‘ಮುಂಗಾರು ಮಳೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಪೂಜಾ ಗಾಂಧಿ ಅವರು ಕನ್ನಡ ಕಲಿತು ಇದೀಗ ಅಪ್ಪಟ ಕನ್ನಡತಿ ಆಗಿದ್ದಾರೆ. ನ.29 ರಂದು ಕುವೆಂಪು ಆಶಯದ ‘ಮಂತ್ರ ಮಾಂಗಲ್ಯ’ದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ನಟಿ ಪೂಜಾ ಗಾಂಧಿ ಅವರು ಕನ್ನಡ ಓದಲು, ಬರೆಯಲು ಕಲಿತಿದ್ದಾರೆ. ಮಾಧ್ಯಮ ಮಿತ್ರರಿಗೆ ಮದುವೆ ಆಮಂತ್ರಣವನ್ನು ಸ್ವತಃ ಅವರೇ ಕನ್ನಡದಲ್ಲಿ ಬರೆದು ಕಳುಹಿಸಿದ್ದಾರೆ.
“ನ.29ರಂದು ಸಾಯಂಕಾಲ ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆ ಅವರನ್ನು ಮದುವೆಯಾಗಲಿದ್ದೇನೆ. ನಮ್ಮನ್ನು ಹರಸಿ, ಆಶೀರ್ವದಿಸಿ” ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿ ಅವರ ವಿವಾಹ ನೆರವೇರಲಿದೆ. ವಿಜಯ್ ಅವರು ಬೆಂಗಳೂರಿನಲ್ಲಿ ತಮ್ಮದೇ ಲಾಜಿಸ್ಟಿಕ್ ಕಂಪನಿ ಹೊಂದಿದ್ದಾರೆ. ವಿಜಯ್ ಹಾಗೂ ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದವರು. ‘ಮುಂಗಾರು ಮಳೆ’ ಸಿನಿಮಾ ಗೆದ್ದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಈ ಸಿನಿಮಾ ಬಳಿಕ ‘ಮಿಲನ’, ‘ಕೃಷ್ಣ’, ‘ದಂಡುಪಾಳ್ಯ’, ‘ಅಭಿನೇತ್ರಿ’ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದರು. ಇತ್ತೀಚೆಗೆ ‘ಸಂಹಾರಿಣಿ’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತ್ತೊಂದು ಬೆಂಕಿ ಅವಘಡ; ಹೊತ್ತಿ ಉರಿದ ಶೂ, ಬಟ್ಟೆ ಗೋದಾಮು
2012ರಲ್ಲಿ ಪೂಜಾ ಗಾಂಧಿ ಅವರು ಉದ್ಯಮಿ ಆನಂದ್ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ವಿವಾಹಕ್ಕೂ ಮುನ್ನವೇ ಸಂಬಂಧ ಮುರಿದುಬಿದ್ದಿತ್ತು.