ಬಾಲಿವುಡ್‌ನ ನಿರ್ದೇಶಕ ಹಾಗೂ ನಟ ಅನುರಾಗ್ ಕಶ್ಯಪ್ ಹಿಂದಿ ಚಿತ್ರ ನಿರ್ದೇಶಕರು ಹಾಗೂ ಬಾಲಿವುಡ್ ಚಿತ್ರೋದ್ಯಮದ ಬಗ್ಗೆ ಪುನಃ ಲೇವಡಿ ಮಾಡಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹಿಂದಿ ಚಿತ್ರೋದ್ಯಮವನ್ನು ಆಡು ಮಾತಿನಲ್ಲಿ ಬಾಲಿವುಡ್ ಎನ್ನುತ್ತಾರೆ. ಪುಷ್ಪಾದಂತ ಸಿನಿಮಾವನ್ನು ತಯಾರಿಸುವಂತ ಬುದ್ಧಿಯನ್ನು ಬಾಲಿವುಡ್ ಹೊಂದಿಲ್ಲ ಎಂದು ತೆಗಳಿದರು.
“ಪ್ರಸ್ತುತ ಹಿಂದಿ ಚಿತ್ರೋದ್ಯಮ ಅಪಾಯಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಅವರಿಗೆ ಏನೂ ಅರ್ಥವಾಗುತ್ತಿಲ್ಲ.ಅವರು ಪುಷ್ಪಾ-2ದಂತಹ ಸಿನಿಮಾವನ್ನು ನಿರ್ಮಿಸಲು ಆಗುವುದಿಲ್ಲ. ಅವರಿಗೆ ಸಾದ್ಯವಿಲ್ಲ, ಏಕೆಂದರೆ ಇಂತಹ ಸಿನಿಮಾಗಳನ್ನು ನಿರ್ಮಿಸಲು ಬುದ್ಧಿಶಕ್ತಿಯ ಕೊರತೆಯಿದೆ. ಸಿನಿಮಾ ನಿರ್ಮಾಣ ಏನು ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಪುಷ್ಪಾ -2 ಸಿನಿಮಾವನ್ನು ಸುಕುಮಾರ್ ತರದವರು ಮಾತ್ರ ನಿರ್ಮಿಸಲು ಸಾಧ್ಯ. ದಕ್ಷಿಣದಲ್ಲಿ ಚಿತ್ರ ನಿರ್ದೇಶಕರಿಗಾಗಿ ಹೂಡಿಕೆ ಮಾಡುತ್ತಾರೆ ಹಾಗೂ ಸಿನಿಮಾಗಳನ್ನು ತಯಾರಿಸಲು ಅವರಿಗೆ ಸಂಪೂರ್ಣ ಅಧಿಕಾರ ನೀಡುತ್ತಾರೆ. ಬಾಲಿವುಡ್‌ನಲ್ಲಿ ಪ್ರತಿಯೊಬ್ಬರು ವಿಶ್ವವನ್ನು ನಿರ್ಮಿಸಲು ಬಯಸುತ್ತಾರೆ. ತಮ್ಮದೆ ಬ್ರಹ್ಮಾಂಡವನ್ನು ರಚಿಸಿಕೊಂಡಿರುವ ಅವರು ಸಿನಿಮಾ ನಿರ್ದೇಶಿಸಿದ ನಂತರ ಅಹಂಕಾರದಿಂದ ತಮ್ಮನ್ನೇ ದೇವರು ಎಂದು ಭಾವಿಸಿಕೊಳ್ಳುತ್ತಾರೆ” ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್, ರಷ್ಮಿಕಾ ಮಂದಣ್ಣ ಮುಖ್ಯ ತಾರಾಗಣದಲ್ಲಿ ಬಿಡುಗಡೆಯಾಗಿರುವ ಪುಷ್ಪಾ 2 ವಿಶ್ವದಾದ್ಯಂತ ಸುಮಾರು 1760 ಕೋಟಿ ರೂ. ಗಳಿಗೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಮೂರನೇ ಹೆಚ್ಚು ಲಾಭ ಗಳಿಕೆ ಕಂಡ ಸಿನಿಮಾವಾಗಿದೆ.
ಇತ್ತೀಚಿಗೆ ಅನುರಾಗ್ ಕಶ್ಯಪ್ ನಿರ್ದೇಶಿಸಿದ ಬಾಲಿವುಡ್ ಚಿತ್ರ ‘ಕೆನಡಿ’ ಯನ್ನು ಬಿಡುಗಡೆ ಮಾಡಲು ಸಾಕಷ್ಟು ಚಿತ್ರಮಂದಿರಗಳು ಅವಕಾಶ ನೀಡಲಿಲ್ಲ. ಇದೇ ಸಿನಿಮಾ ಕಾನ್ ಚಿತ್ರೋತ್ಸವದಲ್ಲಿ ಮೆಚ್ಚುಗೆ ಗಳಿಸಿತು.
ಅನುರಾಗ್ ಕಶ್ಯಪ್ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಚಿತ್ರರಂಗದತ್ತ ಮುಖ ಮಾಡಿದ್ದು, ಲಿಯೋ, ಮಹಾರಾಜ, ವಿಡುದಲೈ ಭಾಗ 2 ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
