‘ಆದಿಪುರುಷ್’ ಸಿನಿಮಾದಲ್ಲಿ ಹನುಮಂತನ ಪಾತ್ರಕ್ಕೆ ಕೀಳು ಮಟ್ಟದ ಸಂಭಾಷಣೆ ಬಳಸಿ ಜನರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಕಾಂಗ್ರೆಸ್, ಎಎಪಿ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಆಕ್ರೋಶ ವ್ಯಕ್ತಪಡಿಸಿದೆ.
‘ಆದಿಪುರುಷ್’ ಚಿತ್ರದ ಸಂಭಾಷಣೆಗಾರ ಮನೋಜ್ ಮುಂತಶೀರ್ ಹನುಮಂತನ ಪಾತ್ರಕ್ಕೆ ಕೆಟ್ಟ ರೀತಿಯ ಸಂಭಾಷಣೆಗಳನ್ನು ಬರೆದಿರುವುದರ ವಿರುದ್ಧ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಟ್ವೀಟ್ ಮಾಡಿ, ‘ಆದಿಪುರುಷ್’ ಸಿನಿಮಾದಲ್ಲಿ ಬಳಸಿರುವ ಟಪೋರಿ ಭಾಷೆ (ರಸ್ತೆ ಅಥವಾ ಪುಂಡುಪೋಕರಿಗಳು ಬಳಸುವ ಭಾಷೆ) ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು ಟೀಕಿಸಿದ್ದಾರೆ.
“ನಮ್ಮ ಆರಾಧ್ಯ ಭಗವಾನ್ ಶ್ರೀರಾಮನು ಮರ್ಯಾದಾ ಪುರುಷೋತ್ತಮ ಮತ್ತು ಭಗವಾನ್ ಶ್ರೀ ಹನುಮಂತನು ಸೌಮ್ಯತೆ ಮತ್ತು ಗಂಭೀರತೆಯ ಸಂಕೇತವಾಗಿದ್ದಾನೆ. 1987 ರಲ್ಲಿ ರಮಾನಂದ್ ಸಾಗರ್ ಅವರು ರಾಮಾಯಣ ಧಾರಾವಾಹಿಯನ್ನು ನಿರ್ಮಿಸಿದಾಗ, ಆಗಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು “ರಾಮಾಯಣ’ ಲಕ್ಷಾಂತರ ವೀಕ್ಷಕರ ಹೃದಯ ಮತ್ತು ಮನಸ್ಸನ್ನು ಬೆಳಗಿಸಿತು ಎಂದು ಹೇಳಿದ್ದರು. ಅಂದು ನಿರ್ಮಿಸಿದ ಧಾರಾವಾಹಿಯು ಭಾರತದ ಶ್ರೇಷ್ಠ ಸಂಸ್ಕೃತಿ, ಸಂಪ್ರದಾಯ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿಕೊಟ್ಟಿತ್ತು” ಎಂದು ತಿಳಿಸಿದರು.
“ಈಗ ನಿರ್ಮಿಸಿರುವ ‘ಆದಿಪುರುಷ್’ ಸಿನಿಮಾವು ಟಪೋರಿ ಭಾಷೆಯಿಂದ ಕೋಟ್ಯಂತರ ಜನರ ನಂಬಿಕೆಗೆ ಘಾಸಿ ಮಾಡಿದೆ. ಆಗ ಸಮಾಜದ ಮನಸ್ಸು ಮತ್ತು ಹೃದಯಗಳಲ್ಲಿ ರಮಾನಂದ ಸಾಗರ್ ಅವರು ಸೀತಾರಾಮ್ ಅವರ ಆಕರ್ಷಕ ಚಿತ್ರಣವನ್ನು ಅಚ್ಚೊತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಯುರೋಪಿಯನ್ ಎಸ್ಸೇ ಪ್ರೈಜ್’ ಪ್ರಶಸ್ತಿಗೆ ಭಾಜನರಾದ ಅರುಂಧತಿ ರಾಯ್
“ಇದೇ ಧರ್ಮಕ್ಕೂ ಧರ್ಮದ ವ್ಯವಹಾರಕ್ಕೂ ಇರುವ ವ್ಯತ್ಯಾಸ. ನಿಮ್ಮ ಹೊಗಳುಭಟ್ಟತನದಿಂದಾಗಿ ಅಗ್ಗದ ಜನಪ್ರಿಯತೆಯನ್ನು ಪಡೆಯುತ್ತೀರಿ. ದೇಶದಲ್ಲಿ ದೊಡ್ಡ ಪ್ರದರ್ಶನಗಳು ಸಹ ಲಭ್ಯವಿವೆ. ಆದರೆ ಪ್ರತಿಭೆಯ ಕೊರತೆಯು ಖಂಡಿತವಾಗಿಯೂ ಸಿನಿಮಾದಲ್ಲಿ ಕಂಡು ಬರುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುಪ್ರಿಯಾ ಶ್ರೀನಾತೆ ಅವರು ತಮ್ಮ ಟ್ವೀಟ್‌ನಲ್ಲಿ ರಾಜೀವ್ ಗಾಂಧಿ ಅವರು ರಮಾನಂದ್ ಸಾಗರ್ ಅವರನ್ನು ಭೇಟಿ ಮಾಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ, “ಮನರಂಜನೆಯ ಹೆಸರಿನಲ್ಲಿ ನಮ್ಮ ಪೂಜ್ಯ ದೇವರುಗಳಿಗೆ ಕೆಟ್ಟ ಭಾಷೆ ಬಳಸಿರುವುದು ಪ್ರತಿಯೊಬ್ಬ ಭಾರತೀಯನ ಸಂವೇದನೆಗಳಿಗೆ ನೋವುಂಟು ಮಾಡುತ್ತದೆ. ಸಂಭಾಷಣೆಗಾರ ಮನೋಜ್ ಮುಂತಶೀರ್ ಹಾಗೂ ಚಿತ್ರ ನಿರ್ದೇಶಕ ಓಂ ರಾವುತ್ ಅವರು ಸಿನಿಮಾದಲ್ಲಿ ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಎಎಪಿ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್, “ಈ ಚಿತ್ರವು ರಾಮ, ಸೀತಾ ದೇವತೆ ಮತ್ತು ಹನುಮಾನ್ ದೇವರಿಗೆ ಮತ್ತು ಹಿಂದೂ ಸಮಾಜಕ್ಕೆ “ಘೋರ ಅವಮಾನ” ಮಾಡಿದೆ. ಸಿನಿಮಾಕ್ಕೆ ಬಿಜೆಪಿ ಅನುಮತಿ ನೀಡಿದೆ. ಇಂತಹ ಚಿತ್ರ ನಿರ್ಮಾಣ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ದೇಶದ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಲಂಕಾ ರಾಜ ರಾವಣನ ಮಗ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವ ದೃಶ್ಯವು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ‘ಕಪಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭೀ ತೇರೆ ಬಾಪ್ ಕಿ, ತೋ ಜಲೇಗಿ ಭೀ ತೇರೆ ಬಾಪ್ ಕಿ ( ಬಟ್ಟೆ ನಿಮ್ಮಪ್ಪಂದು, ಎಣ್ಣೆ ನಿಮ್ಮಪ್ಪಂದು, ಬೆಂಕಿ ನಿಮ್ಮಪ್ಪಂದು, ಉರಿಯುವುದು ನಿಮ್ಮಪ್ಪಂದು ) ಎಂಬ ಕೀಳು ಮಟ್ಟದ ಸಂಭಾಷಣೆಯು ದೇಶಾದ್ಯಂತ ವಿವಾದ ಸೃಷ್ಟಿಸಿದೆ.
“ಆದಿಪುರುಷ್” ಸಿನಿಮಾವನ್ನು ಓಂ ರಾವುತ್ ನಿರ್ದೇಶಿಸಿದ್ದು, ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಆದಿಪುರುಷ್’ ಬಿಡುಗಡೆಗೂ ಮುನ್ನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಚಿತ್ರದ ಯಶಸ್ಸಿಗೆ ಶುಭ ಕೋರಿದ್ದರು.
ಸಂಭಾಷಣೆ ಬದಲಿಸಲು ಚಿತ್ರತಂಡ ನಿರ್ಧಾರ
ವಿವಾದಕ್ಕೆ ಗುರಿಯಾಗಿರುವ ಸಿನಿಮಾದ ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿರ್ಮಾಪಕರು
ನಿರ್ಧರಿಸಿರುವುದಾಗಿ ಚಿತ್ರದ ಸಂಭಾಷಣಕಾರ ಮನೋಜ್ ಮುಂತಶೀರ್ ತಿಳಿಸಿದ್ದಾರೆ.
ಹಿಂದು ಮಹಾಕಾವ್ಯ ರಾಮಾಯಣ ಆಧಾರಿತ, ಪ್ರಭಾಸ್ ನಟನೆಯ, ಬಹುತಾರಾಗಣದ ‘ಆದಿಪುರುಷ’ ಸಿನಿಮಾಕ್ಕೆ ಮನೋಜ್ ಅವರು ಹಿಂದಿ ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ. ತಿದ್ದುಪಡಿ ಮಾಡಿದ ಸಾಲುಗಳನ್ನು ಈ ವಾರದೊಳಗೆ ಚಿತ್ರಕ್ಕೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘ನಿಮ್ಮ ಭಾವನೆಗಳಿಗಿಂತ ನನಗೆ ದೊಡ್ಡದು ಏನೂ ಇಲ್ಲ. ನನ್ನ ಸಂಭಾಷಣೆಗಳ ಪರವಾಗಿ ನಾನು ಲೆಕ್ಕವಿಲ್ಲದಷ್ಟು ವಾದಗಳನ್ನು ಮಂಡಿಸಬಲ್ಲೆ. ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾ ಪಕ ನಿರ್ದೇಶಕರು ಸಂಭಾಷಣೆಯನ್ನು ಬದಲಿಸಲು ನಿರ್ಧರಿಸಿದ್ದೇವೆ. ನಿಮ್ಮನ್ನು ನೋಯಿಸುವ ಸಂಭಾಷಣೆಗಳನ್ನು ಕತ್ತರಿ ಹಾಕಿ ಪರಿಷ್ಕೃತ ಸಂಭಾಷಣೆಗಳನ್ನು ಈ ವಾರ ಚಿತ್ರಕ್ಕೆ ಸೇರಿಸಲಾಗುವುದು’ ಎಂದು ಮನೋಜ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.