ಕನ್ನಡದ ಖ್ಯಾತ ನಟಿ, ರಾಜಕಾರಣಿಯೂ ಆಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರಬುದ್ಧ ಹೇಳಿಕೆ, ಪ್ರತಿಕ್ರಿಯೆಗಳಿಂದ ಸೂಕ್ಷ್ಮ ಸಂವೇದನೆಯ ನಟಿ ಎನಿಸಿರುವ ರಮ್ಯಾ ಅವರು ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಸುದ್ದಿಯಾಗಿದ್ದಾರೆ. ರಮ್ಯಾಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದವರು ಬೇರೆ ಯಾರೂ ಅಲ್ಲ, ಆಕೆಯ ಜೊತೆಗೆ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಿದ್ದ ದರ್ಶನ್ ಅಭಿಮಾನಿಗಳಂತೆ
ಕಳೆದ ಒಂದು ದಶಕದಲ್ಲಿ ಎಲ್ಲಾ ವರ್ಗದ ಯುವಜನರ ಕೈಗೆ ಮೊಬೈಲ್ ಫೋನ್ಗಳು ಸಿಕ್ಕ ನಂತರ ಅದರಲ್ಲೂ ಪವರ್ಫುಲ್ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಬಂದ ನಂತರವಂತೂ ಹೆಣ್ಣುಮಕ್ಕಳ ಮೇಲಿನ ಸೈಬರ್ ದಾಳಿ, ವೈಯಕ್ತಿಕ ತೇಜೋವಧೆ, ಘನತೆಗೆ ಧಕ್ಕೆ ತರುವ ರೀತಿಯ ಪದ ಬಳಕೆ, ಅತ್ಯಾಚಾರದ ಬೆದರಿಕೆ ಪ್ರಕರಣಗಳು ಹೆಚ್ಚಾಗಿವೆ. ಮಾಹಿತಿ ತಂತ್ರಜ್ಞಾನ ಜಗತ್ತಿನ ಬೆಳವಣಿಗೆಗೆ ಎಷ್ಟು ಪೂರಕವಾಗಿದೆಯೋ ಅಷ್ಟೇ, ನಾಗರಿಕರ ವೈಯಕ್ತಿಕ ಬದುಕಿಗೆ ಮಾರಕವಾಗಿ ಪರಿಣಮಿಸಿದೆ.
ಹೆಣ್ಣುಮಕ್ಕಳ ಬಗ್ಗೆ ಸಾಮಾನ್ಯವಾಗಿ ಗಂಡು ಮನಸ್ಸುಗಳಲ್ಲಿರುವ ಅಸಹನೆ, ಕೀಳು ಭಾವನೆ, ಅಬಲೆ ಎಂಬ ಪೂರ್ವಾಗ್ರಹ, ಆಕೆ ತನ್ನ ಹದ್ದುಬಸ್ತಿನಲ್ಲಿರಬೇಕು ಎಂಬ ಯಜಮಾನಿಕೆಯ ಮನೋಭಾವವೇ ಆಕೆಯ ನಿಲುವು, ಅಭಿಪ್ರಾಯಗಳನ್ನು ಗೌರವಿಸದಿರುವ ಮತ್ತು ಆಕೆಯನ್ನು ಸಾರ್ವಜನಿಕವಾಗಿ ಕುಗ್ಗುವಂತೆ ಮಾಡುವ ಮನಸ್ಥಿತಿಗೆ ಕಾರಣವಾಗಿದೆ. ಅದು ದೊಡ್ಡ ಸೆಲಬ್ರಿಟಿಯೇ ಇರಬಹುದು ಅಥವಾ ಸಾಮಾನ್ಯ ಮಹಿಳೆಯೇ ಇರಬಹುದು, ಮೊದಲು ಅಂಥವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವುದು ಇಂಥವರ ಚಾಳಿ. ಇನ್ನು ಆಕೆ ಸಿನಿಮಾ ನಟಿ, ರಾಜಕಾರಣಿಯಾಗಿದ್ದರೆ ಮುಗಿಯಿತು. ಆಕೆ ಬೇರೆಯವರೊಂದಿಗೆ ಮಲಗಿಯೇ ಖ್ಯಾತಿ, ಅವಕಾಶ, ಅಧಿಕಾರ ಪಡೆದಿರುತ್ತಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಘನತೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿ ಅಂಥವರಿಗೆ ಕಾನೂನಿನಡಿ ಸರಿಯಾದ ಪಾಠ ಕಲಿಸುವ ಕೆಲಸ ಮಾಡುವವರು ಕೆಲವೇ ಕೆಲವು ಮಂದಿ. ಒಂದು ಕಾಲದ ಕನ್ನಡದ ಖ್ಯಾತ ನಟಿ, ರಾಜಕಾರಣಿಯೂ ಆಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರಬುದ್ಧ ಹೇಳಿಕೆ, ಪ್ರತಿಕ್ರಿಯೆಗಳಿಂದ ಸೂಕ್ಷ್ಮ ಸಂವೇದನೆಯ ನಟಿ ಎನಿಸಿರುವ ರಮ್ಯಾ ಅವರು ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಸುದ್ದಿಯಾಗಿದ್ದಾರೆ.

2024ರ ಜೂ.8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ 2024ರ ಡಿ.13 ರಂದು ಕರ್ನಾಟಕ ಹೈಕೋರ್ಟ್ ದರ್ಶನ್ ಸೇರಿದಂತೆ ಪವಿತ್ರ ಗೌಡ, ಪ್ರದೂಶ್, ಜಗದೀಶ್, ಲಕ್ಷ್ಮಣ್, ಅನುಕುಮಾರ್ ಹಾಗೂ ನಾಗರಾಜುಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇನ್ನು ಮೇ 21ರಂದು ನ್ಯಾಯಮೂರ್ತಿ ಪಾರ್ದೀವಾಲ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಿಮ್ಮ ಜಾಮೀನು ಯಾಕೆ ರದ್ದುಪಡಿಸಬಾರದು ಎಂದು ಸುಪ್ರೀಂ ಪ್ರಶ್ನೆ ಮಾಡಿ ಹೈಕೋರ್ಟ್ಗೆ ಛೀಮಾರಿ ಹಾಕಿತ್ತು. ಆ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ರಮ್ಯಾ, ಸುಪ್ರೀಂ ಕೋರ್ಟ್ ಜನಸಾಮಾನ್ಯರಿಗೆ ಭರವಸೆಯ ಬೆಳಕು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂಬ ಭರವಸೆಯಿದೆ ಎಂದು ಬರೆದುಕೊಂಡಿದ್ದರು.
ತಕ್ಷಣ ಡಿ ಬಾಸ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ನಟಿ ರಮ್ಯಾ ಬಗ್ಗೆ ಫೇಸ್ ಬುಕ್, ಎಕ್ಸ್ ಖಾತೆ, ಇನ್ಸ್ಟಾಗ್ರಾಮ್ ನಲ್ಲಿ ಮನಸೋ ಇಚ್ಛೆ ಕೆಟ್ಟದಾಗಿ ಕಮೆಂಟ್ ಮಾಡಲು, ಬೆದರಿಕೆ ಹಾಕಲು ಆರಂಭಿಸಿದರು. “ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡ್ತೀವಿ” ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೇ ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡವರಿಗೆ ಉತ್ತರಿಸಿದ್ದ ರಮ್ಯಾ, “ರೇಣುಕಾಸ್ವಾಮಿಗೂ ದರ್ಶನ್ ಅಭಿಮಾನಿಗಳಿಗೂ ವ್ಯತ್ಯಾಸ ಏನಿದೆ? ಸ್ತ್ರೀದ್ವೇಷದ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ” ಎಂದು ಕೇಳಿದ್ದರು. “ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ನಿಮಗೆ ಕೋಪ ಬರುತ್ತೆ. ಆದರೆ, ನಮಗೆ ಅಶ್ಲೀಲ ಸಂದೇಶ ಕಳಿಸಿದರೆ ಕೋಪ ಬರಲ್ವಾ? ನಾವು ಮಹಿಳೆಯರು ಅಲ್ವಾ” ಎಂದು ದರ್ಶನ್ ಅಭಿಮಾನಿಗಳನ್ನ ವಿರುದ್ಧ ಕಿಡಿಕಾರಿದರು. ಅಷ್ಟಕ್ಕೇ ಸುಮ್ಮನಾಗಿಲ್ಲ, ಆ ಕಮೆಂಟ್ಗಳ ಸ್ಕ್ರೀನ್ಶಾಟ್ ಇಟ್ಟುಕೊಂಡು ರಮ್ಯಾ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು. ಅದರಲ್ಲಿ 43 ಕಮೆಂಟ್ಗಳನ್ನು ಮೆನ್ಷನ್ ಮಾಡಲಾಗಿದೆ. ಜೀವ ಬೆದರಿಕೆ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದವರ ಹೆಸರುಗಳನ್ನೂ ನೀಡಿದ್ದಾರೆ. ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ 43 ಅಕೌಂಟ್ ಗಳ ವಿರುದ್ಧ ಎಫ್ಐಆರ್(FIR)ದಾಖಲಾಗಿದೆ. ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 67, 66 ಹಾಗೂ ಬಿಎನ್ಎಸ್ 351(2), 351(3), 352, 75(1)(4), 79 ಅಡಿ ಪ್ರಕರಣ ದಾಖಲು ಆಗಿದೆ. ಈ ಮಧ್ಯೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು ಸುವೋ ಮೊಟೋ ದಾಖಲಿಸಿಕೊಂಡು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕಾನೂನು ಕ್ರಮ ಕೈಗೊಂಡು ವರದಿ ನೀಡುವಂತೆ ಕೇಳಿದ್ದರು.
ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದರೆ, ಮಂಡಳಿಯ ಅಧ್ಯಕ್ಷ ನರಸಿಂಹಲು ಅವರು, “ಬೆದರಿಕೆ ಹಾಕಿದವರು ದರ್ಶನ್ ಫ್ಯಾನ್ಸ್ ಅಂತ ಪುರಾವೆ ಇಲ್ಲ” ಅಂತ ಹೇಳಿ ಸುಮ್ಮನಾದರು. ಇದರ ಮಧ್ಯೆ ನಟ ಚೇತನ್ ಅಹಿಂಸಾ ಅವರ ಫೈಯರ್ (FIRE) ಸಂಸ್ಥೆ ರಮ್ಯಗೆ ಬೆಂಬಲಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ ಹಿರಿಯ ನಟ ಶಿವರಾಜ್ಕುಮಾರ್ ಮತ್ತು ಪತ್ನಿ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಜಂಟಿ ಹೇಳಿಕೆ ಬಿಡುಗಡೆ ಮಾಡಿ ರಮ್ಯಾ ಮೇಲಾಗುತ್ತಿರುವ ಅಶ್ಲೀಲ ದಾಳಿಯನ್ನು ಖಂಡಿಸಿದ್ದಾರೆ.


ರಮ್ಯಾ ಕಾನೂನಾತ್ಮಕ ನಡೆ ಸರಿಯಿದೆ- ಸುಮನಾ ಕಿತ್ತೂರು
ಈ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಕನ್ನಡ ಚಲನಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು, “ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರುವಂತಹ ಕಾಮೆಂಟ್ಗಳು, ಬೆದರಿಕೆ ಹಾಗೂ ಯುವ ಸಮುದಾಯದ ಜವಾಬ್ದಾರಿಯಿಲ್ಲದ ನಡೆಗಳ ವಿಷಯದಲ್ಲಿ ಚಿಂತನೆ ಹುಟ್ಟಿಸುವ ಸಮಯ ಇದಾಗಿದೆ. ಈ ವಿಷಯದಲ್ಲಿ ಚಿತ್ರರಂಗ, ಜನಪ್ರಿಯ ವ್ಯಕ್ತಿಗಳು ಅಥವಾ ಪ್ರಭಾವಶಾಲಿಗಳ ಮೌನ ಕೂಡ ಈ ಸಮಸ್ಯೆಗೆ ಹೆಚ್ಚಿನ ಇಂಬು ನೀಡುತ್ತದೆ. ಈ ಸ್ಟಾರ್ಗಳು ಎಂದು ಅನ್ನಿಸಿಕೊಂಡಿರುವವರಿಂದ ಅವರ ಅಭಿಮಾನಿಗಳಿಗೆ ಸರಿಯಾದ ಸಂದೇಶ ಹೋಗಬೇಕು. ಇದು ಅವರ ನೈತಿಕ ಜವಾಬ್ದಾರಿ ಕೂಡ ಹೌದು. ಈ ವಿಷಯದಲ್ಲಿ ಕಲಾವಿದೆ ರಮ್ಯಾರ ಕಾನೂನಾತ್ಮಕ ನಡೆ ಸರಿಯಾಗಿದೆ”ಎಂದು ಹೇಳಿದರು.

ತೆರೆಯ ಮೇಲಿನ ನಾಯಕ, ತೆರೆಯ ಹಿಂದಿನ ಖಳನಾಯಕ
ನಟ ದರ್ಶನ್ ಸದಾ ಕಾಲ ನೆಗೆಟಿವ್ ವಿಚಾರಗಳಿಗೆ ಹೊಡೆದಾಟ, ಕೊಲೆ ವಿಚಾರಗಳಿಗೆ ಸುದ್ದಿಯಾಗುತ್ತಿರುವ ಖಳನಟ. ಹತ್ತು ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹೊಡೆದ ಪ್ರಕರಣದಲ್ಲಿ ಆಕೆಯ ದೂರು ಆಧರಿಸಿ ಪೊಲೀಸರಿಂದ ಬಂಧನಕ್ಕೊಳಗಾಗಿ ಹತ್ತು ದಿನಗಳ ಕಾಲ ಜೈಲಿನಲ್ಲಿದ್ದರು. ನಂತರ ಇಬ್ಬರೂ ರಾಜಿ ಮಾಡಿಕೊಂಡಿದ್ದರು. ಆನಂತರವೂ ದರ್ಶನ್ ನಡವಳಿಕೆ ಬದಲಾಗಿಲ್ಲ. ನಿರ್ಮಾಪಕರ ಜೊತೆಗೆ ಜಗಳ, ಮಾಧ್ಯಮದವರಿಗೆ ಅಶ್ಲೀಲವಾಗಿ ಬೈದು ಬಾಯ್ಕಾಟ್ ಗೆ ಗುರಿಯಾಗಿದ್ದರು. ಹೋಟೆಲಿನಲ್ಲಿ ಫುಡ್ ಸಪ್ಲಯರ್ಗೆ ಥಳಿಸಿ ಗದ್ದಲ ಎಬ್ಬಿಸಿದ್ದರು. ಇದರ ಜೊತೆಗೆ ಜಗಳ, ಪವಿತ್ರಾ ಗೌಡ- ವಿಜಯಲಕ್ಷ್ಮಿ ಇಬ್ಬರ ನಡುವೆ ಇನ್ಸ್ಟಾಗ್ರಾಮ್ ಜಗಳ ಮುಂದುವರಿದಿತ್ತು. ಕಳೆದ ವರ್ಷ ಜೂನ್ನಲ್ಲಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಶೆಡ್ ಒಂದರಲ್ಲಿ ಕೂಡ ಹಾಕಿ ದರ್ಶನ್, ಪವಿತ್ರ ಮತ್ತು ಅವರ ಗ್ಯಾಂಗ್ ಹೊಡೆದು ಸಾಯಿಸಿದ ಪ್ರಕರಣದಲ್ಲಿ ಐದಾರು ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಆತನ ಅಭಿಮಾನಿಗಳ ಪುಂಡಾಟ ಇನ್ನೂ ನಿಂತಿಲ್ಲ. ರಮ್ಯಾ ವಿಚಾರದಲ್ಲಿ ದರ್ಶನ್ ತಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಬಹುದಿತ್ತು. ಆದರೆ ದರ್ಶನ್ ಆ ಕೆಲಸ ಮಾಡಿಲ್ಲ. ಪರಿಣಾಮವಾಗಿ ಈಗ ನಾಯಕನ ಜೊತೆಗೆ ಆತನ ಹುಚ್ಚು ಅಭಿಮಾನಿಗಳೂ ಕಂಬಿ ಎಣಿಸಬೇಕಾದ ಸ್ಥಿತಿ ಬಂದಿದೆ. ಇದು ಮಿಕ್ಕವರಿಗೆ ಪಾಠವಾಗಬೇಕು.
ಇದನ್ನೂ ಓದಿ ದರ್ಶನ್ ಫ್ಯಾನ್ಸ್ನಿಂದ ಅಶ್ಲೀಲ ಕಾಮೆಂಟ್: ರಮ್ಯಾ ಬೆಂಬಲಕ್ಕೆ ನಿಂತ ಶಿವ ರಾಜ್ಕುಮಾರ್
ವರದಿಗಳು ಏನು ಹೇಳುತ್ತವೆ ಗೊತ್ತೇ?
2020ರ ಪ್ಲಾನ್ ಇಂಟರ್ನ್ಯಾಷನಲ್ ಸಮೀಕ್ಷೆಯ ಪ್ರಕಾರ, 58% ಹೆಣ್ಣುಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳವನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ. 20% ಹೆಣ್ಣುಮಕ್ಕಳು ಕಿರುಕುಳದಿಂದಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ ನಂತಹ ವೇದಿಕೆಗಳಿಂದ ಹೊರ ಹೋಗಿದ್ದಾರೆ. ಕೆಲವರಿಗೆ ಈ ಕಿರುಕುಳವು 8 ವರ್ಷ ವಯಸ್ಸಿನಿಂದಲೇ ಆರಂಭವಾಗಿತ್ತು. ಭಾರತ ಸೇರಿದಂತೆ 22 ದೇಶಗಳ 15-25 ವಯಸ್ಸಿನ 14,000 ಹೆಣ್ಣುಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
UNESCO 2024 GEM ವರದಿಯು ಸಾಮಾಜಿಕ ಮಾಧ್ಯಮವು ಗೌಪ್ಯತೆಗೆ ಮಾರಕ ಮತ್ತು ಸೈಬರ್ ಬುಲ್ಲಿಯಿಂಗ್ನಂತಹ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಒತ್ತಿಹೇಳಿದೆ. ಇದು ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗುತ್ತದೆ. ವಿಶೇಷವಾಗಿ ಮಾನವ ಹಕ್ಕುಗಳು ಅಥವಾ ಅಂಚಿನಲ್ಲಿರುವ ಸಮುದಾಯಗಳಿಗಾಗಿ ಹೋರಾಡುವವರು, ಹೆಚ್ಚಿನ ಕಿರುಕುಳವನ್ನು ಎದುರಿಸುತ್ತಾರೆ ಎಂದು 2024ರ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಮೀಕ್ಷೆ ಹೇಳುತ್ತದೆ. 60% ಯುವ ಕಾರ್ಯಕರ್ತರು ಟ್ರೋಲ್ಗೆ ಒಳಗಾಗುತ್ತಾರೆ. 52% ಮಂದಿ ಬೆದರಿಕೆ ಸಂದೇಶ ಮತ್ತು 5% ಖಾಸಗಿ ಚಿತ್ರ ಹಂಚಿಕೆಯ ಕಿರುಕುಳವನ್ನು ಎದುರಿಸುತ್ತಾರೆ ವರದಿ ತಿಳಿಸಿದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.