018ರ ಮೂರು ಚುನಾವಣೆಗಳಲ್ಲಿ ಸಮೀಪದವರೆಗೂ ಪೈಪೋಟಿ ಕೊಟ್ಟು ಸೋತಿರುವ ಜೆಡಿಎಸ್ ಅಭ್ಯರ್ಥಿ ಟಿ ಎನ್ ಜವರಾಯಿಗೌಡರಿಗೆ ಅನುಕಂಪದ ಅಲೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.
ಕಾಂಗ್ರೆಸ್‌ನಲ್ಲಿ ಎರಡು ಬಾರಿ ಶಾಸಕರಾಗಿ ಆಪರೇಷನ್ ಕಮಲದ ಮಹಾತ್ಮೆಯಿಂದ ಬಿಜೆಪಿಗೆ ಜಿಗಿದು ಹ್ಯಾಟ್ರಿಕ್ ಗೆಲುವು ಕಂಡು ಸಚಿವ ಪಟ್ಟವನ್ನು ಗಿಟ್ಟಿಸಿಕೊಂಡಿರುವ ಎಸ್ ಟಿ ಸೋಮಶೇಖರ್‌ಗೆ ಡಬಲ್ ಇಂಜಿನ್ ಸರ್ಕಾರಗಳ ಅಧಿಕಾರದ ನಾಮಬಲದಿಂದ ಸ್ಪರ್ಧೆ ನೀಡಬೇಕಾಗಿದೆ.
ರಾಜ್ಯಾದ್ಯಂತ ಹೆಚ್ಚು ಬಲ ಹೊಂದಿರುವ ಕೈ ಪಕ್ಷಕ್ಕೆ ಯಶವಂತಪುರದಲ್ಲಿ ಮಾತ್ರ ಹೆಚ್ಚಿನ ವರ್ಚಸ್ಸು ಕಾಣುತ್ತಿಲ್ಲ. ಕಾರಣ, ಕಾಂಗ್ರೆಸಿನಲ್ಲಿದ್ದ ಸಣ್ಣಪುಟ್ಟ ಸ್ಥಳೀಯ ನಾಯಕರೆಲ್ಲ 2019ರಲ್ಲಿ ತಮ್ಮ ಶಾಸಕ ಎಸ್ ಟಿ ಸೋಮಶೇಖರ್ ಜೊತೆಯಲ್ಲಿ ಬಿಜೆಪಿಗೆ ತೂರಿಕೊಂಡಿರುವುದು. ಸಿನಿಮಾ ನಟಿ ಭಾವನಾ ರಾಮಣ್ಣ, ಕೃಷ್ಣಂ ರಾಜು ಮುಂತಾದ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರೂ ಸ್ಥಳೀಯ ನಾಯಕ ಬಾಲರಾಜು ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕಳೆದ ಬಾರಿಯ ಉಪಚುನಾವಣೆಯಲ್ಲಿ ಜವರಾಯಿಗೌಡ ಹಾಗೂ ಎಸ್ ಟಿ ಸೋಮಶೇಖರ್ ಅವರ ಪೈಪೋಟಿಯಲ್ಲಿ ಕೊಚ್ಚಿ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿ ನಾಗರಾಜ್ 15,707 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು.
2008ಕ್ಕೂ ಮುನ್ನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದೊಳಗಿದ್ದ ಈ ಕ್ಷೇತ್ರವು ಮರು ವಿಂಗಡಣೆ ಬಳಿಕ ಯಶವಂತಪುರ ವಿಧಾನಸಭಾ ಕ್ಷೇತ್ರವಾಯಿತು. ಮರುವಿಂಗಡನೆಯಾದ ನಂತರ ಬಿಬಿಎಂಪಿ ವ್ಯಾಪ್ತಿಯ ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ, ಹೆಮ್ಮಿಗೆಪುರ ಹಾಗೂ ಯಶವಂತಪುರ ಎಂಬ 6 ವಾರ್ಡ್‌ಗಳು ಸೇರಿಕೊಂಡಿವೆ.
ಜೊತೆಗೆ ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆ ಕಗ್ಗಲಿಪುರ ತನಕ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಯಶವಂತಪುರ ಕ್ಷೇತ್ರ ವ್ಯಾಪಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ರಾಜ್ಯದ ದೊಡ್ಡ ಕ್ಷೇತ್ರಗಳಲ್ಲಿ ಇದೂ ಒಂದು.
ಜೆಡಿಎಸ್ ಮೂರು ಬಾರಿ, ಎಸ್‌ಟಿಎಸ್ ಎರಡು ಬಾರಿ ಸೋಲು
ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಸಚಿವ ಎಸ್ ಟಿ ಸೋಮಶೇಖರ್ ಈ ಮೊದಲು ಎರಡು ಬಾರಿ ಸೋತಿದ್ದರು. ಆರ್ ಅಶೋಕ್ ವಿರುದ್ಧ 2004ರಲ್ಲಿ ಅವಿಭಜಿತ ಉತ್ತರಹಳ್ಳಿ ಕ್ಷೇತ್ರದಲ್ಲಿ ಹಾಗೂ ಕ್ಷೇತ್ರ ಪುನರ್‌ವಿಂಗಡನೆಯಾದ ನಂತರ 2008ರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ 1,082 ಮತಗಳ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು. ಇವೆರಡು ಸೋಲುಗಳು ಸೋಮಶೇಖರ್ ಮುಂದಿನ ಗೆಲುವಿಗೆ ನಾಂದಿಯಾಗಿದ್ದವು.
ಹಾಗೆಯೇ ಎಸ್ ಟಿ ಸೋಮಶೇಖರ್ ಮತ್ತು ಜೆಡಿಎಸ್‌ನ ಜವರಾಯಿಗೌಡ ಮೂರು ಬಾರಿ ಮುಖಾಮುಖಿಯಾಗಿದ್ದಾರೆ. ಮೂರು ಬಾರಿಯೂ ಜವರಾಯಿಗೌಡ ಸೋಲು ಕಂಡಿದ್ದಾರೆ. ಈ ಬಾರಿಯ ಆಡಳಿತ ವಿರೋಧಿ ಅಲೆಯ ಜೊತೆ ಅನುಕಂಪದ ಅಲೆ ಹೆಚ್ಚಾಗಿದೆ. 2013ರ ಚುನಾವಣೆಯಲ್ಲಿ 29,100, 2018ರಲ್ಲಿ 10,711 ಹಾಗೂ 2019ರ ಉಪ ಚುನಾವಣೆಯಲ್ಲಿ 27,699 ಮತಗಳಿಂದ ಸೋತಿದ್ದರು.
ಜೆಡಿಎಸ್ ಸೋಲಿಸಲು ಇರುವ ಎಲ್ಲಾ ತಂತ್ರಗಳನ್ನು ಬಿಜೆಪಿ ಹುಡುಕುತ್ತಿದೆ. ಅದೇ ರೀತಿ ಜವರಾಯಿಗೌಡ ಈ ಬಾರಿ ಗೆಲ್ಲಲೇಬೇಕೆಂಬ ಹಠ ತೊಟ್ಟಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಇವರಿಬ್ಬರಿಗೆ ಸೆಡ್ಡು ಹೊಡೆದು ಜಯ ಕಾಣುವ ನಿರೀಕ್ಷೆಯಲ್ಲಿರುವುದು ಕಾಂಗ್ರೆಸಿನ ಬಾಲರಾಜ್‌ಗೌಡ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರದ ಭರಾಟೆ ಮೂರು ಪಕ್ಷಗಳಲ್ಲೂ ಜೋರಾಗಿದೆ.
ಕ್ಷೇತ್ರದಲ್ಲಿ ಒಟ್ಟು ಮತದಾರರು 5,15,716. ಪುರುಷರು 2,64,583, ಮಹಿಳೆಯರು 2,51,075. ಇತರೆ 58. ಜಾತಿವಾರು ಲೆಕ್ಕ ಹಾಕಿದರೆ ಒಕ್ಕಲಿಗರು ನಿರ್ಣಾಯಕರು. ಅವರು 1,03,230 ಇದ್ದರೆ, ಲಿಂಗಾಯತರು 52,809, ಪರಿಶಿಷ್ಟ ಜಾತಿ 54,483, ಮುಸ್ಲಿಮರು 24,048, ಕುರುಬರು 24,655 ಇದ್ದಾರೆ.
ಕ್ಷೇತ್ರದ ಮತದಾರರ ಒಲವು ಯಾರತ್ತ?
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ಹಾಗೂ ಹೆಮ್ಮಿಗೆಪುರ ವಾರ್ಡ್‌ಗಳಿದ್ದು ಬಿಜೆಪಿ ಅಭ್ಯರ್ಥಿ ಎಸ್‌ಟಿ ಸೋಮಶೇಖರ್ ಅವರಿಗೆ ಪ್ರತಿ ವಾರ್ಡ್‌ಗಳಲ್ಲಿ ಉತ್ತಮ ಹಿಡಿತವಿದೆ. ಇವರ ವಿರುದ್ಧ ಕಳೆದ ಮೂರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿರುವ ಜವರಾಯಿಗೌಡ ಅವರಿಗೆ ಕ್ಷೇತ್ರದಾದ್ಯಂತ ಅನುಕಂಪದ ಅಲೆಯೇ ಹೆಚ್ಚು. ‘ಇದು ತಮ್ಮ ಕೊನೆಯ ಚುನಾವಣೆಯಾಗಿದ್ದು, ಇದೊಂದು ಬಾರಿ ಆಶೀರ್ವದಿಸಿ’ ಎಂದು ಭಾವನಾತ್ಮಕವಾಗಿ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿರುವ ಸಮಸ್ಯೆಗಳು
ಮಾಗಡಿ ಮುಖ್ಯ ರಸ್ತೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಹಲವು ಕಡೆ ಡಾಂಬರೀಕರಣ ಪೂರ್ಣಗೊಂಡಿಲ್ಲ. ಕೆಲವು ಕಡೆ ಕಾಟಚಾರಕ್ಕೆಂದು ಡಾಂಬರು ಹಾಕಿ ಬಹುತೇಕ ಕಡೆ ಬಿಟ್ಟಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಬಿಡಿಎ ಬಡಾವಣೆಗಳು ಹಾಗೂ ಖಾಸಗಿ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ, ರಿಯಲ್ ಎಸ್ಟೇಟ್ ಏರುಮುಖವಾಗಿರುವ ಈ ವ್ಯಾಪ್ತಿಯಲ್ಲಿ ಅತಿಕ್ರಮಣ, ಖಾತೆಗಳ ಸಮಸ್ಯೆ ಕೂಡ ಬಿಜೆಪಿ ವಿರುದ್ಧ ಕೆಲಸ ಮಾಡುವ ಸಾಧ್ಯತೆಯಿದೆ.