ಆಹಾರ ಅಸ್ಪೃಶ್ಯತೆ, ಕರ್ಮಠತನ ಮತ್ತು ಮತೀಯವಾದಿಗಳ ಕ್ಷುಲ್ಲಕ ರಾಜಕಾರಣಕ್ಕೆ ’ಅನ್ನಪೂರ್ಣಿ’ ಸಿನಿಮಾ ಸಶಕ್ತ ಉತ್ತರವನ್ನೇ ನೀಡಿದೆ
ಲೇಡಿ ಸೂಪರ್ ಸ್ಟಾರ್ ನಯನತಾರಾ ಮುಖ್ಯಭೂಮಿಯಲ್ಲಿ ಅಭಿನಯಿಸಿರುವ ’ಅನ್ನಪೂರ್ಣಿ’ ಸಿನಿಮಾ ನೆಟ್‌ಪ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಬಳಿಕ ವಿವಾದ ಸೃಷ್ಟಿಯಾಗಿದೆ. ಡಿಸೆಂಬರ್ 1ರಂದೇ ಚಿತ್ರಮಂದಿರದಲ್ಲಿ ತೆರೆ ಕಂಡಿದ್ದರೂ ಯಾವುದೇ ಪ್ರಶ್ನೆ ಎದ್ದಿರಲಿಲ್ಲ. ಆದರೆ ಒಟಿಟಿಗೆ ಕಾಲಿಟ್ಟ ಬಳಿಕ ವಿವಾದ ಎಬ್ಬಿಸಲಾಗುತ್ತಿದೆ. ಮುಂಬೈನಲ್ಲಿ ಕೆಲವು ಎಕ್ಸ್‌ಟ್ರೀಮ್ ಹಿಂದುತ್ವವಾದಿಗಳು ’ಅನ್ನಪೂರ್ಣಿ ಸಿನಿಮಾ ಲವ್ ಜಿಹಾದ್‌ಗೆ ಪ್ರೋತ್ಸಾಹಿಸಿದೆ, ರಾಮ ಮಾಂಸಾಹಾರಿ ಎಂದು ಬಿಂಬಿಸಲಾಗಿದೆ’ ಎಂದು ದೂರು ದಾಖಲಿಸಿದ್ದಾರೆ. ನಯನತಾರಾ ಸೇರಿ ಏಳು ಮಂದಿಯ ವಿರುದ್ಧ ಎಫ್‌ಐಆರ್ ಕೂಡ ಆಗಿದೆ ಎಂಬ ವರದಿಗಳಾಗಿವೆ.
ಆದರೆ ಸೂಕ್ಷ್ಮವಾಗಿ ನೋಡಿದರೆ ಈ ಸಿನಿಮಾ ಆಹಾರ ಅಸ್ಪೃಶ್ಯತೆ, ಕರ್ಮಠತನ ಮತ್ತು ಮತೀಯವಾದಿಗಳ ಕ್ಷುಲ್ಲಕ ರಾಜಕಾರಣಕ್ಕೆ ಮದ್ದು ಮತ್ತು ಗುದ್ದು ನೀಡಿದೆ. ಸಂಪ್ರದಾಯವಾದಿ ಮನಸ್ಥಿತಿಗಳ ಸಣ್ಣತನಗಳನ್ನು ತೋರುತ್ತಲೇ, ಮನಃಪರಿವರ್ತನೆಯ ಹಾದಿಯನ್ನೂ ಬಿಚ್ಚಿಡುತ್ತದೆ ’ಅನ್ನಪೂರ್ಣಿ’.
ಮದುವೆ ಹೆಸರಲ್ಲಿ ಹೆಣ್ಣಿನ ರೆಕ್ಕೆಗಳನ್ನು ಮುರಿಯುತ್ತಾ ಬಂದಿರುವ ಭಾರತೀಯ ಸಮಾಜವನ್ನು ಇಲ್ಲಿ ನಿಕಷಕ್ಕೆ ಒಡ್ಡಲಾಗಿದೆ. ಇಚ್ಛಿಸಿದಂತೆ ಬದುಕಲು, ಗುರಿಗಳನ್ನು ಮುಟ್ಟಲು ಸಂಪ್ರದಾಯದ ಕಟ್ಟುಪಾಡುಗಳು ಅಡೆತಡೆಯಾದಾಗ ಅದನ್ನೆಲ್ಲ ಮೀರಿ ನಿಲ್ಲಬೇಕೆಂಬ ಸಂದೇಶವನ್ನು ಹೆಣ್ಣುಮಕ್ಕಳಿಗೆ ’ಅನ್ನಪೂರ್ಣಿ’ ರವಾನಿಸುತ್ತಾಳೆ.
ಚೆಫ್ ಆಗಬೇಕೆಂಬ ಅವಳ ಕನಸಿಗೆ ’ಕರ್ಮಠತನ’ವೇ ಅಡ್ಡಿ. ಚೆಫ್ ಆಗಬೇಕಾದರೆ ಮಾಂಸ ತಿನ್ನಬೇಕಾಗುತ್ತೆ, ರುಚಿ ನೋಡಬೇಕಾಗುತ್ತೆ ಎಂಬ ಸಂದಿಗ್ಧತೆಗಳು ಎದುರಾದಾಗ ಬ್ರಾಹ್ಮಣ ಕುಟುಂಬದ ಹೆಣ್ಣೊಬ್ಬಳು ಅದನ್ನೆಲ್ಲ ಎದುರಿಸುವ ಪರಿಯನ್ನು, ಆ ಕಾರಣಕ್ಕೆ ಆಕೆ ಇಡೀ ಕುಟುಂಬದಿಂದಲೇ ದೂರವಾಗಬೇಕಾದ ಸನ್ನಿವೇಶಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಪೂರ್ಣಿಯ ಮುಸ್ಲಿಂ ಗೆಳೆಯ ಫರ್ಹಾನ್ ಹೇಳುವ ಮಾತುಗಳು ಅವಳಲ್ಲಿನ ಮುಜುಗರ, ಹಿಂಜರಿಕೆಗಳನ್ನು ಹೋಗಲಾಡಿಸುತ್ತವೆ. ಆ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಬರುವ ಕೆಲವು ಮಾತುಗಳನ್ನೇ ಇಟ್ಟುಕೊಂಡು, ಧರ್ಮಕ್ಕೆ ಅಪಚಾರ ಎಸಗಲಾಗಿದೆ ಎಂದು ಉಯಿಲೆಬ್ಬಿಸುವುದು ಎಷ್ಟು ಸರಿ? ರಾಮ ಮಾಂಸ ತಿನ್ನುತ್ತಿದ್ದ ಎಂಬುದನ್ನು ಅನೇಕ ಸಂಸ್ಕೃತ ವಿದ್ವಾಂಸರು ಚರ್ಚಿಸಿದ್ದಾರೆ. ’ರಿಡಲ್ಸ್ ಆಫ್ ಹಿಂದೂಯಿಸಂ’ ಬರಹದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಈ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. ಈ ಸತ್ಯವನ್ನು ವಾಲ್ಮೀಕಿ ರಾಮಾಯಣದ ಶ್ಲೋಕವನ್ನೇ ನೇರವಾಗಿ ಉದ್ಗರಿಸಿ ಉಲ್ಲೇಖಿಸುವ ಜಾಣ್ಮೆಯನ್ನು ನಿರ್ದೇಶಕ ನೀಲೇಶ್ ಕೃಷ್ಣ ತೋರಿದ್ದಾರೆ.
ಅನ್ನಪೂರ್ಣಿಯೊಳಗಿನ ಹಿಂಜರಿಕೆಯನ್ನು ಹೋಗಲಾಡಿಸಿ, ಅವಳ ಕನಸು ಮುರುಟಿ ಹೋಗದಂತೆ ನೋಡಿಕೊಳ್ಳುವುದನ್ನೇ ಧರ್ಮದ್ರೋಹ ಎಂಬುದು ಸಂಕುಚಿತ ಮನಸ್ಥಿತಿಯ ಪ್ರತಿರೂಪ. ’ವನವಾಸದಲ್ಲಿ ಹಸಿವಾದಾಗ ನಾಲ್ಕು ಪ್ರಾಣಿಗಳನ್ನು ಬೇಟೆಯಾಡಿ ರಾಮ, ಲಕ್ಷ್ಮಣರು ಸೀತೆಯೊಂದಿಗೆ ಊಟ ಮಾಡಿದ್ದರು’ ಎಂಬುದನ್ನು ವಾಲ್ಮೀಕಿಯೇ ಹೇಳಿರುವುದನ್ನು ಫರ್ಹಾನ್ ಪ್ರಸ್ತಾಪಿಸುತ್ತಾನೆ. ಮುಂದುವರಿದು, “ನನ್ನ ಅಮ್ಮ ಹುಟ್ಟುತ್ತಲೇ ಮುಸ್ಲಿಂ. ಆಕೆ ಚೆನ್ನಾಗಿ ಬಿರಿಯಾನಿ ಮಾಡ್ತಾಳೆ. ಆದರೆ ಅವಳು ವೆಜಿಟೇರಿಯನ್, ಬಿರಿಯಾನಿ ತಿನ್ನಲ್ಲ. ತಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾದದ್ದನ್ನು ಮಾಡಿಕೊಡುವ ವೆಜಿಟೇರಿಯನ್‌ಗಳು ನಮ್ಮ ನಡುವಿದ್ದಾರೆ” ಎಂಬ ಮಾತು ಆಹಾರ ಅಸ್ಪೃಶ್ಯತೆಗೆ ನೀಡಿದ ಮದ್ದಿನಂತೆ ಭಾಸವಾಗುತ್ತದೆ. ಆಹಾರ ಅಸಹಿಷ್ಣುತೆಯನ್ನು ಸಶಕ್ತವಾಗಿ ಪ್ರಶ್ನಿಸಲಾಗಿದೆ. “ಇಷ್ಟವಾದದ್ದನ್ನು ತಿನ್ನೋದು ಬಿಡೋದು ಅವರಿಚ್ಛೆ” ಎಂಬ ಮಾತು, ಆಹಾರದ ಹೆಸರಲ್ಲಿ ವಿವಾದ ಸೃಷ್ಟಿಸುವ ಮತೀಯವಾದಿ ಮನಸ್ಸುಗಳಿಗೆ ನುಂಗಲಾರದ ತುತ್ತಿನಂತೆ ಕಾಣುತ್ತಿದೆ.
ಸಿನಿಮಾದ ಕ್ಲೈಮ್ಯಾಕ್ಸ್ ಹಿಂದೂ- ಮುಸ್ಲಿಂ ಭಾವೈಕ್ಯತೆ, ಮತೀಯವಾದದಾಚೆಗಿನ ಸಾಮಾನ್ಯರ ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುತ್ತದೆ. ಆದರೆ ಹಿಂದೂ ಮತ್ತು ಮುಸ್ಲಿಂ ಎಂಬ ಬೈನರಿಯನ್ನು ಎಳೆದು, ಸಹಜ ಪ್ರೀತಿ, ಸ್ನೇಹಗಳ ನಡುವೆ ರಾಜಕೀಯ ಗೋಡೆಗಳನ್ನು ಕಟ್ಟಿರುವ ಮತೀಯ ರಾಜಕಾರಣಕ್ಕೆ ಇವುಗಳನ್ನೆಲ್ಲ ಸಹಿಸಿಕೊಳ್ಳಲು ಆಗುವುದಿಲ್ಲ. ಧರ್ಮಗಳನ್ನು ಮೀರಿದ ಬಾಂಧವ್ಯ ದೊಡ್ಡದು ಎಂಬ ಸತ್ಯವನ್ನು ಅನ್ನಪೂರ್ಣಿ ಹೇಳುತ್ತದೆ. ಹಿಂದೂಗಳ ಹಬ್ಬಗಳಲ್ಲಿ ಮುಸ್ಲಿಮರು, ಮುಸ್ಲಿಮರ ಹಬ್ಬಗಳಲ್ಲಿ ಹಿಂದೂಗಳು ಭಾಗಿಯಾಗುವುದು ಈ ನೆಲದ ಗುಣ. “ಬಿರಿಯಾನಿಗೆಲ್ಲಿದೆ ಸರ್ ಜಾತಿ ಮತ, ಬಿರಿಯಾನಿ ಇಸ್ ಆನ್ ಎಮೋಷನ್. ನಮಾಜ್ ಮಾಡಿದ್ದು, ಬಿರಿಯಾನಿ ಮಾಡಲು ಹೇಳಿಕೊಟ್ಟವರ ನಂಬಿಕೆ. ಬಿರಿಯಾನಿಯ ಟೇಸ್ಟ್, ನಮಾಜ್ ಮಾಡೋದ್ರಿಂದ ಬರುತ್ತೆ ಅಂತ ಅವರು ನಂಬುತ್ತಾರೆ” ಎಂದು ಕಥಾನಾಯಕಿ ಹೇಳುವ ಮಾತು ಮನುಷ್ಯರನ್ನಾದವರನ್ನು ಭಾವುಕರನ್ನಾಗಿಸುತ್ತದೆ. ಕೋಮುವಾದವನ್ನೇ ಉಸಿರಾಡುವವರಿಗೆ ಮತಾಂತರದ ಪ್ರಚೋದನೆಯಂತೆ ಕಾಣುತ್ತದೆ.
ಈ ಸಿನಿಮಾದಲ್ಲಿ ಕೆಲವು ಮಿತಿಗಳಿವೆ ಎಂಬುದು ಸತ್ಯ. ತನ್ನಿಚ್ಛೆಯ ಉದ್ಯೋಗವನ್ನು ಅರಸಿ, ಇಡೀ ಕುಟುಂಬವನ್ನೇ ಎದುರು ಹಾಕಿಕೊಂಡು ಮದುವೆಯನ್ನೇ ಧಿಕ್ಕರಿಸಿ ಬರುವ ಅನ್ನಪೂರ್ಣಿ, ತನ್ನಿಚ್ಛೆಯ ಗೆಳೆಯನನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ಮಾತ್ರ ಮನೆಯವರ ಅಪ್ಪಣೆಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. ಫರ್ಹಾನ್ ತನಗೆ ಇಷ್ಟವೆಂಬ ಸೂಚನೆಯನ್ನು ಆಕೆ ನೀಡಿದರೂ, ಆತನನ್ನೇ ಮದುವೆಯಾಗ್ತೀನಿ ಎಂಬ ಧೈರ್ಯವನ್ನು ತೋರುವುದಿಲ್ಲ. ಆಹಾರದ ಕಟ್ಟುಪಾಡು ಮೀರಿದ ಆಕೆ, ಮದುವೆಯ ವಿಚಾರದಲ್ಲಿ ಕರ್ಮಠತನವನ್ನು ಉಳಿಸಿಕೊಂಡಂತೆ ಕಾಣುತ್ತದೆ. ಅಥವಾ ಪೋಷಕರ ಒಪ್ಪಿಗೆಯನ್ನು ಆಕೆ ನಿರೀಕ್ಷಿಸುತ್ತಾಳೆ. ಫರ್ಹಾನ್‌ನ ಕುರಿತು ಅನ್ನಪೂರ್ಣಿಯ ಪೋಷಕರು ಮೃದು ನಿಲುವು ತೋರುವ ಮೂಲಕ ಸಿನಿಮಾ ಕೊನೆಯಾಗುತ್ತದೆ. ಬಹುಶಃ ಹಿಂದುತ್ವ ರಾಜಕಾರಣದ ಅಪಾಯಕ್ಕೆ ಹೆದರಿ, ನಿರ್ದೇಶಕರು ಮದುವೆಯ ಕುರಿತು ಸ್ಪಷ್ಟ ನಿಲುವು ತೋರಿಲ್ಲವೇನೋ, ಗೊತ್ತಿಲ್ಲ.
ಈ ಸಿನಿಮಾದಲ್ಲಿ ಗಾಂಧಿಯ ನಡಿಗೆ ಕಂಡು ಬರುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತೀಕ್ಷ್ಣವಾದ ವಿಮರ್ಶೆಗಳಿಂದ ಕರ್ಮಠ ಗಾಂಧಿ ನಿಧಾನಕ್ಕೆ ಹಿಂದೂ ಸಮಾಜದಲ್ಲಿನ ಹುಳುಕುಗಳನ್ನು ಸುಧಾರಿಸುವ ಯತ್ನಗಳನ್ನು ಮಾಡಿದರು. ತಾನೂ ಬದಲಾಗುವ ಪ್ರಯೋಗಗಳನ್ನು ನಡೆಸಿದರು. ಸಂಪ್ರದಾಯವಾದಿ ಕುಟುಂಬವೊಂದು ಗಾಂಧಿಯಂತೆ ಪರಿವರ್ತನೆಯಾಗುವ ಸೂಚನೆ ಇಲ್ಲಿ ಕಂಡು ಬರುತ್ತದೆ.
ಇದನ್ನೂ ಓದಿರಿ: ‘ಅನ್ನಪೂರ್ಣಿ’ ಸಿನಿಮಾದಲ್ಲಿ ರಾಮ ಮಾಂಸಾಹಾರಿ ಉಲ್ಲೇಖ: ನಯನತಾರ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್
ಕೊನೆಯದಾಗಿ ಒಂದು ಮಾತು: ಬ್ರಾಹ್ಮಣ ಹೆಣ್ಣುಮಗಳೊಬ್ಬಳು, ಮುಸ್ಲಿಂ ಗೆಳೆಯನನ್ನು ಪ್ರೀತಿಸಿದರೆ ತಪ್ಪಾದರೂ ಹೇಗಾಗುತ್ತದೆ? ಸಂವಿಧಾನ ಇದಕ್ಕೆ ಅವಕಾಶ ಕೊಟ್ಟಿದೆ. ’ಲವ್ ಜಿಹಾದ್’ ಎಂಬ ಕಾಲ್ಪನಿಕ ಥಿಯರಿಗೆ ಕೇಂದ್ರ ಸರ್ಕಾರದ ಬಳಿಯೇ ದಾಖಲೆಗಳಿಲ್ಲ. ಆದರೂ ಆಗಾಗ್ಗೆ ’ಲವ್ ಜಿಹಾದ್ ಆಗುತ್ತಿದೆ’ ಎಂಬ ಗುಲ್ಲು ಎಬ್ಬಿಸಿ ವಿವಾದ ಸೃಷ್ಟಿಸುವುದು ಸಾಮಾನ್ಯವಾಗಿದೆ. ಸಂವಿಧಾನದ ಬಗ್ಗೆ ಗೌರವ ಇರದವರು ಮಾತ್ರವೇ ಇಂತಹ ವಿವಾದಗಳನ್ನು ಸೃಷ್ಟಿಸಬಲ್ಲರು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.