ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ, ಈ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಯಾವುದೇ ಅರ್ಥವಿಲ್ಲ. ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆಗಳನ್ನು ಪ್ರದರ್ಶಿಸಲು ಈ ರೀತಿಯ ಸಾಂಸ್ಕೃತಿಕ ವೇದಿಕೆಗಳನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.
ಪ್ರತೀ ವರ್ಷದಂತೆಯೇ ಈ ವರ್ಷವೂ ನಾಡಿನ ಹೆಮ್ಮೆಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸಜ್ಜುಗೊಳ್ಳುತ್ತಿದೆ. ನಾನು ಗೆಳೆಯರಾದ ಚಲಂ ಬೆನ್ನೂರಕರ್(ಸಾಕ್ಷ್ಯಾಚಿತ್ರ ನಿರ್ದೇಶಕರು)ರೊಡನೆ ನೋಡಿದ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ ಬೇರೆಯೇ ಸ್ವರೂಪದ್ದು. ಅಲ್ಲಿ ಹಬ್ಬದ ವಾತಾವರಣದೊಂದಿಗೆ ವಾದ ವಿವಾದಗಳಿರುತ್ತಿದ್ದವು, ಗಂಭೀರವಾದ ಚರ್ಚೆಗಳಾಗುತ್ತಿದ್ದವು, ಪರ ವಿರೋಧಗಳಿರುತ್ತಿದ್ದವು. ಕವಿಗಳು, ಕಲಾವಿದರು, ವಿಮರ್ಶಕರು, ನಾಟಕಕಾರರು, ಸಂಗೀತಗಾರರು ಎಲ್ಲಾ ಕಲಾಕ್ಷೇತ್ರಗಳ ಜನ ಒಟ್ಟಿಗೆ ಸೇರುವ ಒಂದು ವೇದಿಕೆ ಅದಾಗಿರುತ್ತಿತ್ತು. ರಿಕ್ಷಾ ಓಡಿಸುವವರಿಂದ ಹಿಡಿದು ಬುದ್ಧಿಜೀವಿಗಳವರೆಗೆ ಒಂದು ವಾರವಿಡೀ ತಾವು ನೋಡಿದ ಚಿತ್ರಗಳನ್ನು ಚರ್ಚಿಸುತ್ತಿದ್ದರು. ಯಾವುದೇ ಸಿನೆಮಾ ಸಂವಾದಗಳಲ್ಲೂ ಮುಲಾಜಿಲ್ಲದೇ ನೇರವಾಗಿ ಪ್ರಶ್ನಿಸುವ, ಪ್ರತಿರೋಧಗಳನ್ನು ಒಡ್ಡುವ ಮನೋಭಾವವನ್ನು ಅಲ್ಲಿನ ಪ್ರಬುದ್ಧ ಪ್ರೇಕ್ಷಕ ಮತ್ತು ನಿರ್ದೇಶಕ ಗಳಿಸಿಕೊಂಡಿದ್ದಾನೆ. ಅದಕ್ಕೆ ಕಾರಣ ಅಲ್ಲಿಯ ಚಲನಚಿತ್ರ ಸಮಾಜಗಳ ಚಳವಳಿಗಳು ಮತ್ತು ಅವುಗಳ ಸೈದ್ಧಾಂತಿಕ ಬದ್ಧತೆ.
ಈಗಷ್ಟೇ ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗಗಳ ಆಯ್ದ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಎಷ್ಟೊ ಒಳ್ಳೆಯ ಚಿತ್ರಗಳಿಗೆ, ನಿರ್ದೇಶಕರಿಗೆ ಅನ್ಯಾಯವಾಗಿದೆ. ಜೈಶಂಕರ ಅವರ ಚಿತ್ರ ‘ಶಿವಮ್ಮ’ ದಕ್ಷಿಣ ಕೋರಿಯಾದ ಪುಸಾನ್ ಚಿತ್ರೋತ್ಸವದಲ್ಲಿ ಮತ್ತು ಇರಾನಿನ ಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು ಮತ್ತು ಪ್ರಪಂಚದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿತ್ತು. ನಮ್ಮ ಚಿತ್ರೋತ್ಸವ ಸಮಿತಿ ಅದನ್ನು ತಿರಸ್ಕರಿಸಿದೆ. ಕಾರಣ ಕೇಳಿದರೆ ನಿಮ್ಮ ಚಿತ್ರ 2022ರಲ್ಲಿ ಪುಸಾನ್ ಚಿತ್ರೋತ್ಸವದಲ್ಲಿ ಪ್ರಸಸ್ತಿಯನ್ನು ಪಡೆದಿದೆ, ಹೀಗಾಗಿ ಅದನ್ನು 2022ರ ಚಿತ್ರ ಎಂದು ಪರಿಗಣಿಸಿ ಈ ವರ್ಷ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ ಈ ಚಿತ್ರದ ಸೆನ್ಸಾರ್ ಆಗಿರುವುದು 2023ರಲ್ಲಿ. ಯಾವುದೇ ಭಾರತೀಯ ಚಿತ್ರೋತ್ಸವಗಳಲ್ಲಿ ಅವರು ಗಣನೆಗೆ ತೆಗೆದುಕೊಳ್ಳುವುದು ಸೆನ್ಸಾರ್ ಆದ ವರ್ಷವನ್ನು, ಸೆನ್ಸಾರ್ ಆಗದ ಚಿತ್ರಗಳನ್ನು ಸ್ವೀಕರಿಸುವುದೂ ಇಲ್ಲ. ಹಾಗಿರುವಾಗ 2022ರಲ್ಲಿ ಸೆನ್ಸಾರ್ ಆಗದ ಈ ಚಿತ್ರವನ್ನು ಪರಿಗಣಿಸುತ್ತಲೇ ಇರುತ್ತಿರಲಿಲ್ಲ. ನಮ್ಮ ಕನ್ನಡದ ನೆಲದಲ್ಲಿ ಇತ್ತೀಚಿನ ದಿನಗಳಲ್ಲಿ ಸೃಜನಾತ್ಮಕವಾಗಿ, ಪ್ರಾಯೋಗಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವ ಯುವ ನಿರ್ದೇಶರನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ ಅವರುಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪನ್ನು ಮಾಡಿಸುತ್ತಿದ್ದಾರೆ. ಆದರೆ ನಮ್ಮ ಮನೆಯಲ್ಲಿಯೇ ಅವರಿಗೆ ಸ್ಥಾನವಿಲ್ಲವೆಂದರೆ ಅದಕ್ಕೆ ಕಾರಣ ಯಾರು? ನಮ್ಮ ಜನಗಳಿಗೇ ಆ ಚಿತ್ರಗಳನ್ನು ನೋಡುವ ಅವಕಾಶವಿಲ್ಲವೆಂದರೆ, ಅದರ ಉದ್ದೇಶವಾದರೂ ಏನು? ಈ ಪ್ರಶ್ನೆಗಳಿಗೆ ಚಿತ್ರೋತ್ಸವ ಆಯ್ಕೆ ಸಮಿತಿ ಉತ್ತರಿಸಬೇಕಾಗಿದೆ.
ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು
ಅದೇ ರೀತಿ, ಚಿತ್ರ ನಿರ್ದೇಶಕ ಉಮಾಶಂಕರ ಸ್ವಾಮಿಯವರ ಮಕ್ಕಳ ಚಿತ್ರ ‘ಧೂಪದ ಮಕ್ಕಳು’ ಕೂಡಾ ಯಾವುದೇ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಆಯ್ಕೆ ಆಗಿಲ್ಲ. ಇದು ಎಂಥಾ ವ್ಯಂಗ್ಯ ಅಂದರೆ ಉಮಾಶಂಕರ ಸ್ವಾಮಿಯವರು ಈಗಾಲೇ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳೆರಡರಲ್ಲೂ ಸಾಕಷ್ಟು ಪ್ರಯೋಗಗಳನ್ನು ನಿರಂತರವಾಗಿ ಮಾಡಿ ಯಶಸ್ಸನ್ನೂ ಗಳಿಸಿದವರು. 2014ರಲ್ಲಿ ಇದೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ವಿಭಾಗದಲ್ಲಿ ತಮ್ಮ ಚಿತ್ರ ‘ಮುನ್ಸಿಫ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದರು. ಅವರ ಎಲ್ಲಾ ಚಿತ್ರಗಳು ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮವನ್ನು ಒಳಗೊಂಡು ಅನೇಕ ರಾಷ್ಟೀಯ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನೂ ಗಳಿಸಿವೆ. 8 ವರ್ಷಗಳ ನಂತರ ‘ಧೂಪದ ಮಕ್ಕಳು’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಇದು ಮಕ್ಕಳ ಚಿತ್ರವಾದ್ದ ಕಾರಣ ಅದನ್ನು ಆಯ್ಕೆ ಮಾಡುವಾಗ ಬೇರೆಯದೇ ಮಾನದಂಡಗಳು ಬೇಕಾಗುತ್ತವೆ. ಅದನ್ನು ಗಂಬೀರ ಅಥವಾ ಕಮರ್ಶಿಯಲ್ ಚಿತ್ರಗಳಂತೆ ಪರಿಗಣಿಸಲಾಗುವುದಿಲ್ಲ. ಆಯ್ಕೆ ಸಮಿತಿಯ ಮಾನದಂಡಗಳೇನೇ ಇರಲಿ, ಅವರ ಇಲ್ಲಿಯವರೆಗಿನ ಸಾಧನೆಗಳನ್ನೂ ಪರಿಗಣಿಸಬೇಕಾಗುತ್ತದೆ. ಸ್ಪರ್ಧಾತ್ಮಕ ವಿಭಾಗಗಳಲ್ಲಿ ಅಲ್ಲದಿದ್ದರೂ ಬರಿ ಪ್ರದರ್ಶನಕ್ಕಾದರೂ ಆಯ್ದುಕೊಳ್ಳಬೇಕಾಗುತ್ತದೆ.
ಚಿತ್ರೋತ್ಸವಗಳ ಜೊತೆ ಜೊತೆಗೆ ಪರ್ಯಾಯ ಚಲನಚಿತ್ರಗಳು ಹಲವಾರು ಸವಾಲುಗಳನ್ನು ನಿರಂತರವಾಗಿ ಎದುರಿಸಿ ನಿಲ್ಲಬೇಕಾಗಿದೆ. ಸೆನ್ಸಾರ್ ಬೋರ್ಡ್ ಮುಂತಾದ ಸರ್ಕಾರಿ ಸಂಸ್ಥೆಗಳ ಕಿರುಕುಳಗಳನ್ನು ಎದುರಿಸಬೇಕಾಗಿದೆ. ಇತಿಹಾಸದುದ್ದಕ್ಕೂ ಇದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕುತ್ತವೆ. ಕನ್ನಡದ ಹೊಸಅಲೆ ಚಿತ್ರಗಳಿಗೆ ನಾಂದಿ ಹಾಡಿದ ‘ಸಂಸ್ಕಾರ’ ಕೂಡ ಇದಕ್ಕೆ ಹೊರತಾಗಿಲ್ಲ. ಅದು ಸೆನ್ಸಾರ್ ಮಂಡಳಿಯಿಂದ ಸಾಕಷ್ಟು ಕಿರುಕುಳಗಳನ್ನು ಅನುಭವಿಸಬೇಕಾಯಿತು. ನಂತರ ರಾಷ್ಟ್ರಪತಿಗಳ ಮಧ್ಯಸ್ಥಿಕೆಯಿಂದ ಅದು ತೆರೆ ಕಾಣಬೇಕಾಯಿತು. ನಮ್ಮ ಚಿತ್ರೋತ್ಸವಕ್ಕೆ ಚಲನಚಿತ್ರ ವಿಮರ್ಶಕರು, ಸಾಹಿತ್ಯ ಪಂಡಿತರು, ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಬಗ್ಗೆ ಸಾಕಷ್ಟು ಜ್ಞಾನ ಇರುವ ವಿದ್ಯಾಶಂಕರ್ ಅವರು ನಮ್ಮ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿರುವುದು ನಮ್ಮಸೌಭಾಗ್ಯ. ಆದರೆ ಈ ಮೇಲೆ ಉಲ್ಲೇಖಿಸಿದ ವಿಷಯಗಳು ಇವರ ಗಮನಕ್ಕೆ ಬಾರದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಈ ಹಿಂದೆ ಚಿತ್ರ ನಿರ್ದೇಶಕ ಬಾಬು ಈಶ್ವರ್ ಪ್ರಸಾದ್ ಅವರ ಚಿತ್ರ ‘ಗಾಳಿಬೀಜ’ ಸೆನ್ಸಾರ್ ಮಂಡಳಿಯಿಂದ ಸಾಕಷ್ಟು ಕಿರುಕುಳಗಳನ್ನು ಅನುಭವಿಸಿತ್ತು. ಸೆನ್ಸಾರ್ ಅಧಿಕಾರಿ ತಮ್ಮ ಹೊಣೆಗಾರಿಕೆಯನ್ನೂ ಮೀರಿ ಇದು ಫೀಚರ್ ಫಿಲ್ಮೂ ಅಲ್ಲ, ಡಾಕ್ಯುಮೆಂಟರಿಯೂ ಅಲ್ಲ ಎಂದು ತಿರಸ್ಕರಿಸಿದ್ದರು. ಚಿತ್ರದ ನಿರ್ದೇಶಕ ಬಾಬು ಈಶ್ವರ್ ಪ್ರಸಾದ್ ಹಲವಾರು ತಿಂಗಳುಗಳ ಕಾಲ ಅಲೆದಾಡಿ, ಖರ್ಚು ವೆಚ್ಚಗಳ ಹೊರೆಯನ್ನು ಹೊತ್ತು ಪುನರ್ ವಿಮರ್ಶಾ ಸಮಿತಿಯ ಎದುರು ನಿಂತು ಸೆನ್ಸಾರ್ ಸರ್ಟಿಫಿಕೇಟ್ ಪಡೆಯಬೇಕಾಯಿತು. ನಂತರ ಈ ಚಿತ್ರ ಕೂಡ ನಮ್ಮ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ ತಿರಸ್ಕೃತಗೊಂಡಿತ್ತು. ಆ ಸಮಯದಲ್ಲಿ ಸಾಕ್ಷ್ಯಾಚಿತ್ರ ನಿರ್ದೇಶಕರಾಗಿದ್ದ ಚಲಂ ಬೆನ್ನೂರಕರ್ ಅವರ ಮಧ್ಯಸ್ಥಿಕೆಯಿಂದ ಈ ಚಿತ್ರವನ್ನು ಏಷಿಯನ್ ಸ್ಪರ್ಧಾ ವಿಭಾಗಕ್ಕೆ ಆಯ್ದುಕೊಂಡರು. ಅದೂ ಕೂಡ ಆಯ್ಕೆಯ ಪಟ್ಟಿ ಬಿಡುಗಡೆಯಾದ ನಂತರ.

ದೇಶದ ರೈತರು ದಿಲ್ಲಿಯಲ್ಲಿ ನಡೆಸಿದ್ದ ಬೃಹತ್ ಆಂದೋಲನದ ಕುರಿತಾಗಿ ನಿರ್ದೇಶಕ ಕೇಸರಿ ಹರವು ಅವರು ರಚಿಸಿದ್ದ ಸಾಕ್ಷ್ಯಾಚಿತ್ರ ‘ಕಿಸಾನ್ ಸತ್ಯಾಗ್ರಹ’ ಕೂಡ ಕಳೆದ ವರ್ಷ ನಮ್ಮ ಚಿತ್ರೋತ್ಸವದಿಂದ ತಿರಸ್ಕೃತಗೊಂಡಿತ್ತು. ಆಗ ಬಿಜೆಪಿ ಸರ್ಕಾರವಿದ್ದ ಕಾರಣ ಅದನ್ನು ಪ್ರದರ್ಶಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದರು. ಆದರೆ ಈ ವರ್ಷ ಆ ಚಿತ್ರವನ್ನು ಪ್ರದರ್ಶಿಸಲು ಆಹ್ವಾನಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ, ಈ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಯಾವುದೇ ಅರ್ಥವಿಲ್ಲ. ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆಗಳನ್ನು ಪ್ರದರ್ಶಿಸಲು ಈ ರೀತಿಯ ಸಾಂಸ್ಕೃತಿಕ ವೇದಿಕೆಗಳನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.

ಎಂ.ಎಸ್. ಪ್ರಕಾಶ್ ಬಾಬು
ಚಲನಚಿತ್ರ ನಿರ್ದೇಶಕರು, ಕಲಾವಿದರು, ಲೇಖಕರು
what is it that a stray honey bee wants to do in a Godown of cotton? Better return to the flower garden, collect your part of ambrosia if you can …