ಜೂನ್ 23ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ
ಸದ್ಯದಲ್ಲೇ ಘೋಷಣೆಯಾಗಲಿದೆ ಹೊಸ ದಿನಾಂಕ
ಅಭಿಷೇಕ್ ಅಂಬರೀಶ್ ಮತ್ತು ದುನಿಯಾ ಸೂರಿ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ʼಬ್ಯಾಡ್ ಮ್ಯಾನರ್ಸ್ʼ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ.
ನಿರ್ದೇಶಕ ಸೂರಿ ಮತ್ತು ಚಿತ್ರತಂಡ ಈ ಹಿಂದೆ ಘೋಷಿಸಿದಂತೆ ʼಬ್ಯಾಡ್ ಮ್ಯಾನರ್ಸ್ʼ ಸಿನಿಮಾ ಇದೇ ಜೂನ್ 23ರಂದು ತೆರೆಗೆ ಬರಬೇಕಿತ್ತು. ಸೆನ್ಸಾರ್ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿದೆ ಎನ್ನಲಾಗಿದೆ. ಅಭಿಷೇಕ್ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ಮದುವೆ ತಯಾರಿಯಲ್ಲಿದ್ದ ಅವರು ಸಿನಿಮಾ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಕೊಂಡಿರಲಿಲ್ಲ. ಈ ಕಾರಣದಿಂದಲೂ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಸೆನ್ಸಾರ್ ಮಂಡಳಿಯಿಂದ ಸಿನಿಮಾ ಪ್ರದರ್ಶನಕ್ಕೆ ಅನುಮತಿ ದೊರೆತ ನಂತರ ಹೊಸ ದಿನಾಂಕವನ್ನು ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ʼಕ್ರೈಂʼ ಮತ್ತು ಆ್ಯಕ್ಷನ್ ಕಥಾಹಂದರವನ್ನು ಹೊಂದಿರುವ ʼಬ್ಯಾಡ್ ಮ್ಯಾನರ್ಸ್ʼ ಚಿತ್ರದಲ್ಲಿ ಅಭಿಷೇಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಖ್ಯಾತ ನಟಿ ರಚಿತಾ ರಾಮ್ ಅಭಿಷೇಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ದತ್ತಣ್ಣ, ತಾರಾ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜನರ ಭಾವನೆಗಳಿಗೆ ಧಕ್ಕೆ; ‘ಆದಿಪುರುಷ್’ ಚಿತ್ರದ ವಿರುದ್ಧ ಕಾಂಗ್ರೆಸ್, ಎಎಪಿ, ಶಿವಸೇನೆ ಆಕ್ರೋಶ
ಟೀಸರ್ ಮತ್ತು ಟ್ರೈಲರ್‌ಗಳ ಮೂಲಕ ಸದ್ದು ಮಾಡಿದ್ದ ಈ ಸಿನಿಮಾಗೆ ಕೆಂ ಸುಧೀರ್ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ʼಬ್ಯಾಡ್ ಮ್ಯಾನರ್ಸ್ʼ ಜುಲೈನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.