ತಮ್ಮ ವಿರುದ್ಧ ಮಾನಹಾನಿ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲವಾದ ಕಂಟೆಂಟ್ ಬರೆದು, ತಿರುಚಿದ ವಿಡಿಯೋಗಳೊಂದಿಗೆ ಪ್ರಸಾರ ಮಾಡಿರುವ ಸುಮಾರು 20 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಲಯಾಳಂ ನಟಿ ಹನಿ ರೋಸ್ ದೂರು ದಾಖಲಿಸಿದ್ದಾರೆ. ಕೇರಳದ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ, ತಮಗೆ ಚೆಮ್ಮನೂರು ಜ್ಯುವೆಲರ್ಸ್‌ನ ಬಾಬಿ ಚೆಮ್ಮನೂರ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಹನಿ ರೋಸ್ ಆರೋಪಿಸಿದ್ದರು. ಪ್ರಕರಣದಲ್ಲಿ ಆರೋಪಿ ಬಾಬಿ ಚೆಮ್ಮನೂರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಹನಿ ರೋಸ್ ಅವರ ಬಗ್ಗೆ ಪ್ರಚೋದನಾಕಾರಿ, ಮಾನಹಾನಿ ಮಾಡುವಂತಹ ಚಿತ್ರಗಳು ಹಾಗೂ ತಿರುಚಿದ ವಿಡಿಯೋಗಳೊಂದಿಗೆ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತಮ್ಮ ವಿರುದ್ಧ ಅವಮಾನಕಾರಿಯಾಗಿ ವಿಷಯಗಳನ್ನು ಬಿತ್ತಿರಿಸಿರುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ಹನಿ ರೋಸ್ ಒತ್ತಾಯಿಸಿದ್ದಾರೆ. ದೂರು ದಾಖಲಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 75 ಮತ್ತು ಸೆಕ್ಷನ್ 67 ಹಾಗೂ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹನಿ ರೋಸ್ ಅವರು ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಜಂತಾ ಮತ್ತು ನಂಜನಗೂಡು ನಂಜುಂಡ ಅವರು ನಟಿಸಿರುವ ಕನ್ನಡ ಸಿನಿಮಾಗಳು.