ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಲ್ಲೇಶ್ವರಂನ 11 ನೇ ಅಡ್ಡ ರಸ್ತೆಯಲ್ಲಿರುವ ಬಹುಭಾಷಾ ತಾರೆ ಹಿರಿಯ ನಟಿ, ಪದ್ಮಭೂಷಣ ಬಿ ಸರೋಜಾ ದೇವಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ” ಬಿ ಸರೋಜ ದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ. ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಸಿನೆಮಾ ರಂಗ ಪ್ರವೇಶ ಮಾಡಿ, ಸುಮಾರು 70 ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದರು” ಎಂದು ಸ್ಮರಿಸಿದರು.
“ಚಿಕ್ಕವಯಸ್ಸಿನಲ್ಲೇ ‘ಅಭಿನವ ಸರಸ್ವತಿ’ ಬಿರುದು ಇವರಿಗೆ ಲಬಿಸಿತ್ತು. ಅವರು ಮೇರು ನಟಿ. ಬರೀ ಕನ್ನಡದಲ್ಲಿ ಅಷ್ಟೇ ನಟಿಸಲಿಲ್ಲ. ತಮಿಳು, ತೆಲಗು ಹಾಗೂ ಹಿಂದಿ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡ ನಟಿ. ರಾಜ್ಕುಮಾರ್ ಸೇರಿ ಮಹಾನ್ ನಟರ ಜೊತೆ ಅಭಿನಯಿಸಿದ್ದಾರೆ” ಎಂದು ಹೇಳಿದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ
“ಕನ್ನಡ ಚಿತ್ರರಂಗ ಬೆಳೆಯಲು ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ. ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
ರಸ್ತೆಗೆ ಸರೋಜಾದೇವಿ ಹೆಸರು: ಬಿಬಿಎಂಪಿ ಯೊಂದಿಗೆ ಚರ್ಚೆ
ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡಬೇಕೆಂಬ ಆಸೆಯಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಬಿಬಿಎಂಪಿ ಯೊಂದಿಗೆ ಚರ್ಚಿಸುವುದಾಗಿ ಹೇಳಿದರು.
