ಭೋಜ್‌ಪುರಿ ನುಡಿಗಟ್ಟಿನಲ್ಲಿ ಬಚ್ಚನ್ ಟ್ವೀಟ್
ಹಿರಿಯ ನಟನ ಹಾಸ್ಯಕ್ಕೆ ಬೆರಗಾದ ನೆಟ್ಟಿಗರು
ಸಿನಿಮಾ ತಾರೆಯರು ಸೇರಿದಂತೆ ಜಗತ್ತಿನ ಎಲ್ಲ ಗಣ್ಯರ ಅಧಿಕೃತ ಟ್ವಿಟರ್ ಖಾತೆಗಳಿಗೆ ಉಚಿತವಾಗಿ ನೀಡಲಾಗಿದ್ದ ಬ್ಲೂಟಿಕ್ ದೃಢಿಕರಣ ಚಿಹ್ನೆಯನ್ನು ಟ್ವಿಟರ್ ಸಂಸ್ಥೆ ಶುಕ್ರವಾರ ಹಿಂಪಡೆದಿದೆ. ಎಲ್ಲರಂತೆ ತಮ್ಮ ಖಾತೆಯಿಂದಲೂ ಬ್ಲೂಟಿಕ್ ಮಾಯವಾಗಿದ್ದನ್ನು ಕಂಡು ಅಚ್ಚರಿಗೊಳಗಾಗಿರುವ ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ವ್ಯಂಗ್ಯಮಯವಾಗಿ ಸರಣಿ ಟ್ವೀಟ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಬ್ಲೂಟಿಕ್ ಕುರಿತು ಭೋಜ್‌ಪುರಿ ಮಿಶ್ರಿತ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, “ಟ್ವಿಟರ್ ಮಾಲೀಕರೇ ಹೊಸದಾಗಿ ಬ್ಲೂಟಿಕ್ ಪಡೆಯಲು ಹಣವನ್ನು ಕೂಡ ಪಾವತಿಸಿದ್ದೇನೆ. ನನ್ನ ಹೆಸರಿನ ಮುಂದೆ ಈಗಲಾದರೂ ನೀಲಿ ಕಮಲವನ್ನು ಇಡಿ. ನಾನೇ ಅಮಿತಾಬ್ ಬಚ್ಚನ್ ಎನ್ನುವುದು ಜನಕ್ಕೆ ಖಚಿತವಾಗಲಿ. ಈ ಹಿಂದೆಯೇ ಬ್ಲೂಟಿಕ್ ಮರಳಿ ನೀಡಿ ಎಂದು ಕೈಮುಗಿದು ಕೇಳಿದ್ದೇನೆ, ಇನ್ನೇನೂ ಕಾಲು ಬೀಳಲೇ” ಎಂದು ವ್ಯಂಗ್ಯವಾಡಿದ್ದಾರೆ.
ʼಟ್ವಿಟರ್ ಬ್ಲೂʼ ಚಂದಾದಾರಿಕೆ ಹೊಂದಿರುವ ಬಗ್ಗೆ ಅಮಿತಾಬ್ ಬಚ್ಚನ್ ಈ ರೀತಿ ವ್ಯಂಗ್ಯಮಯವಾಗಿ ಟ್ವೀಟ್ ಮಾಡಿದ ಕೆಲ ಗಂಟೆಗಳ ಹೊತ್ತಿಗೆ ಟ್ವಿಟರ್ ಸಂಸ್ಥೆ ನಟನ ಅಧಿಕೃತ ಖಾತೆಯನ್ನು ದೃಡೀಕರಿಸಿ ಬ್ಲೂಟಿಕ್ ಮರುಸ್ಥಾಪಿಸಿದೆ. ಇದಾದ ಬೆನ್ನಲ್ಲೇ ಧನ್ಯವಾದ ತಿಳಿಸಿಲು ಮತ್ತೊಂದು ಟ್ವೀಟ್ ಮಾಡಿರುವ ಬಚ್ಚನ್, “ಮಸ್ಕ್ ಅವರೇ ಧನ್ಯವಾದ, ಕೊನೆಗೂ ನನ್ನ ಹೆಸರಿನ ಮುಂದೆ ನೀಲಿ ಕಮಲ ಕಾಣಿಸುತ್ತಿದೆ. ಇದೇ ಖುಷಿಗೆ ಹಾಡು ಹೇಳಲು ಮನಸ್ಸಾಗುತ್ತಿದೆ. ನನ್ನ ಹಾಡನ್ನು ಕೇಳುತ್ತೀರಾ” ಎಂದು ಪ್ರಶ್ನಿಸಿದ್ದಾರೆ.
ಹಿಂದಿಯ ʼಮೊಹ್ರಾʼ ಸಿನಿಮಾದ “ತೂ ಚೀಜ್ ಬಡಿ ಹೈ ಮಸ್ತ್.. ಮಸ್ತ್.. ತೂ ಚೀಜ್.. ಬಡಿ ಹೈ ಮಸ್ತ್” ಹಾಡಿನ ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸಿ, “”ತೂ ಚೀಜ್ ಬಡಿ ಹೈ ಮಸ್ಕ್.. ಮಸ್ಕ್.. ತೂ ಚೀಜ್.. ಬಡಿ ಹೈ ಮಸ್ಕ್” ಎಂದು ಬರೆದಿರುವ ಬಚ್ಚನ್ ಇದೇ ಸಾಲುಗಳನ್ನು ಎಲಾನ್ ಮಸ್ಕ್‌ಗೆ ಅರ್ಪಿಸಿದ್ದಾರೆ.
ವ್ಯಂಗ್ಯಮಯ ಟ್ವೀಟ್‌ಗಳ ಜೊತೆಗೆ ಎಲಾನ್ ಮಸ್ಕ್ ಬಳಿ ಬೇಡಿಕೆಯೊಂದನ್ನು ಇರಿಸಿ ಟ್ವೀಟ್ ಮಾಡಿರುವ ಅಮಿತಾಬ್, “ಟ್ವಿಟರ್ ಮಾಲೀಕರೇ ದಯವಿಟ್ಟು ಟ್ವಿಟರ್‌ನಲ್ಲಿ ಎಡಿಟ್ ಬಟನ್ ಒಂದನ್ನು ಸೇರಿಸಿಬಿಡಿ. ಟ್ವೀಟ್ ಮಾಡುವಾಗ ಏನಾದರೂ ತಪ್ಪಾಗುತ್ತಲೇ ಇರುತ್ತದೆ. ಹಿತೈಷಿಗಳು ತಪ್ಪು ತಿದ್ದಲು ಹೇಳುತ್ತಲೇ ಇರುತ್ತಾರೆ. ಎಡಿಟ್ ಬಟನ್ ಇಲ್ಲದ್ದಕ್ಕಾಗಿ ಇಡೀ ಟ್ವಿಟ್ ಅನ್ನು ಡಿಲೀಟ್ ಹೊಸದಾಗಿ ಬರೆಯಬೇಕಾಗುತ್ತದೆ. ಹೀಗಾಗಿ ಎಡಿಟ್ ಬಟನ್ ಅನ್ನು ದಯಪಾಲಿಸಿ ನಿಮ್ಮ ಕೈ ಮುಗಿಯುತ್ತೇನೆ” ಎಂದಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಈ ಸರಣಿ ಟ್ವೀಟ್‌ಗಳು ಸದ್ಯ ಭಾರೀ ವೈರಲ್ ಆಗಿದ್ದು, ಹಿರಿಯ ನಟನ ಹಾಸ್ಯವನ್ನು ಕಂಡು ನೆಟ್ಟಿಗರು ಮತ್ತು ಅಭಿಮಾನಿಗಳು ಬೆರಗಾಗಿದ್ದಾರೆ.