ಕನ್ನಡ ಬಿಗ್‌ಬಾಸ್-11ರ ಫಿನಾಲೆ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಉತ್ತರ ಕರ್ನಾಟಕದ ಹಳ್ಳಿ ಹುಡುಗ ಹನುಮಂತ ಫಿನಾಲೆ ಪ್ರವೇಶಿಸಿದ್ದಾರೆ. ಆತನೇ ಗೆಲ್ಲಬಹುದು, ಗೆಲ್ಲಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಹನುಮಂತ ಅವರ ವಿಚಾರವಾಗಿ ಇದೇ ಸೀಸನ್‌ನ ಮಾಜಿ ಸ್ಪರ್ಧಿ, ನಟಿ ಹಂಸ ಹನುಮಂತ ಮೀಸಲಾತಿ ಕಾರಣಕ್ಕೆ ಫಿನಾಲೆ ತಲುಪಿದ್ದಾರೆ ಎಂದು ಹೇಳುವ ಮೂಲಕ ತನ್ನಲ್ಲಿರುವ ಮೀಸಲಾತಿ ವಿರೋಧಿ, ಜಾತೀಯತೆಯ ವಿಕೃತಿಯನ್ನು ಹೊರಹಾಕಿದ್ದಾರೆ.
ಹನುಮಂತ ಫೈನಲಿಸ್ಟ್ ಆಗಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಹಂಸ, “ಹನುಮಂತು ಬಿಗ್ ಬಾಸ್ ಫೈನಲ್ ತಲುಪಿರುವುದು ಮೀಸಲಾತಿ ಕಾರಣಕ್ಕೆ. ನಾವು ಶಾಲೆ-ಕಾಲೇಜುಗಳಲ್ಲಿ ಓದುತ್ತಿದ್ದಾಗ ನಾವು ಜನರಲ್ ಕೆಟಗರಿಯವರು ಎಷ್ಟೇ ಓದಿ ದಬಾಕಿದ್ರುನು ಮೊದಲು ‘ಅವರಿಗೇ’ (ದಲಿತರು) ಕೆಲಸ ಸಿಗುತ್ತೆ ಮತ್ತು ನಮ್ಮನ್ನು ಕಡೆಗಣಿಸುತ್ತಾರೆ. ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ” ಎಂದು ತನ್ನಲ್ಲಿರುವ ಜಾತಿಯ ವಿಷ, ಬಡವರ ಕುರಿತ ಅಸಹನೆ, ಹಳ್ಳಿ ಜನರ ಕುರಿತ ವ್ಯಾದಿಯನ್ನು ಹೊರಹಾಕಿದ್ದಾರೆ.
“ಜನ ಯಾರನ್ನಾದರೂ ಇಷ್ಟಪಟ್ಟರೆ ಅವರನ್ನು ತಲೆ ಮೇಲೆ ಹೊತ್ತು ಕುಣಿಸುತ್ತಾರೆ. ಅವನ ಮುಗ್ಧತೆ ಇಷ್ಟ ಆಗಿಯೋ ಅಥವಾ ಆತನಿಗೆ ಸಿಂಪಥಿಯೇ ಪ್ಲಸ್ ಆಗಿರಬಹುದು. ಯಾವುದೇ ರಿಯಾಲಿಟಿ ಶೋ ಹೀಗೆಯೇ ನಡೆಯುತ್ತದೆ. ಬಡವರ ಮನೆ ಮಕ್ಳು, ಹಳ್ಳಿಯಿಂದ ಬಂದಿರೋರು ಸುಲಭವಾಗಿ ಫಿನಾಲೆಗೆ ಹೋಗುತ್ತಾರೆ” ಎಂದು ಹಂಸ ಹೇಳಿದ್ದಾರೆ.
ಹಂಸ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕರವೇ ಮುಖಂಡ ದಿನೇಶ್ ಕುಮಾರ್ ದಿನೂ ಅವರು, “ಈ ಬಾರಿ ಶೋ ಗೆಲ್ಲೋದು ಹನುಮಂತನೇ ಅನ್ನೋದು ಈಗಾಗಲೇ ನಿಶ್ಚಿತವಾಗಿದೆ. ಮ್ಯಾಚ್ ಫಿಕ್ಸಿಂಗ್ ಥರ ಏನಾದರೂ ಆಗದೇ ಇದ್ದರೆ ಹನುಮಂತು ಗೆಲ್ಲೋದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇದೆಲ್ಲ ನೋಡಿಯೇ ಹಂಸ ಕರುಬುತ್ತಿದ್ದಾಳೆ. ಹನುಮಂತು ದಲಿತ ಅನ್ನೋ ಕಾರಣಕ್ಕೆ ತನ್ನ ಜನರಲ್ ಕೆಟಗರಿ ಅವಳಿಗೆ ನೆನಪಿಗೆ ಬಂದಿದೆ. ಅದರ ಜೊತೆ ಜಾತಿ ಅಸಹನೆಯ ವಿಷವೂ ಕೂಡ ಹೊರಗೆ ಬಂದಿದೆ. ಎಲ್ಲ ಬಗೆಯ ಕುತ್ಸಿತ ಮನಸ್ಥಿತಿ, ಕುತಂತ್ರಗಳ ಪ್ರಯೋಗದ ಅನುಭವವಿದ್ದರೂ ಇದ್ಯಾವುದೂ ಗೊತ್ತಿಲ್ಲದ ಲಂಬಾಣಿ ತಾಂಡ್ಯಾದ ಕುರಿಗಾಹಿ ಹುಡುಗ ಹನುಮಂತು ಗೆಲ್ತಾ ಇದ್ದಾನಲ್ಲ ಅನ್ನೋದಷ್ಟೆ ಇವರ ಸಮಸ್ಯೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿಗ್ ಬಾಸ್ ಟೀಮ್ ಹಂಸ ಅವರ ಮೇಲೆ ಜಾತಿನಿಂದನೆ ಕೇಸ್ ಹಾಕಬೇಕು. 3% ಇರೋರು 10% ಮೀಸಲಾತಿ ಪಡೆಯುತ್ತಿರುವಾಗ ಇವಮ್ಮ ಯಾವ್ ಮೀಸಲಾತಿ ಬಗ್ಗೆ ಮಾತಾಡ್ತಾ ಇದ್ದಾಳೆ. ಓದಲ್ಲ ಮಾಡಲ್ಲ, ಸಮಾಜದಲ್ಲಿ ಏನ್ ನಡಿತಾ ಇದೆ ಇತಿಹಾಸ ಹೇಗಿದೆ ಏನು ತಿಳಿದುಕೊಳ್ಳೋದಿಲ್ಲ. ಮೇಕಪ್ ಹಾಕೊಂಡು ಕಂತು ಬಿಟ್ರೇ ದೊಡ್ಡ ಸೆಲೆಬ್ರಿಟಿ ಇವಳು. ಜನ ಅವರವರ ಯೋಗ್ಯತೆಗೆ ತಕ್ಕಂತೆ ಮಾತನಾಡುತ್ತಾರೆ ಅನ್ನೋದಕ್ಕೆ ಇವಳೇ ಸಾಕ್ಷಿ” ಎಂದು ದೀಪಿಕಾ ತಮ್ಮಯ್ಯ ಎಂಬವರು ಕಿಡಿಕಾರಿದ್ದಾರೆ.