ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸಿನ ಬೆನ್ನಲ್ಲೇ, ದೇಶಾದ್ಯಂತ ಬಿಜೆಪಿ ‘ತಿರಂಗಾ ಯಾತ್ರೆ’ ನಡೆಸುತ್ತಿದೆ. ಇಡೀ ಕಾರ್ಯಾಚರಣೆ ಯಶಸ್ಸನ್ನು ಮೋದಿಗೆ ನೀಡಲು, ಮೋದಿಯಿಂದಲೇ ಎಲ್ಲವೂ ಸಾಧ್ಯವೆಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಅದಕ್ಕಾಗಿ, ಮೋದಿ ಅವರ ಭಾವಚಿತ್ರದ ಭಾರೀ ಎತ್ತರದ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಅಂತಹ ಒಂದು ಕಟೌಟ್ ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗಿದೆ. ಆ ಕಟೌಟ್ ಇಟ್ಟುಕೊಂಡು ಮೋದಿ ಮತ್ತು ಬಿಜೆಪಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ತಿರಂಗಾ ಯಾತ್ರೆಯಲ್ಲಿ ಬಳಸಲಾಗುತ್ತಿರುವ ಟ್ಯಾಬ್ಲೋ ಒಂದರಲ್ಲಿ ಮೋದಿ ಭಾವಚಿತ್ರದ ಬೃಹತ್ ‘ಕಟೌಟ್’ ಹಾಕಲಾಗಿದೆ. ಆದರೆ, ಆ ಕಟೌಟ್‌ನಲ್ಲಿ ಬಳಸಲಾಗಿರುವ ಸಂಪೂರ್ಣ ಚಿತ್ರವು ಮೋದಿ ಅವರದ್ದಲ್ಲ. ಕೇವಲ ಮುಖ ಮಾತ್ರವೇ ಮೋದಿ ಅವರದ್ದು, ಉಳಿದ ದೇಹದ ಚಿತ್ರ ಕನ್ನಡದ ಖ್ಯಾತ ನಟ ದಿ. ಪುನೀತ್ ರಾಜ್‌ಕುಮಾರ್ ಅವರದ್ದು.
ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಡೆಯ ಚಿತ್ರ ‘ಜೇಮ್ಸ್’ ಸಿನಿಮಾದಲ್ಲಿ ಭಾರತೀಯ ಸೇನೆಯ ಯೋಧನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಪುನೀತ್ ಅವರು ಸೇನಾ ವಸ್ತ್ರವನ್ನು ಧರಿಸಿದ್ದ ಚಿತ್ರವನ್ನು ಮೋದಿ ಅವರ ಪ್ರಚಾರಕ್ಕಾಗಿ ಬಿಜೆಪಿ ಬಳಸಿಕೊಂಡಿದೆ. ಚಿತ್ರದಲ್ಲಿ ಪುನೀತ್ ಅವರ ಮುಖದ ಚಿತ್ರವನ್ನು ಕಟ್ ಮಾಡಿ, ಅಲ್ಲಿಗೆ ಮೋದಿ ಅವರ ಮುಖದ ಚಿತ್ರವನ್ನು ಪೇಸ್ಟ್ ಮಾಡಲಾಗಿದೆ.
ಪುನೀತ್ ಅವರ ಗಾಂಭೀರ್ಯ, ಗತ್ತಿನ ಭಾವಚಿತ್ರದೊಂದಿಗೆ ಮೋದಿ ಅವರ ಮುಖ ಕಾಣಿಸಿಕೊಂಡಿದೆ. ಆದರೆ, ಪುನೀತ್ ಅವರ ಭಾರೀ ಲುಕ್‌ನ ಚಿತ್ರಕ್ಕೆ ಮೋದಿ ಅವರ ಸಪ್ಪೆ ಮುಖದ ಚಿತ್ರವನ್ನು ಅಂಟಿಸಿ ತಯಾರಿಸಿರುವ ಕಟೌಟ್ ಹಾಸ್ಯಾಸ್ಪದವಾಗಿಯೂ ಕಾಣಿಸುತ್ತಿದೆ. ಹೀಗಾಗಿಯೇ, ನೆಟ್ಟಿಗರು ಮೋದಿ ಮತ್ತು ಬಿಜೆಪಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಮೊದಲಿಗೆ, ಫ್ಯಾಕ್ಟ್‌ಚೆಕ್ ಸುದ್ದಿಸಂಸ್ಥೆ ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ಮೊಹಮ್ಮದ್ ಝುಬೇರ್ ಅವರು ಮೋದಿ ಕಟೌಟ್‌ಗೆ ಬಳಸಲಾಗಿರುವ ಚಿತ್ರವು ಪುನೀತ್ ಅವರ ಜೇಮ್ಸ್ ಚಿತ್ರದ್ದು ಎಂಬುದನ್ನು ಪತ್ತೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“Naked Emperor in borrowed Costume ”.. aren’t you ashamed BJP .. #justasking ಬಾಡಿಗೆ ವೇಷದಲ್ಲಿ ಬೆತ್ತಲೆ ರಾಜ .. ನಾಚಿಕೆಯಾಗೋದಿಲ್ವ .. ಛಿ.. ಛೀ https://t.co/srmogdxKLK
— Prakash Raj (@prakashraaj) May 16, 2025
ಝುಬೇರ್ ಅವರ ಪೋಸ್ಟ್‌ಅನ್ನು ರೀ-ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, “ಬಾಡಿಗೆ ವೇಷದಲ್ಲಿ ಬೆತ್ತಲೆ ರಾಜ .. ನಾಚಿಕೆಯಾಗೋದಿಲ್ವ .. ಛಿ.. ಛೀ” ಎಂದು ಮೋದಿ ಅವರನ್ನು ಛೇಡಿಸಿದ್ದಾರೆ.
ಇನ್ನು, ಝೂಬೇರ್ ಅವರ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, “ಬಿಜೆಪಿ ‘ಜೇಮ್ಸ್’ ಚಿತ್ರದ ನಾಯಕನನ್ನೂ ಬಿಡಲಿಲ್ಲ. ಸಿನಿಮಾದ ಪೋಸ್ಟರ್ಅನ್ನು ಎಡಿಟ್ ಮಾಡಿ ಮೋದಿ ಅವರನ್ನು ಸೂಪರ್ ಸೈನಿಕನನ್ನಾಗಿ ಮಾಡಿದೆ! ತಿರಂಗ ಯಾತ್ರೆಯ ಹೆಸರಿನಲ್ಲಿ ಸಿನಿಮಾ ಕೂಡ ಬಳಕೆಯಾಗುತ್ತಿದೆಯೇ? ಈಗ ಫೋಟೋಶಾಪ್‌ನಿಂದಲೂ ದೇಶಭಕ್ತಿ ಬರುತ್ತದೆಯೇ? ಬಿಜೆಪಿಗರು ಕೆಲಸವಿಲ್ಲದಿದ್ದಾಗ, ಪೋಸ್ಟರ್‌ಗಳನ್ನು ಅಂಟಿಸಬಹುದು!” ಎಂದು ಲೇವಡಿ ಮಾಡಿದ್ದಾರೆ.