ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನರಾಗಿರುವ ನಟ ದರ್ಶನ್ ಹಾಗೂ ಇತರರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳ ವಿಸ್ತರಣೆ ಮಾಡಿ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ಅವರು ಗುರುವಾರ(ಜು.18ರಂದು) ಆದೇಶ ನೀಡಿದ್ದಾರೆ.
ಆ ಮೂಲಕ ದರ್ಶನ್ ಮತ್ತು ಸಹಚರರು ಆಗಸ್ಟ್ 1ರವರೆಗೆ ಮತ್ತೆ ಜೈಲಿನಲ್ಲಿ ದಿನ ಕಳೆಯಲಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಗುರುವಾರ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇನ್ನು ದರ್ಶನ್ ಅವರಿಗೆ ಜೈಲೂಟ ಸೇವಿಸಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ತಮಗೆ ಮನೆಯೂಟ ಬೇಕು. ಮಲಗಲು ಹಾಸಿಗೆ ಬೇಕು, ಓದಲು ಪುಸ್ತಕಗಳನ್ನು ನೀಡಬೇಕೆಂದು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ತಂಗಲಾನ್ ಟ್ರೈಲರ್ ಬಿಡುಗಡೆ: ಆಗಸ್ಟ್ 15ರಿಂದ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ಕೋಲಾರದ ಕಥೆ ‘ತಂಗಲಾನ್’
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲು ಅಧಿಕಾರಿಗಳು, ಸರ್ಕಾರಕ್ಕೆ ನೊಟೀಸ್ ನೀಡಿ, ವಿಚಾರಣೆಯನ್ನು ಶುಕ್ರವಾರ (ಜು.19ಕ್ಕೆ) ಅಂದರೆ ನಾಳೆಗೆ ಮುಂದೂಡಿದೆ.
ಸದ್ಯಕ್ಕೆ ಜಾಮೀನು ಕಷ್ಟ, ನಟನಿಗೆ ಇನ್ನಷ್ಟು ಸಂಕಷ್ಟ
ಇತ್ತೀಚೆಗೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ , ಸಹೋದರ ದಿನಕರ್ ಅವರು ಭೇಟಿ ಆಗಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್ ಜತೆ ಮಾತನಾಡಿದ ಪತ್ನಿ ಮತ್ತು ಸಹೋದರ ಜಾಮೀನು ವಿಚಾರ ಚರ್ಚಿಸಿದ್ದರು. ಈ ವೇಳೆ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ. ಸ್ವಲ್ಪ ದಿನಗಳ ಕಾಲ ಸಮಾಧಾನದಿಂದ ಇರುವಂತೆ ದರ್ಶನ್ಗೆ ಸಲಹೆ ನೀಡಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಸಹಚರರು ಜೈಲು ಸೇರಿ 25 ದಿನಗಳೇ ಕಳೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಇದು ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.