ಸುದೀಪ್ ಕುರಿತ ಮಾನಹಾನಿ ಸುದ್ದಿ ಪ್ರಸಾರಕ್ಕೆ ಕೋರ್ಟ್ ತಡೆ
ಕಿಡಿಗೇಡಿಗಳ ವಿರುದ್ಧದ ಮುನ್ನೆಚ್ಚರಿಕೆ ಕ್ರಮ ಎಂದ ಸುದೀಪ್
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚ ಸುದೀಪ್, ತಮ್ಮ ಬಗ್ಗೆ ಯಾವುದೇ ರೀತಿಯ ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ತಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ತಾವು ಈ ನಿಲುವು ತಾಳಿರುವುದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಸುದೀಪ್, ತಮ್ಮ ಬಗ್ಗೆ ಮಾಧ್ಯಮಗಳು ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆ ಕೋರಿ 21ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ನಟನಿಗೆ ಸಂಬಂಧಿಸಿದ ಯಾವುದೇ ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಸುದೀಪ್, “ನನ್ನ ಮತ್ತು ನಿಮ್ಮ ಅವಿನಾಭಾವ ಸಂಬಂಧ ಒಂದು ಕುಟುಂದಂತದ್ದು. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ನನ್ನದಲ್ಲದ, ತಿರುಚಿದ ವಿಡಿಯೋ ತುಣುಕುಗಳನ್ನು ಹರಿಬಿಟ್ಟು ನನ್ನ ಚಾರಿತ್ರ್ಯವಧೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಕೇವಲ ಸಾಮಾಜಿಕ ಮಾಧಮಗಳಿಗೆ ಸುದ್ದಿ ಪ್ರಸಾರಕ್ಕೆ ತಡೆ ನೀಡಲು ಬರುವುದಿಲ್ಲ. ವಕೀಲರ ಸಲಹೆಯ ಮೇರೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ತಂದಿದ್ದೇನೆ. ಅನ್ಯತಾ ಭಾವಿಸಬೇಡಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧೋನಿ ನಿರ್ಮಾಣದ ತಮಿಳು ಸಿನಿಮಾ ಫಸ್ಟ್ ಲುಕ್ ಬಿಡುಗಡೆ
ಇತ್ತೀಚೆಗೆ ಸುದೀಪ್ ಅವರ ನಿವಾಸಕ್ಕೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ನಟನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕಿದ್ದರು. ಘಟನೆಗೆ ಸಂಬಂಧಿಸಿ ಸುದೀಪ್ ಅವರ ಆಪ್ತ ಸಹಾಯಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದರು. ನಂತರ ಪ್ರಕರಣ ʼಸಿಸಿಬಿʼಗೆ ವರ್ಗಾವಣೆಗೊಂಡಿತ್ತು. ಸದ್ಯ ಪ್ರಕರಣದ ತನಿಖೆ ಜಾರಿಯಲ್ಲಿದೆ. ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಅಪರಿಚಿತರು ಸುದೀಪ್ ಮನೆ ಎದುರುಗಿನ ಅಂಚೆ ಪೆಟ್ಟಿಗೆಯಲ್ಲಿ ಬೆದರಿಕೆ ಪತ್ರಗಳನ್ನು ಇರಿಸಿ ಸ್ಥಳದಿಂದ ಕಾಲ್ಕಿತ್ತ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಕೃತ್ಯಕ್ಕೆ ದುಷ್ಕರ್ಮಿಗಳು ಕೆಂಗೇರಿ ಮೂಲದ ವ್ಯಕ್ತಿಯೊಬ್ಬರ ಕಾರಿನ ನಂಬರ್ ಪ್ಲೇಟ್ ಅನ್ನು ನಕಲು ಮಾಡಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಪರ ಬೆಂಬಲ ಘೋಷಿಸಿ ಇತ್ತೀಚೆಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಸುದೀಪ್, ತಮಗೆ ಬಂದಿರುವ ಬೆದರಿಕೆ ಪತ್ರದ ಹಿಂದೆ ಚಿತ್ರರಂಗದವರ ಕೈವಾಡವಿದೆ. ಶೀಘ್ರದಲ್ಲೇ ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದಿದ್ದರು.