ಇತ್ತೀಚೆಗೆ ಬಿಡುಗಡೆಯಾದ ‘ಪುಷ್ಟ-2: ದಿ ರೂಲ್’ ಸಿನಿಮಾ ಪ್ರದರ್ಶನ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ, ಅವರಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಈ ವೇಳೆ, ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು, ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ರದ್ದು ಕೋರಿ ಅಲ್ಲು ಅರ್ಜುನ್ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ರದ್ದತಿಗೆ ನ್ಯಾಯಾಲಯ ನಿರಾಕರಿಸಿತ್ತು. ಈ ಬೆನ್ನಲ್ಲೇ, ಅವರನ್ನು ಶುಕ್ರವಾರ ಬೆಳಗ್ಗೆ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಅವರಿಗೆ ನಾಂಪಲ್ಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆದಾಗ್ಯೂ, ಅಲ್ಲು ಅರ್ಜುನ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ, ಮಧ್ಯಂತರ ಜಾಮೀನು ನೀಡಿ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ.
ತನಿಖೆಗೆ ಸಹಕರಿಸುವಂತೆ ಮತ್ತು ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಅರ್ಜುನ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
Itihasa Tilisiddakkai Tumba Dhanyavadagalu