ಮಲಯಾಳಂ ಸಿನಿಮಾ ಲೋಕದ ಹಿರಿಯ ನಟ ಮೋಹನ್ ಲಾಲ್ ನಟನೆಯ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಇತ್ತೀಚಿನ ಮಲಯಾಳಂ ಸಿನಿಮಾ ಎಲ್2: ಎಂಪುರಾನ್‌ನ ಸುಮಾರು 17 ದೃಶ್ಯಗಳಿಗೆ ಕತ್ತರಿ ಬೀಳಲಿದೆ. ಗುಜರಾತ್ ಗಲಭೆ ಉಲ್ಲೇಖದ ಬಗ್ಗೆ ಆರ್‌ಎಸ್‌ಎಸ್, ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಚಿತ್ರ ತಂಡ 17 ದೃಶ್ಯಗಳನ್ನು ಬದಲಾಯಿಸಲು ನಿರ್ಧರಿಸಿದೆ.
‘ಬಾಬಾ ಬಜರಂಗಿ’ ಎಂದು ಕರೆಯಲ್ಪಡುವ ಎದುರಾಳಿ (ವಿಲನ್) ಪಾತ್ರದ ಹೆಸರನ್ನು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಕೋಮು ಹಿಂಸಾಚಾರ ನಡೆದಿದೆ. ಈ ಹಿಂಸಾಚಾರವನ್ನು ಹೋಲುವ ದೃಶ್ಯಗಳು ಸಿನಿಮಾದಲ್ಲಿದೆ ಎಂಬ ಕಾರಣಕ್ಕೆ ಬಿಜೆಪಿ, ಆರ್‌ಎಸ್‌ಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? 2002ರ ಗುಜರಾತ್ ಗಲಭೆ ಆರೋಪಿಗಳೇಕೆ ಸರದಿಯಂತೆ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಿದ್ದಾರೆ?
ಮಾರ್ಚ್ 27ರಂದು ಸಿನಿಮಾ ಬಿಡುಗಡೆಯಾಗಿದ್ದು, ಗುಜರಾತ್ ಗಲಭೆ ಹೋಲುವ ಚಿತ್ರಣವಿದ್ದ ಕಾರಣ ಕೆಲವು ದೃಶ್ಯಗಳು ಕಾಲ್ಪನಿಕ ಎಂದು ಉಲ್ಲೇಖಿಸಿದೆ. ಆದರೆ ಬಲರಾಜ್ ಪಟೇಲ್ ಯಾನೆ ಬಾಬಾ ಬಜರಂಗಿ ಎಂಬ ಪಾತ್ರವು ಬಾಬುಭಾಯಿ ಪಟೇಲ್ ಅಲಿಯಾಸ್ ಬಾಬು ಬಜರಂಗಿಗೆ ಹೋಲುವ ಕಾರಣದಿಂದಾಗಿ ಬಲಪಂಥೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ 2002ರ ಗುಜರಾತ್ ಗಲಭೆಯಲ್ಲಿ ಪ್ರಮುಖ ಅಪರಾಧಿ. ವಿಶೇಷವಾಗಿ 97 ಮುಸ್ಲಿಮರನ್ನು ಕೊಂದ ನರೋಡಾ ಪಾಟಿಯಾ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿದೆ.
ಭೀಕರವಾದ ನರೋಡಾ ಪಾಟಿಯಾ ಹತ್ಯಾಕಾಂಡದಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯಗಳ ದೃಶ್ಯಗಳಿರುವ ಕಾರಣ ಬಲಪಂಥೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಸಿನಿಮಾ ತಂಡ 17ಕ್ಕೂ ಅಧಿಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದೆ. ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರದ ಗ್ರಾಫಿಕ್ ದೃಶ್ಯವನ್ನು ಕಡಿಮೆ ಮಾಡಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.
