ಸನ್ ಆಫ್ ಸರ್ದಾರ್, ಜೈ ಹೋ ಮೊದಲಾದ ಸಿನಿಮಾಗಳಲ್ಲಿ ನಟಿಸಿದ ಬಾಲಿವುಡ್ ನಟ ಮುಕುಲ್ ದೇವ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 54 ವರ್ಷವಾಗಿತ್ತು.
ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಮುಕುಲ್ ಅವರ ಆಪ್ತ ಸ್ನೇಹಿತೆ ನಟಿ ದೀಪ್ಶಿಖಾ ನಾಗ್ಪಾಲ್ ಮುಕಲ್ ಸಾವಿನ ಬಗ್ಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಲಿವುಡ್ ನಟ ಮನೋಜ್ ಕುಮಾರ್ ನಿಧನ
ತನ್ನ ಇನ್‌ಸ್ಟಾಗ್ರಾಂನಲ್ಲಿ ಮುಕುಲ್ ದೇವ್ ಅವರೊಂದಿಗಿನ ಹಳೆಯ ಚಿತ್ರವನ್ನು ಹಂಚಿಕೊಂಡಿರುವ ನಟಿ ದೀಪ್ಶಿಖಾ “ಇದನ್ನು ನಂಬಲಾಗದು. RIP” ಎಂದು ಪೋಸ್ಟ್ ಮಾಡಿದ್ದಾರೆ.
ಮುಕುಲ್ ದೇವ್ ಕೊನೆಯ ಬಾರಿಗೆ ಹಿಂದಿ ಚಿತ್ರ ‘ಅಂತ್ ದಿ ಎಂಡ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಕುಲ್ ನಟ ರಾಹುಲ್ ದೇವ್ ಅವರ ಕಿರಿಯ ಸಹೋದರ. ನವದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಮುಕುಲ್ ದೇವ್ ಅವರ ತಂದೆ ಹರಿ ದೇವ್ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಮುಕುಲ್ ದೇವ್ ಅವರು ಮೊದಲು ಎಂಟನೇ ತರಗತಿಯಲ್ಲಿದ್ದಾಗ ನೃತ್ಯ ಕಾರ್ಯಕ್ರಮವೊಂದರಲ್ಲಿ ಮೈಕೆಲ್ ಜಾಕ್ಸನ್ ಅವರಂತೆ ನೃತ್ಯ ಮಾಡಿದ್ದು ಸಂಭಾವನೆ ರೂಪದಲ್ಲಿ ಚೆಕ್ ಪಡೆದರು. ಅದಾದ ಬಳಿಕ ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿ ಪೈಲಟ್ ಕೂಡ ಆಗಿದ್ದರು.
ಅದಾದ ಬಳಿಕ 1996ರಲ್ಲಿ ಮಮ್ಕಿನ್ ಧಾರಾವಾಹಿಯೊಂದಿಗೆ ತನ್ನ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿಜಯ್ ಪಾಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಸ್ತಕ್ ಸಿನಿಮಾದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಎಸಿಪಿ ರೋಹಿತ್ ಮಲ್ಹೋತ್ರಾ ಪಾತ್ರವನ್ನು ನಿರ್ವಹಿಸಿದರು. ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಚೊಚ್ಚಲ ಸಿನಿಮಾವೂ ಇದಾಗಿದೆ.
